ANMTC ಮುಚ್ಚಲು ಸರ್ಕಾರದ ತೀರ್ಮಾನ: ನರ್ಸಿಂಗ್ ಕೋರ್ಸ್ ಸ್ಥಗಿತ
ಬೆಂಗಳೂರು, ಏಪ್ರಿಲ್ 29: ಕರ್ನಾಟಕ ಸರ್ಕಾರ ಎಎನ್ಎಂಟಿಸಿಗಳನ್ನು ಮುಚ್ಚುವ ತೀರ್ಮಾನವನ್ನು ಕೈಗೊಂಡಿದೆ. ಪ್ರಸ್ತುತ 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ 20 ಕೇಂದ್ರಗಳಲ್ಲಿ ಒಟ್ಟು 430 ಅಭ್ಯರ್ಥಿಗಳು ಈ ಕೋರ್ಸ್‌ಗೆ ದಾಖಲಾಗಿದ್ದರು. ಎಎನ್ಎಂಟಿಸಿಗಳಲ್ಲಿನ ಅಧಿಕಾರಿ/ ಸಿಬ್ಬಂದಿಗಳನ್ನು ಕರ್ತವ್ಯದಿಂದ ವಾಪಸ್ ಪಡೆದು, ಇಲಾಖಾ ಕರ್ತವ್ಯಗಳನ್ನು ಕಾರ್ಯ ನಿರ್ವಹಣೆ ಮಾಡಲು ಸೂಚನೆಯನ್ನು ನೀಡಲಾಗಿದೆ, ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಪ್ರದೀಪ್ ಕುಮಾರ್ ಬಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ರಾಜ್ಯದಲ್ಲಿರುವ Auxiliary Nursing Midwife Training Centers (ANMTC) ಗಳನ್ನು ಸ್ಥಗಿತಗೊಳಿಸುವ/ ಮುಚ್ಚುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಪ್ರಸ್ತಾವನೆ ಏನಿತ್ತು?; ರಾಜ್ಯದಲ್ಲಿ ಒಟ್ಟು 20 ANMTC ಕೇಂದ್ರಗಳಿದ್ದು, ಪ್ರತಿ ಕೇಂದ್ರದಲ್ಲಿ ತಲಾ 30 ವಿದ್ಯಾರ್ಥಿಗಳಂತೆ ಒಟ್ಟು 600 ವಿದ್ಯಾರ್ಥಿಗಳ ಪ್ರವೇಶಾತಿ ಸಾಮರ್ಥ್ಯವಿದ್ದು, ಸದರಿ ಕೇಂದ್ರದಲ್ಲಿ ದಾಖಲಾದ ಅಭ್ಯರ್ಥಿಗಳಿಗೆ 2 ವರ್ಷದ ANM ಕೋರ್ಸ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ 2025-26ನೇ ಸಾಲಿನಲ್ಲಿ ಎಲ್ಲಾ 20 ಕೇಂದ್ರಗಳಲ್ಲಿ ಒಟ್ಟು 430 ಅಭ್ಯರ್ಥಿಗಳು ದಾಖಲಾಗಿರುತ್ತಾರೆ ಎಂದು ಹೇಳಿದೆ.
ಭವಿಷ್ಯದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಈ ಹುದ್ದೆಗಳಿಗೆ ANM ವಿದ್ಯಾರ್ಹತೆಯನ್ನು ತಿದ್ದುಪಡಿ ಮುಖಾಂತರ ತೆಗೆದುಹಾಕಲು ಉದ್ದೇಶಿಸಿರುವುದರಿಂದ ರಾಜ್ಯದ 20 ANMTC ಕೇಂದ್ರಗಳಲ್ಲಿನ ANM ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಿ BSc Nursing/ GNM ಕೋರ್ಸ್‌ಗೆ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಲು ಹಾಗೂ ಕಡಿಮೆ ಅಭ್ಯರ್ಥಿಗಳು ದಾಖಲಾಗಿರುವ ANMTC ಕೇಂದ್ರಗಳನ್ನು ಮುಚ್ಚಿ, ಮುಚ್ಚಲ್ಪಡುವ ಕೇಂದ್ರಗಳಲ್ಲಿನ ಅಭ್ಯರ್ಥಿಗಳನ್ನು ಹತ್ತಿರವಿರುವ ANMTC ಕೇಂದ್ರಗಳಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿರುತ್ತದೆ.
ಪ್ರಸ್ತುತ ರಾಜ್ಯದ 20 ANIMTC ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು (PHCO) 25, ಆರೋಗ್ಯ ನಿರೀಕ್ಷಣಾಧಿಕಾರಿ (HIO) 10, ಶುಶೂಷಾಧಿಕಾರಿಗಳು 33, ಗ್ರೂಪ್-ಡಿ 14, ವಾಹನ ಚಾಲಕರು 1 ಕಾರ್ಯನಿರತ ಬಲವನ್ನು ಹೊಂದಿದೆ.
