Good News: ಗುತ್ತಿಗೆದಾರರಿಗೆ ಸಿಹಿ ಸುದ್ದಿ: 300 ಕೋಟಿ ರೂಪಾಯಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಬೆಂಗಳೂರು, ಏಪ್ರಿಲ್ 19: ದೀರ್ಘಕಾಲದ ಹೋರಾಟ ಮತ್ತು ಸತತ ಪ್ರತಿಭಟನೆಗಳ ಫಲವಾಗಿ ರಾಜ್ಯದ ಸಣ್ಣ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸುತ್ತಿದ್ದ ಗುತ್ತಿಗೆದಾರರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸರ್ಕಾರ 2,000 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಈಗ 300 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ರಸ್ತೆ ಗುಂಡಿ ದುರಸ್ತಿ, ಕಟ್ಟಡ ಹಾಗೂ ಸೇತುವೆ ದುರಸ್ತಿಯಂತಹ ಸಣ್ಣ ಮತ್ತು ಮಧ್ಯಮ ಗಾತ್ರದ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ ನೀಡಲಾಗುವುದು.

ಯಾರಿಗೆಲ್ಲಾ ಅನುಕೂಲ ಆಗಲಿದೆ?
ಅಂದಾಜು 4,000 ಗುತ್ತಿಗೆದಾರರಿಗೆ ಈ ನಿರ್ಧಾರದಿಂದ ಅನುಕೂಲ ಆಗಲಿದ್ದು, ಪ್ರಮುಖವಾಗಿ 10 ಲಕ್ಷಕ್ಕಿಂತ ಕಡಿಮೆ ಮೊತ್ತದ ಬಿಲ್‌ಗಳನ್ನು ಹೊಂದಿರುವವರಿಗೆ ಆದ್ಯತೆ ನೀಡಿ ಪಾವತಿ ಮಾಡಲಾಗುತ್ತದೆ. ಲೋಕೋಪಯೋಗಿ ಇಲಾಖೆಯ ಈ ಕ್ರಮವನ್ನು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಆರ್.ಮಂಜುನಾಥ್ ಸ್ವಾಗತಿಸಿದ್ದಾರೆ. ಆದರೆ, ಹಣ ಬಿಡುಗಡೆಯ ಪ್ರಕ್ರಿಯೆ ಹಂತ- ಹಂತವಾಗಿ ನಡೆಯುತ್ತಿದ್ದರೂ, ಮುಖ್ಯಮಂತ್ರಿಗಳ ಭರವಸೆ ಇನ್ನೂ ಈಡೇರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಮನವಿ ಏನು?
ಸರ್ಕಾರ ಕೊಟ್ಟ ಮಾತಿನಂತೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮನ್ನು ಕರೆಸಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು. ಇದುವರೆಗೆ ಸಿಎಂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಕೂಡಲೇ ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗಳನ್ನು ಆಲಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ.
ಸಂಘದ ಪ್ರಮುಖ ಬೇಡಿಕೆಗಳು
* ಗುತ್ತಿಗೆದಾರರ ಪ್ರಮುಖ ಅಸಮಾಧಾನವಿರುವುದು ಮುಖ್ಯಮಂತ್ರಿಗಳ ಭೇಟಿಯ ವಿಚಾರದಲ್ಲಿ. ಪ್ರತಿಭಟನೆಯ ಸಮಯದಲ್ಲಿ ಸಿಎಂ ಅವರು ಭರವಸೆ ನೀಡಿದ್ದ ಸಮಾಲೋಚನಾ ಸಭೆ ಇನ್ನೂ ನಡೆದಿಲ್ಲ.
* ಸಿಎಂ ಭೇಟಿಗೆ ಆಗ್ರಹ: ಬಾಕಿ ಹಣ ಬಿಡುಗಡೆಯ ಜೊತೆಗೆ, ಗುತ್ತಿಗೆದಾರರ ಮೇಲಿರುವ ಸಾಲದ ಹೊರೆ ಮತ್ತು ಬಡ್ಡಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಜೊತೆಗಿನ ಸಭೆ ಅನಿವಾರ್ಯವಾಗಿದೆ.
* ಶಾಶ್ವತ ಪರಿಹಾರ: ಬಿಲ್ ಪಾವತಿಗಾಗಿ ಪ್ರತಿ ಬಾರಿಯೂ ಪ್ರತಿಭಟನೆ ನಡೆಸುವ ಬದಲು, ಕಾಮಗಾರಿ ಮುಗಿದ ತಕ್ಷಣ ಹಣ ಬಿಡುಗಡೆ ಆಗುವಂತಹ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ಬರಬೇಕು ಎನ್ನುವುದು ಇವರ ಒತ್ತಾಯವಾಗಿದೆ.
ಒಟ್ಟಿನಲ್ಲಿ ಸರ್ಕಾರದ ಈ 300 ಕೋಟಿ ರೂಪಾಯಿಗಳ ಬಿಡುಗಡೆಯು ಸಣ್ಣ ಗುತ್ತಿಗೆದಾರರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಲ್ಲದು. ಆದರೆ, ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಗುತ್ತಿಗೆದಾರರು ಮತ್ತು ಸರ್ಕಾರದ ನಡುವೆ ನೇರ ಮಾತುಕತೆಯ ಅಗತ್ಯವಿರುವುದು ಸ್ಪಷ್ಟವಾಗಿ ಕಾಣುತ್ತಿದೆ.












Click it and Unblock the Notifications