Property: ನಿವೇಶನಕ್ಕಾಗಿ ಕಾಯುತ್ತಿರುವವರಿಗೆ ಸಿಹಿಸುದ್ದಿ: ರಾಜ್ಯಾದ್ಯಂತ 15 ಲಕ್ಷಕ್ಕೂ ಹೆಚ್ಚು ನಿವೇಶನ ವಿತರಣೆ

Karnataka government : ರಾಜ್ಯಾದ್ಯಂತ 15 ಲಕ್ಷಕ್ಕೂ ಹೆಚ್ಚು ನಿವೇಶನ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬಹಳಷ್ಟು ಜನರಿಗೆ ಜಾಗ ಇಲ್ಲ, ಮನೆಯೂ ಇಲ್ಲ. ನಿವೇಶನ ನೀಡಿದರೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದು ಉಪಮುಖ್ಯಮಂತ್ರಿಗಳು, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಇಂದು ಪ್ರಜಾ ಸೇವಾ ಇಲಾಖೆ ಹಾಗೂ ತುಮಕೂರು ಜಿಲ್ಲಾಡಳಿತದ ವತಿಯಿಂದ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ 'ಪ್ರಜಾ ಸೇವಾ ಅಭಿಯಾನ ಜನಸಭೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾನು ಕಂದಾಯ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಹೊಸ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂಬುದು ನನ್ನ ಆಶಯ.‌

Karnataka Government to Distribute Over 15 Lakh House Sites Across the State minister G Parameshwara

Karnataka government:30×40 ಅಳತೆಯ ನಿವೇಶನ

ಬಡವರಿಗೆ 30×40 ಅಳತೆಯ ನಿವೇಶನವನ್ನು ಉಚಿತವಾಗಿ ನೀಡಲಾಗುವುದು. ಅವರ ಬದುಕಲ್ಲಿ ನೆಮ್ಮದಿ ಮೂಡುತ್ತದೆ. ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ನಿವೇಶನ ಸಿದ್ಧಪಡಿಸಿ, ಬಡವರಿಗೆ ಕೊಡುವ ಕೆಲಸ ಮಾಡಲು ಹೊರಟಿದ್ದೇವೆ. ಶಾಸಕರ ಮೂಲಕ ಗ್ರಾಮ ಸಭೆಗಳನ್ನು ಮಾಡಿ, ಬಡವರಿಗೆ ನಿವೇಶನ ಹಂಚಿಕೆ‌ ಮಾಡಲಾಗುತ್ತದೆ ಎಂದು ಹೇಳಿದರು.

ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು, ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ‌ ಮಾಡಬೇಕು. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿಗಳು, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸೆಪ್ಟೆಂಬರ್ 5 ನಮ್ಮೆಲ್ಲರಿಗೂ ಆದರ್ಶಪ್ರಾಯರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಇಡೀ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅದೇ ದಿನ ಪ್ರಜಾಸೇವಾ ಅಭಿಯಾನ ಆಚರಿಸಬೇಕು ಎಂದು ಸಿಎಂ ಅವರು ಕರೆ ಕೊಟ್ಟಿದ್ದರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ನೂತನ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ. ಯಾವುದೇ ಇಲಾಖೆಯ ಸಮಸ್ಯೆಗಳನ್ನು ನೇರವಾಗಿ ಈ‌ ಇಲಾಖೆಯಡಿ ದಾಖಲಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸಕಾಲದಲ್ಲಿ ಪರಿಹರಿಸಿಕೊಡುವ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿದರು.

ಪ್ರಜಾಸೇವಾ ಅಭಿಯಾನ ಸಭೆ

ಈ ಕಾರ್ಯಕ್ರಮ ಇಂದಿನ ದಿನಕ್ಕೆ‌ ಮಾತ್ರ ಸೀಮಿತವಾಗಿಲ್ಲ.‌ ಪ್ರತಿ ತಿಂಗಳು ಮೊದಲನೆ ಮತ್ತು ಮೂರನೇ ಶನಿವಾರದಂದು ಪ್ರತಿ ತಾಲ್ಲೂಕಿನಲ್ಲಿ ಅಭಿಯಾನ ನಡೆಸಲಾಗುತ್ತದೆ. ತಾಲೂಕು ಮುಗಿದ ಬಳಿಕ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಭೆ ನಡೆಸಲಾಗುವುದು. ಇದು ನಿರಂತರವಾಗಿ ನಡೆಯುತ್ತದೆ. ಇವತ್ತು ಅರ್ಜಿ ನೀಡಲು ಆಗದವರು ಮೂರನೇ ಶನಿವಾರ ಅರ್ಜಿ ಸಲ್ಲಿಸಬಹುದು ಎಂದರು.

ಸಾರ್ವಜನಿಕರಿಂದ ಅರ್ಜಿ ಬಂದಾಗ, ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಪರಿಹರಿಸಿದರೆ ಅವರಿಗೆ ಆಗುವ ಸಂತೋಷಕ್ಕೆ ಪಾರವೆ ಇರುವುದಿಲ್ಲ. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಕೆಲಸ ಮಾಡಲಿದೆ. ಸಮಸ್ಯೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದರೆ, ಕರ್ನಾಟಕ ಸರ್ಕಾರ ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗುತ್ತದೆ. ಜನರ ಸಮಸ್ಯೆಗಳನ್ನು ಬಹುಬೇಗ ಬಗೆಹರಿಸಿದರೆ ಆಡಳಿತ ಚುರುಕಾಗಿದೆ ಎಂಬ ಮಾತಿಗೂ ಅರ್ಥ ಬರುತ್ತದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ‌

ಎರಡು ಸಾವಿರ ರೂ. ದೊಡ್ಡದು

ನಮ್ಮ‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆರಂಭದಲ್ಲಿ ಬಹಳಷ್ಟು ಟೀಕೆಗಳು ಕೇಳಿಬಂದವು. ಯಾರಿಗೆ ಸಹಾಯ ಹಸ್ತದ ನಿರೀಕ್ಷೆಯಿತ್ತು, ಸರ್ಕಾರದಿಂದ ಸಹಾಯ ಬೇಕಾಗಿತ್ತು ಅಂತವರಿಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ಅನುಕೂಲವಾಗಿವೆ. ಕೂಲಿ ಮಾಡುವವರಿಗೆ, ಬಡವರಿಗೆ ಜೀವನಕ್ಕೆ ಸಹಾಯವಾಗುತ್ತಿದೆ. ಕೂಲಿ ಮಾಡುವ ಹೆಣ್ಣು ಮಗಳಿಗೆ ಎರಡು ಸಾವಿರ ರೂ. ದೊಡ್ಡದು. ಆಕೆಗೆ ಎರಡು ಸಾವಿರ ರೂಪಾಯಿ ಎರಡು ಲಕ್ಷದ ಮೌಲ್ಯಕ್ಕೆ ಸಮ.‌ ಅವಶ್ಯಕತೆ ಇರುವ ಎಲ್ಲ ಮಹಿಳೆಯರು ಎರಡು ಸಾವಿರ ರೂಪಾಯಿ ಪಡೆಯುತ್ತಿದ್ದಾರೆ.‌ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಪಡೆಯುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘ ತಿಳಿಸಿದೆ. ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ನಾನು ಬದುಕಿರುವುದೇ ಎರಡು ಸಾವಿರ ರೂ. ಹಣದಿಂದ

ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಾಗ 'ಅಜ್ಜಿಯೊಬ್ಬರಿಗೆ ಎರಡು ಸಾವಿರ ರೂ. ಬರುತ್ತದೆಯೇ ಎಂದು ವಿಚಾರಿಸಿದೆ. ಆಗ ಆಕೆ ಎರಡು ಸಾವಿರ ರೂ. ಹಣ ನನಗೆ ಔಷಧ ತೆಗೆದುಕೊಳ್ಳಲು ಸಹಾಯವಾಗುತ್ತಿದೆ. ನಾನು ಬದುಕಿರುವುದೇ ಎರಡು ಸಾವಿರ ರೂ. ಹಣದಿಂದ' ಎಂಬ ಮಾತನ್ನು ಹೇಳಿದರು. ಇದನ್ನು ಕೇಳಿ ನಮ್ಮ ಕಾರ್ಯಕ್ರಮ ಸಾರ್ಥಕವೆಂಬ ಭಾವನೆ ಮೂಡಿತ್ತು ಎಂದು ನೆನೆದರು.

ಮಹಿಳೆಯರಿಗೆ ಉಚಿತ ಪ್ರಯಾಣ

ಹೆಣ್ಣುಮಕ್ಕಳಿಗೆ ಬಸ್‌ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. 800 ಕೋಟಿ ಟ್ರಿಪ್ ನಮ್ಮ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಪ್ರೇರಣೆ ಪಡೆದು ಅಮೆರಿಕಾದ ನಗರವೊಂದರ ಮೇಯರ್ ಅಲ್ಲಿನ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ‌ ಕಲ್ಪಿಸಿದ್ದಾರೆ. ಪ್ರಧಾನಮಂತ್ರಿಯವರು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆದರು. ಎಲ್ಲ ರಾಜ್ಯದಲ್ಲೂ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಬೇರೆಬೇರೆ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ‌. ಇದು ನಮ್ಮ‌ ಗ್ಯಾರಂಟಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಂದಾಯ ಇಲಾಖೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರು ನನಗೆ ವಹಿಸಿದ್ದಾರೆ. ದೇಶದಲ್ಲಿ ಹೊಸಹೊಸ ಆವಿಷ್ಕಾರ ಮಾಡುವಾಗ ಕರ್ನಾಟಕ ಮುಂದಿದೆ. ನಮ್ಮ ರಾಜ್ಯದ ಕಂದಾಯ ಇಲಾಖೆಯಲ್ಲಿ ಆಗಿರುವಂತಹ ದೊಡ್ಡ ಬದಲಾವಣೆಗಳು ದೇಶದಲ್ಲಿ ಬೇರೆಲ್ಲೂ ಆಗಿರಲಿಲ್ಲ. ದೇವರಾಜ್ ಅರಸು ಅವರ ಅವಧಿಯಲ್ಲಿ, ಕಷ್ಟಪಟ್ಟು ಜಮೀನು ಉಳುಮೆ ಮಾಡುವವರಿಗೆ ಜಮೀನು ನೀಡಬೇಕು ಎಂಬ ನಿಟ್ಟಿನಲ್ಲಿ "ಉಳುವವನೆ ಭೂಮಿಯ ಒಡೆಯ" ಎಂಬ ಕಾರ್ಯಕ್ರಮ ಜಾರಿಗೆ ತಂದರು. ಕೂಲಿ ಮಾಡುವ ಬಡವನಿಗೆ ಭೂಮಿ ಸಿಗಬೇಕು ಎಂಬುದು ಉದ್ದೇಶವಾಗಿತ್ತು.

ಅನೇಕ ಬದಲಾವಣೆಗಳನ್ನು ಕರ್ನಾಟಕ ಮಾಡುತ್ತಿದೆ. ಅನೇಕ ಯೋಜನೆಗಳನ್ನು ಸೇರಿಸಿಕೊಳ್ಳಲಾಗಿದೆ. ಇ ಪೌತಿ ಹಕ್ಕು, ಕಂದಾಯ ಗ್ರಾಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಇಡೀ ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ಯಾವತ್ತು ಈ ರೀತಿಯ ಬರ ಬಂದಿಲ್ಲ.‌ ಈ ರೀತಿಯ ಬರ 150 ವರ್ಷದ ಹಿಂದೆ ಬಂದಿತ್ತು ಎಂದು ಹೇಳಲಾಗುತ್ತದೆ.

ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದೆ. ಜಿಲ್ಲೆಯಲ್ಲಿ ಯಾವ ಬೆಳೆಯೂ ಇಲ್ಲ. ಸೂರ್ಯಕಾಂತಿ, ಜೋಳ, ಹೂವು, ನಂಜನಗೂಡು ರಸಬಾಳೆ ತೋಟಗಳು ಒಣಗುತ್ತಿವೆ. ಹಳ್ಳಿಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಇದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ.‌ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಎಲ್ಲಿಂದ‌ ತರಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ.‌ ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೋಟಿ ರೂ.‌ನೀಡಲಾಗಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329 ಕೋಟಿ ರೂ.‌ನೀಡಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದೇನೆ. ಜನ-ಜಾನುವಾರುಗಳಿಗೆ ನೀರು, ಮೇವು ಹಾಗೂ ಉದ್ಯೋಗ ನೀಡುವುದು ಮುಖ್ಯವಾಗಿದೆ. ಜನ ಗುಳೆ ಹೋಗುವುದನ್ನು ತಪ್ಪಿಸಲು ಶಾಸಕರೊಂದಿಗೆ ಚರ್ಚಿಸಿ ವಿಬಿ ಜಿ ರಾಮ್‌ಜಿ ಯೋಜನೆಯಡಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದರು.

ರಾಜ್ಯದ ಯಜನತೆಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಆಶಯ. ಅದಕ್ಕೆ ನಮ್ಮ ಇಡೀ ಮಂತ್ರಿ ಮಂಡಲ ಮತ್ತು ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುಬ್ಬಿ ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ .ಬಿ.ವಿ, ಗ್ಯಾರಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ಮುಂತಾದವರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+