2026-27ನೇ ಸಾಲಿನಿಂದ ಎಲ್ಲಾ ANMTC ಕೇಂದ್ರಗಳನ್ನು ಸ್ಥಗಿತಗೊಳಿಸಿ ಅಥವಾ ಮುಚ್ಚಿ ಮತ್ತು ಪ್ರಸಕ್ತ ಸಾಲಿನಲ್ಲಿ ಕಡಿಮೆ ಅಭ್ಯರ್ಥಿಗಳು ದಾಖಲಾದ ತರಬೇತಿ ಕೇಂದ್ರಗಳನ್ನು ಮುಚ್ಚಿ, ಸದರಿ ಕೇಂದ್ರಗಳಲ್ಲಿ ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿರುವ ಮೇಲ್ಕಂಡ ಸಿಬ್ಬಂದಿ ವರ್ಗದವರನ್ನು ಇಲಾಖೆಗೆ ಹಿಂಪಡೆದು ಇಲಾಖಾ ಕರ್ತವ್ಯಗಳಲ್ಲಿ ಕಾರ್ಯ ನಿರ್ವಹಿಸಲು ಬಳಸಿಕೊಳ್ಳಬಹುದಾಗಿದ್ದು, ಇದರಿಂದ ಇಲಾಖೆಗೆ ಹೆಚ್ಚುವರಿ ಮಾನವ ಸಂಪನ್ಮೂಲ ಸೇವೆಯು ದೊರೆತು ಮತ್ತಷ್ಟು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬಹುದಾಗಿದೆ ಎಂದು ಪ್ರಸ್ತಾಪಿಸಲಾಗಿದೆ.
ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ 2 ವರ್ಷದ ANM ಕೋರ್ಸ್‌ಗಳನ್ನು ನಡೆಸಲಾಗುತ್ತಿರುವ ರಾಜ್ಯದ 20 ANMTC ಕೇಂದ್ರಗಳಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದಿಂದ ದಾಖಲಾತಿಗಳನ್ನು ಸ್ಥಗಿತಗೊಳಿಸಿ, ಸದರಿ ತರಬೇತಿ ಕೇಂದ್ರಗಳನ್ನು ಸ್ಥಗಿತಗೊಳಿಸಲು/ ಮುಚ್ಚಲು ತಾತ್ವಿಕವಾಗಿ ಅನುಮೋದನೆ ನೀಡಿ ಆದೇಶಿಸಿದೆ.
ಈ ಕೆಳಕಂಡ ಮಾರ್ಗಸೂಚಿಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ಪಾಲನೆ ಮಾಡಲು ಮತ್ತು ಅಳವಡಿಸಿಕೊಳ್ಳಲು ಸಹ ಆದೇಶಿಸಿದೆ.
* ಭವಿಷ್ಯದಲ್ಲಿ ANM/ PHCO ಹುದ್ದೆಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳು ಬದಲಾವಣೆಗೊಳಪಡುವುದರಿಂದ ಪ್ರಸ್ತುತ ವ್ಯಾಸಂಗದಲ್ಲಿರುವ ANM ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಿ ಸರ್ಕಾರಿ BSc Nursing/ GNM ಕಾಲೇಜುಗಳಲ್ಲಿನ ಕೋರ್ಸ್ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸುವುದು ಹಾಗೂ ಸಾಧ್ಯವಾದಷ್ಟು ಅಭ್ಯರ್ಥಿಗಳನ್ನು BSc Nursing/ GNM ತರಬೇತಿಗಳಿಗೆ ಪವೇಶ ಪಡೆಯಲು ಅನುಕೂಲ ಮಾಡಿಕೊಡುವುದು.
* ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ಬಾಕಿ ಉಳಿದಿರುವ ANM ತರಬೇತಿ ಕೇಂದ್ರಗಳನ್ನು ಮುಚ್ಚಿ ಸದರಿ ಕೇಂದ್ರದಲ್ಲಿನ ಅಭ್ಯರ್ಥಿಗಳನ್ನು ಹತ್ತಿರದ ತರಬೇತಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳುವುದು.
* ಹೀಗೆ ಸ್ಥಳಾಂತರಗೊಳಿಸಿದ ನಂತರ ವಿದ್ಯಾರ್ಥಿಗಳಿಲ್ಲದ ANM ತರಬೇತಿ ಕೇಂದ್ರಗಳನ್ನು ಮುಚ್ಚುವುದು ಮತ್ತು ಸದರಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಮಾತ್ರ ಇಲಾಖೆಗೆ ಹಿಂಪಡೆದುಕೊಂಡು ಕೌನ್ಸಿಲಿಂಗ್ ಮುಖಾಂತರ ಇಲಾಖೆಯಲ್ಲಿ ಲಭ್ಯವಿರುವ ನಿರ್ಣಾಯಕ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸುವುದು.












Click it and Unblock the Notifications