Bengaluru 2nd Airport: 3 ಜಾಗ ಅಂತಿಮಗೊಳಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕರ್ನಾಟಕ ಸರ್ಕಾರ: ಮಹತ್ವ ಮಾಹಿತಿ ತಿಳಿಯಿರಿ
ಬೆಂಗಳೂರು, ಮಾರ್ಚ್ 08: ಬಹು ನಿರೀಕ್ಷಿತ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆಯನ್ನ ಕರ್ನಾಟಕ ಸರ್ಕಾರ ಅಂತಿಮಗೊಳಿಸಿದೆ. ಬೆಂಗಳೂರು ಸಮೀಪವೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಕನಕಪುರ ರಸ್ತೆಯಲ್ಲಿ ಎರಡು ಜಾಗಗಳು ಹಾಗೂ ಕುಣಿಗಲ್ ರಸ್ತೆಯಲ್ಲಿ ಒಂದು ಜಾಗ ಸೇರಿ ಒಟ್ಟು 3 ಜಾಗಗಳನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಪ್ರಸ್ತಾವನೆಯನ್ನ ಕರ್ನಾಟಕ ಸರ್ಕಾರ ಸಲ್ಲಿಸಿದೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆಯ ಪ್ರಕಾರ ಎರಡು ಸ್ಥಳಗಳು ಬೆಂಗಳೂರಿನ ದಕ್ಷಿಣ ಭಾಗದ ಕನಕಪುರ ರಸ್ತೆಯಲ್ಲಿದೆ. ಇದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿದೆ. ಈ ಎರಡು ಸ್ಥಳಗಳಲ್ಲಿ ಒಂದು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿದರೆ ಇನ್ನೊಂದು ಜಾಗ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಹಾರೋಹಳ್ಳಿ ಬಳಿ ಗುರುತಿಸಲಾದ ಸ್ಥಳಗಳಲ್ಲಿ ಒಂದು ಹಸಿರು ಮಾರ್ಗದ ಕೊನೆಯ ಮೆಟ್ರೊ ನಿಲ್ದಾಣಕ್ಕಿಂತ 10 ಕಿಮಿ ಅಂತರದಲ್ಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಇನ್ನೂ ಈ ಕುರಿತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ಪ್ರಸ್ತಾಪಿಸಲಾಗಿದ್ದು, ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಕೇಂದ್ರಕ್ಕೆ ಪ್ರಸ್ತಾಪಿಸಲಾಗಿದೆ. ಕನಕಪುರ ರಸ್ತೆ ಹಾರೋಹಳ್ಳಿ ಬಳಿ ಎರಡು ಕಡೆ ಹಾಗೂ ನೆಲಮಂಗಲದ ಕುಣಿಗಲ್ ರಸ್ತೆಯ ಒಂದು ಕಡೆ ಸ್ಥಳ ಗುರುತಿಸಲಾಗಿದ್ದು, ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಕರ್ನಾಟಕದ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕನಕಪುರ ರಸ್ತೆಯಲ್ಲಿ ಗುರುತಿಸಲಾದ ಎರಡು ಸ್ಥಳಗಳು ಕ್ರಮವಾಗಿ 4,800 ಮತ್ತು 5,000 ಎಕರೆ ಭೂಮಿಯ ವಿಸ್ತೀರ್ಣವನ್ನು ಹೊಂದಿವೆ. ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿರುವ ಸ್ಥಳವನ್ನ ಮೂರನೇ ಜಾಗವನ್ನಾಗಿ ಗುರುತಿಸಲಾಗಿದೆ. ಕುಣಿಗಲ್ ರಸ್ತೆಯಲ್ಲಿರುವ ಸ್ಥಳ ಸುಮಾರು 5,200 ಎಕರೆ ಭೂಮಿಯನ್ನು ಅಧಿಕಾರಿಗಳು ಗುರುತಿಳಿಸಿದ್ದಾರೆ. ಸಚಿವಾಲಯಕ್ಕೆ ಕಳುಹಿಸಿದ ಪತ್ರದಲ್ಲಿ ರಾಜ್ಯ ಸರ್ಕಾರವು ಸಚಿವಾಲಯ ಅಂತಿಮಗೊಳಿಸಿದ ಯಾವುದೇ ಸ್ಥಳದಲ್ಲಿ ಕನಿಷ್ಠ 4,500 ಎಕರೆ ಭೂಮಿಯನ್ನು ಒದಗಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಈ ಮೂರು ಸ್ಥಳಗಳು ಬೆಂಗಳೂರು ನಗರ ಕೇಂದ್ರದಿಂದ 50 ಕಿ.ಮೀ ವ್ಯಾಪ್ತಿಯಲ್ಲಿವೆ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳಿಗೆ ಅತ್ಯುತ್ತಮ ಪ್ರವೇಶವನ್ನು ಹೊಂದಿವೆ ಎಂದು ರಾಜ್ಯ ಸರ್ಕಾರ ಸಚಿವಾಲಯಕ್ಕೆ ತಿಳಿಸಿದೆ. ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸುವ ಮೊದಲು ಸ್ಥಳಗಳನ್ನು ಅಧ್ಯಯನ ಮಾಡಲು ಸಚಿವಾಲಯವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ತಂಡವನ್ನು ಕಳುಹಿಸುತ್ತದೆ. ಅವರ ಶಿಫಾರಸುಗಳ ಆಧಾರದ ಮೇಲೆ, ವಿವರವಾದ ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ನಗರದ 50ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಯಾವುದೇ ವಿಮಾನ ನಿಲ್ದಾಣವು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಎಂದು ಸಚಿವಾಲಯವು ಅಭಿಪ್ರಾಯಪಟ್ಟಿದೆ.












Click it and Unblock the Notifications