ಕರ್ನಾಟಕದಲ್ಲಿ ದಿಢೀರ್ ಗುಟ್ಕಾ, ಪಾನ್ ಮಸಾಲಾ ನಿಷೇಧ ಆದೇಶ ಹಿಂಪಡೆದ ಸರ್ಕಾರ
ಬೆಂಗಳೂರು, ಆಗಸ್ಟ್ 14: ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ರಾಜ್ಯದಲ್ಲಿ ಒಂದು ವರ್ಷದ ಮಟ್ಟಿಗೆ ಗುಟ್ಕಾ, ಪಾನ್ ಮಸಾಲಾ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶವನ್ನು ಹಿಂಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ಮಾರಾಟದ ಮೇಲೆ ವಿಧಿಸಲಾಗಿದ್ದ ಒಂದು ವರ್ಷದ ನಿಷೇಧದ ಆದೇಶವನ್ನು ಕರ್ನಾಟಕ ಸರ್ಕಾರ ದಿಢೀರ್ ಹಿಂಪಡೆದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಹೊರಡಿಸಲಾಗಿದ್ದ ಈ ನಿಷೇಧಿತ ಅಧಿಸೂಚನೆಯನ್ನು ಕೇವಲ ಎರಡೇ ದಿನಗಳಲ್ಲಿ ವಾಪಸ್ ಪಡೆದುಕೊಂಡಿರುವುದು ಭಾರಿ ಕುತೂಹಲ ಮೂಡಿಸಿದೆ.

ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಒಂದು ವರ್ಷದ ಮಟ್ಟಿಗೆ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ರಾಜ್ಯಾದ್ಯಂತ, ವಿಶೇಷವಾಗಿ ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರು ಮತ್ತು ಶಾಸಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ರಾಜ್ಯ ಸರ್ಕಾರದ ಮೇಲೆ ಒತ್ತಡ..
ಪಾನ್ ಮಸಾಲಾ ಮತ್ತು ಗುಟ್ಕಾ ತಯಾರಿಕೆಯಲ್ಲಿ ಅಡಿಕೆಯನ್ನು ಪ್ರಮುಖ ಕಚ್ಚಾವಸ್ತುವಾಗಿ ಬಳಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿದರೆ ಅಡಿಕೆ ಬೆಲೆ ಕುಸಿದು, ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂಬ ಭೀತಿ ಎದುರಾಗಿತ್ತು. ಆದ್ದರಿಂದ ಅಡಿಕೆ ಬೆಳೆಯುವ ಪ್ರದೇಶಗಳ ಪ್ರಮುಖ ರಾಜಕೀಯ ನಾಯಕರು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದರು. ಬೆಳೆಗಾರರ ಹಿತದೃಷ್ಟಿಯಿಂದ ನಿಷೇಧವನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ರಾಜ್ಯಾದ್ಯಂತ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ
ಸರ್ಕಾರ ನಿಷೇಧ ಹೇರಿದ ಸುದ್ದಿ ಹರಿದಾಡುತ್ತಿದ್ದಂತೆಯೇ ವಿವಿಧ ಜಿಲ್ಲೆಗಳಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಗುಟ್ಕಾ ಸಿಗುವುದಿಲ್ಲ ಎಂಬ ಭಯದಲ್ಲಿ ಜನರು ಕಂತೆ ಕಂತೆ ಹಣ ಸುರಿದು ಗೋಣಿ ಚೀಲಗಳಲ್ಲಿ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಮುಗಿಬಿದ್ದಿದ್ದರು. ಇದರ ಲಾಭ ಪಡೆದ ಹಲವು ವ್ಯಾಪಾರಿಗಳು ಕದ್ದುಮುಚ್ಚಿ 4 ಪಟ್ಟು ಹೆಚ್ಚು ಬೆಲೆಗೆ ಗುಟ್ಕಾ ಮಾರಾಟ ಮಾಡಲು ಶುರು ಮಾಡಿದ್ದರು.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಅಡಿಕೆ ಬೆಳೆಗಾರರು
ತಂಬಾಕು ಮತ್ತು ನಿಕೋಟಿನ್ ನಿಯಂತ್ರಣ ಹಾಗೂ ಅಡಿಕೆ ಬೆಳೆಗಾರರ ಜೀವನೋಪಾಯ ಈ ಎರಡರ ನಡುವಿನ ಹಗ್ಗಜಗ್ಗಾಟದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ನಿಷೇಧದ ಆದೇಶವನ್ನು ಹಿಂಪಡೆದಿದೆ. ಈ ಮೂಲಕ ಸದ್ಯಕ್ಕೆ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧದ ಭೀತಿಯಿಂದ ಅಡಿಕೆ ಬೆಳೆಗಾರರು ಹಾಗೂ ತಂಬಾಕು ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಅಡಿಕೆ ಬೆಳೆಗಾರರಲ್ಲಿ ಕಾಡುತ್ತಿದ್ದ ಆತಂಕ ದೂರ ಆದಂತಾಗಿದೆ.
ಇದರಲ್ಲಿ ಕರ್ನಾಟಕವೇ ನಂಬರ್ 1..
ಭಾರತದಲ್ಲೇ ಕರ್ನಾಟಕ ರಾಜ್ಯವು ಅಡಿಕೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯ ಪೈಕಿ ಶೇಕಡಾ 70ರಿಂದ 75 ರಷ್ಟು ಪಾಲು ರಾಜ್ಯದ್ದೇ ಆಗಿದೆ. ಇಲ್ಲಿನ ಸುಮಾರು 5 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಮಲೆನಾಡು, ಕರಾವಳಿ ಹಾಗೂ ಬಯಲುಸೀಮೆಯ ಪ್ರಮುಖ ಜಿಲ್ಲೆಗಳ ರೈತ ಕುಟುಂಬಗಳಿಗೆ ಅಡಿಕೆಯೇ ಪ್ರಮುಖ ಜೀವನಾಧಾರವಾಗಿದೆ. ಆದರೆ ಈಗ ಸರ್ಕಾರದ ನಿಷೇಧದ ನಿರ್ಧಾರವು ಬೆಳೆಗಾರರ ಹೊಟ್ಟೆ ಮೇಲೆ ಹೊಡೆದಂತಾಗಿತ್ತು.
ರಾಜ್ಯದಲ್ಲೇ ಅತ್ಯಧಿಕ ಅಡಿಕೆ ಬೆಳೆಯುವ ಜಿಲ್ಲೆಯಾಗಿ ಶಿವಮೊಗ್ಗ ಗುರುತಿಸಿಕೊಂಡಿದ್ದು, ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬ ಹಾಗೂ ಶಿಕಾರಿಪುರದಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ. ಅದರಲ್ಲೂ ದಾವಣಗೆರೆ ಜಿಲ್ಲೆಯ ಚನ್ನಗಿರಿಯನ್ನು ಅಡಿಕೆಯ ನಾಡು ಎಂದೇ ಕರೆಯಲಾಗುತ್ತದೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಪ್ರದೇಶಗಳು ಸಹ ಅಡಿಕೆಗೆ ಹೆಸರುವಾಸಿಯಾಗಿದ್ದು, ಶಿರಸಿ ಅಡಿಕೆಗೆ ಜಿಐ ಟ್ಯಾಗ್ ಮಾನ್ಯತೆಯೂ ಸಿಕ್ಕಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲೂ ಈಗ ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈಗ ಇವರಿಗೆಲ್ಲಾ ನೆಮ್ಮದಿ ಸುದ್ದಿ ಸಿಕ್ಕಂತಾಗಿದೆ.


Click it and Unblock the Notifications
