ಬಿಬಿಎಂಪಿಗೆ 250 ವಾರ್ಡ್, ಡಿಸೆಂಬರ್ ಒಳಗೆ ಎಲೆಕ್ಷನ್?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಮಳೆಯ ಆರ್ಭಟ ಹೆಚ್ಚಾದ ನಂತರ ಪರದಾಟ ಇನ್ನೂ ಜೋರಾಗಿದೆ. ಹೀಗಾಗಿ ಹೊಸ ಸರ್ಕಾರಕ್ಕೂ ಇದು ಗಂಭೀರ ಅನಿಸುತ್ತಿದ್ದು, ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ. ಇದೇ ಸಂದರ್ಭದಲ್ಲಿ ಬಿಜೆಪಿಗೂ ಕಾಂಗ್ರೆಸ್ ಸರ್ಕಾರ ಶಾಕ್ ಕೊಡೋ ಮುನ್ಸೂಚನೆ ಸಿಕ್ಕಿದೆ.
2015ರಲ್ಲಿ ಬಿಬಿಎಂಪಿಗೆ ಎಲೆಕ್ಷನ್ ನಡೆದಿತ್ತು. ಹೀಗೆ ಅಧಿಕಾರಕ್ಕೆ ಬಂದು 2020ರಲ್ಲೇ ಅಧಿಕಾರ ಅವಧಿ ಮುಗಿಸಿದೆ. BBMP ಅಧಿಕಾರವಧಿ ಮುಗಿದು ಹೋಗಿ ಬರೋಬ್ಬರಿ 3 ವರ್ಷಗಳೇ ಕಳೆದಿದೆ. ಆದರೂ ಪಾಲಿಕೆಗೆ ಚುನಾವಣೆ ನಡೆಯಲಿಲ್ಲ, ಇದೇ ಕಾರಣಕ್ಕೆ 2023ರ ಡಿಸೆಂಬರ್ ಒಳಗೆ ಎಲೆಕ್ಷನ್ ಮಾಡಿ ಮುಗಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದು, ಅದಕ್ಕೂ ಮುನ್ನ BJPಗೆ ಶಾಕ್ ಸಿಗೋದು ಗ್ಯಾರಂಟಿ. ಹೇಗೆಂದರೆ ಬಿಜೆಪಿ ತನ್ನ ಅಧಿಕಾರ ಅವಧಿಯಲ್ಲಿ ವಾರ್ಡ್‌ಗಳ ಮರುವಿಂಗಡಣೆ ಮಾಡಿ ನೀಡಿದ್ದ ವರದಿ ಮೂಲೆ ಸೇರೋದು ಬಹುತೇಕ ಪಕ್ಕಾ ಆಗಿದೆ (BBMP Election).

243 ಅಲ್ಲ, 250 ವಾರ್ಡ್ ಪಕ್ಕಾ?
ಹೌದು, ಬಿಜೆಪಿ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮರುವಿಂಗಣೆ ಮಾಡಿ ವಾರ್ಡ್‌ಗಳ ಸಂಖ್ಯೆಯನ್ನ 198ರಿಂದ 243ಕ್ಕೆ ಹೆಚ್ಚಳ ಮಾಡಿತ್ತು. ಆದ್ರೆ ಮೊದಲಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಇದೇ ವಿಚಾರಕ್ಕೆ ಫೈಟ್ ನಡೆಯುತ್ತಿತ್ತು. ಈ ಹಿನ್ನೆಲೆ ಬಿಜೆಪಿ ಸಿದ್ಧಪಡಿಸಿದ್ದ 243 ವಾರ್ಡ್‌ಗಳ ಹಳೇ ವರದಿ ಬಿಟ್ಟು ಬಿಬಿಎಂಪಿ ವ್ಯಾಪ್ತಿಗೆ 250 ವಾರ್ಡ್‌ಗಳನ್ನ ಸೇರಿಸಲು ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ. ಈ ಕಾರಣಕ್ಕೆ ಬೆಂಗಳೂರಿನ ಹಿರಿಯ ಶಾಸಕರ ಸಲಹೆ ಕೂಡ ಪಡೆಯಲಾಗಿದೆಯಂತೆ. ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ರಣತಂತ್ರ ಹೆಣೆಯುತ್ತಿದ್ದಾರೆ.
ಬಿಜೆಪಿ ನಾಯಕರ ಆಸೆಗೆ ಅಡ್ಡಿ?
ಕೆಲ ದಿನಗಳ ಹಿಂದಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಮಾಜಿ ಮೇಯರ್‌ಗಳ ಜತೆ ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೆ ಬೆಂಗಳೂರಿನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರ ಜೊತೆಗೆ ಚರ್ಚೆ ನಡೆಸಿ ಬಿಬಿಎಂಪಿ ವಾರ್ಡ್ ವಿಂಗಡಣೆಗೆ ನೀಲನಕ್ಷೆ ಸಿದ್ಧವಾಗ್ತಿದ್ದು, ಹಿಂದೆ ಬಿಜೆಪಿ ಮಾಡಿದ್ದ 243 ವಾರ್ಡ್‌ಗಳ ನಕ್ಷೆ ಸಂಪೂರ್ಣ ಬದಲಾಗುತ್ತೆ ಎನ್ನಲಾಗಿದೆ. ಬಿಜೆಪಿ ನಾಯಕರು ತಮಗೆ ಅನುಕೂಲ ಆಗುವ ರೀತಿ 243 ವಾರ್ಡ್‌ಗಳ ವಿಂಗಡಣೆ ಮಾಡಿ, BBMP ಚುನಾವಣೆಗೆ ಸಿದ್ಧವಾಗಿದ್ದಾರೆ ಅನ್ನೋ ಆರೋಪ ಕಾಂಗ್ರೆಸ್ ನಾಯಕರದಾಗಿತ್ತು. ಈ ಕಾರಣಕ್ಕೆ ಇದೀಗ 243 ವಾರ್ಡ್‌ಗಳ ಸ್ಥಿತಿಗತಿ ಬದಲಾಗಿ, 250ಕ್ಕೆ ಹೆಚ್ಚಳವಾಗೋದು ಪಕ್ಕಾ.

