'ಗೃಹ ಜ್ಯೋತಿ' ಬಳಕೆದಾರರಿಗೆ ವಿದ್ಯುತ್ ಕಂಪನಿಗಳಿಂದ 'ಡಿ-ಲಿಂಕ್ ಸೌಲಭ್ಯ': ಏನಿದು
ಹುಬ್ಬಳ್ಳಿ, ಸೆಪ್ಟಂಬರ್ 09: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ 'ಗೃಹ ಜ್ಯೋತಿ' ಯೋಜನೆ ಜಾರಿಗೆ ಒಂದು ವರ್ಷ ತುಂಬಿದೆ. ಗೃಹ ಬಳಕೆದಾರರು ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಈ ಬಳಕೆದಾರರಿಗಾಗಿ ವಿದ್ಯತ್ ಕಂಪನಿಗಳು ಡಿ.ಲಿಂಕ್ ಸೌಲಭ್ಯ ಕಲ್ಪಿಸಿದೆ. ಏನಿದು? ಗ್ರಾಹಕರು ಇದರ ಲಾಭ ಪಡೆದುಕೊಳ್ಳುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.
ಜ್ಯೋತಿ ಯೋಜನೆ ಜಾರಿಗೊಂಡು ಒಂದು ವರ್ಷವಾದ ಬೆನ್ನಲ್ಲೇ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಗ್ರಾಹಕರಿಗೆ ಡಿ-ಲಿಂಕ್ ಸೌಲಭ್ಯ ಕಲ್ಪಿಸಿದೆ. ಮನೆ ಬದಲಾಯಿಸಿದ ನಂತರ ಯೋಜನೆಯ ಲಾಭ ಪಡೆಯಲು ಹೊಸ ಮನೆಯ ಆರ್.ಆರ್ ಸಂಖ್ಯೆಯನ್ನು ಲಿಂಕ್ ಮಾಡುವ ಸೌಲಭ್ಯ ಇದಾಗಿದೆ. ಇದರಿಂದ ನಿಮ್ಮ ಯೋಜನೆ ಲಾಭ ಬೇರೆ ಮನೆಗೆ ತೆರಳಿದ ಮೇಲೂ ಪಡೆದುಕೊಳ್ಳಬಹುದಾಗಿದೆ.

ಒಂದು ಮನೆಯಿಂದ ಇನ್ನೊಂದು ಮನೆಗೆ ನೀವು ಬಾಡಿಗೆಗೆ ತೆರಳಿದಾಗ ಇಲ್ಲವೇ ಇತರ ಕಾರಣಗಳಿಗೆ ಮನೆ ಬದಲಿಸುವ ವಳೇ ಈಗಾಗಲೇ ನೋಂದಾವಣೆಗೊಂಡಿರುವ ಸಂಖ್ಯೆಯನ್ನು (ಆರ್.ಆರ್.ನಂಬರ್ ಗೆ ಆಧಾರ ