ಕರ್ನಾಟಕ ಇಂಧನ ಕ್ಷೇತ್ರ: ಲಂಡನ್ ಜತೆ ₹11,000 ಕೋಟಿ ಹೂಡಿಕೆ ಒಪ್ಪಂದಕ್ಕೆ ಸರ್ಕಾರ ಸಹಿ
ಲಂಡನ್, ಡಿಸೆಂಬರ್ 01: ಕರ್ನಾಟಕದ ಕೈಗಾರಿಕಾ ಮತ್ತು ನವೀಕರಿಸಬಹುದಾದ ಇಂಧನ ವಲಯಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಹೀರೊ ಫ್ಯೂಚರ್ ಎನರ್ಜೀಸ್ ಪ್ರೈವೇಟ್ ಲಿಮಿಟೆಡ್ (HFEPL) ಇಲ್ಲಿ ಕರ್ನಾಟಕ ಸರ್ಕಾರದ ಜೊತೆಗೆ ₹ 11,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕರ್ನಾಟಕ ಕೈಗಾರಿಕೆ ಸಚಿವ ಎಂಬಿ ಪಾಟೀಲ ಅವರು ಅಧಿಕೃತ ಮಾಹಿತಿ ತಿಳಿಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಸಿದ್ಧತೆ ಅಂಗವಾಗಿ ಲಂಡನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ರೋಡ್ ಶೋದಲ್ಲಿ ಈ ಒಪ್ಪಂದ ಕಾರ್ಯಗತಗೊಂಡಿದೆ ಎಂದು ಭಾನುವಾರ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ₹11,000 ಕೋಟಿ ಬಳಕೆ ಆಗಲಿದೆ. ಎಚ್ಎಫ್ಇಪಿಎಲ್- ನ ಈ ಪ್ರಸ್ತಾವಿತ ಯೋಜನೆಗಳು ರಾಜ್ಯದಲ್ಲಿ 2025-26 ರಿಂದ ಕಾರ್ಯಾರಂಭಗೊಳ್ಳಲಿವೆ.
3,000 ಉದ್ಯೋಗ ಸೃಷ್ಟಿ ನಿರೀಕ್ಷೆ
ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಈ ಮೊತ್ತದ ಹೂಡಿಕೆ ಆಗಲಿದೆ. ಈ ಒಪ್ಪಂದದ ಫಲವಾಗಿ ಕರ್ನಾಟಕದಲ್ಲಿ ಸುಮಾರು 3,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.
ಪರಿಸರ ಸ್ನೇಹಿ ಇಂಧನ ಪರಿಹಾರ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆ ಸಾಧಿಸಲು ರಾಜ್ಯವು ಮುಂಚೂಣಿಯಲ್ಲಿ ಇರುವುದನ್ನು ಮತ್ತು ಬಂಡವಾಳ ಹೂಡಿಕೆಯ ಆದ್ಯತಾ ತಾಣವಾಗಿರುವುದಕ್ಕೆ ಈ ಒಪ್ಪಂದವು ಇನ್ನೊಂದು ನಿದರ್ಶನವಾಗಿದೆ. ಕಾಲಮಿತಿ ಒಳಗೆ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಗತ್ಯವಾದ ಉತ್ತೇಜನಾ ಕ್ರಮಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ.
ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಮತ್ತು ಹೀರೊ ಫ್ಯೂಚರ್ ಎನರ್ಜಿಯ ಮುಖ್ಯ ಹಣಕಾಸು ಅಧಿಕಾರಿ ಬೆಂಜಮಿನ್ ಪೌಲ್ ಫ್ರೇಸರ್ ಅವರು ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಭವಿಷ್ಯದ ಇಂಧನ ಸವಾಲು ಎದುರಿಸಲು ಕ್ರಮ
ಹೊಸ ತಲೆಮಾರಿನ ಇಂಧನಗಳಿಗಾಗಿ ಅಸಾಮಾನ್ಯ ಸ್ವರೂಪದ ಹವಾಮಾನ ಸವಾಲುಗಳು ದಿಟ್ಟ ಹಾಗೂ ದೃಢ ನಿರ್ಧಾರದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇರುವುದನ್ನು ಹೀರೊ ಫ್ಯೂಚರ್ ಎನರ್ಜೀಸ್ ಗುರುತಿಸಿದೆ. 6ಕ್ಕೂ ಹೆಚ್ಚು ಗಿಗಾವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದೊಂದಿಗೆ ನಾವು ಮಾಲಿನ್ಯ ತಗ್ಗಿಸುವ ನಮ್ಮ ಪ್ರಯತ್ನಗಳನ್ನು ಸಾರಿಗೆ ಮತ್ತು ಭಾರಿ ಎಂಜಿನಿಯರಿಂಗ್ ತಯಾರಿಕೆಯಂತಹ ಕೈಗಾರಿಕೆಗಳಿಗೆ ವಿಸ್ತರಿಸುತ್ತಿದ್ದೇವೆ ಎಂದು ಕಂಪನಿಯ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಹೇಳಿದ್ದಾರೆ.
ಎಚ್ಎಫ್ಇಪಿಎಲ್ ಅನ್ನು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿರುವ ರಾಹುಲ್ ಮುಂಜಾಲ್ ಅವರು 2012 ರಲ್ಲಿ ಸ್ಥಾಪಿಸಿದ್ದಾರೆ. ಇದು ಹೀರೊ ಗ್ರೂಪ್‌ನ ಭಾಗವಾಗಿದೆ. ಲಂಡನ್ ಸಮಾವೇಶದಲ್ಲಿ ಸಚಿವರಿಗೆ ರಾಜ್ಯ ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಸಾಥ್ ನೀಡಿದರು.












Click it and Unblock the Notifications