ರಾಜ್ಯ ಗೆದ್ದಂತೆ ಬಿಬಿಎಂಪಿಗೂ ಲಗ್ಗೆ?
ಈ ಬಾರಿ ರಾಜ್ಯದಲ್ಲಿ 135 ಸ್ಥಾನ ಗೆದ್ದು ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ಬಿಬಿಎಂಪಿ ಮೇಲೆ ತನ್ನ ಗಮನ ನೆಟ್ಟಿದೆ. ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆ ಜಾರಿ ಜೊತೆಗೆ BBMPಯ ಗೆಲುವಿಗೂ ರಣಕಹಳೆ ಮೊಳಗಿದೆ. ಬೆಂಗಳೂರು ಅಭಿವೃದ್ಧಿಯ ಖಾತೆ ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಪಾಲಿಯ ಗೆಲುವಿಗೆ ತಂತ್ರ ಹೆಣೆಯುತ್ತಿದ್ದಾರೆ. ಬೆಂಗಳೂರಿನ ಶಾಸಕರು, ಮಾಜಿ ಮೇಯರ್‌ಗಳು ಕಾಂಗ್ರೆಸ್‌ಗೆ ಸಾಥ್ ನೀಡಿದ್ದಾರೆ. ಹೀಗಾಗಿ ಇನ್ನೇನು ಕೆಲ ದಿನಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೂ ಚುನಾವಣೆ ನಡೆಯೋದು ಗ್ಯಾರಂಟಿ. ವಿಧಾನಸಭೆ ಚುನಾವಣೆ ನೋಡಿದ್ದ ಬೆಂಗಳೂರಿಗರು ಶೀಘ್ರದಲ್ಲೇ ಮತ್ತೊಂದು ಎಲೆಕ್ಷನ್‌ಗೂ ವೋಟ್ ಹಾಕಬೇಕಿದೆ.
ಹೊಸ ಸರ್ಕಾರದಿಂದ ಸರ್ಪ್ರೈಸ್?
2010ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ವಾರ್ಡ್ ಪ್ರದೇಶಗಳನ್ನ ಗ್ರೇಟರ್ ಬೆಂಗಳೂರು ಎಂದು ಪರಿಗಣಿಸುವ ಒತ್ತಾಯ ಈ ಮೊದಲಿನಿಂದ ಕೇಳಿಬಂದಿತ್ತು. ಅಲ್ಲಿ ಪ್ರತ್ಯೇಕ ಪಾಲಿಕೆ ರಚಿಸಿ, ಪ್ರತ್ಯೇಕ ವ್ಯವಸ್ಥೆ ಜಾರಿಗೊಳಿಸಬೇಕು ಎಂಬ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿತ್ತು. ಈ ನಿರ್ಧಾರದಿಂದ ಬೆಂಗಳೂರಿಗೆ ಒಟ್ಟು ಇಬ್ಬರು ಮೇಯರ್ & ಆಯುಕ್ತರು ದೊರೆಯಲಿದ್ದಾರೆ.

ಆಡಳಿತ ನಡೆಸಲು ಸುಲಭವಾಗಲಿದೆ ಎಂಬ ಕುರಿತು ಚಿಂತನೆ ನಡೆದಿತ್ತು. ಈಗ ಹೊಸ ಸರ್ಕಾರ ಈ ವಿಚಾರದಲ್ಲೂ ಸರ್ಪ್ರೈಸ್ ಕೊಡುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ನಮ್ಮ ಸಮಸ್ಯೆ ಬಗೆಹರಿದರೆ ಸಾಕಪ್ಪಾ ಅಂತಿದ್ದಾರೆ ಬೆಂಗಳೂರು ನಿವಾಸಿಗಳು.











Click it and Unblock the Notifications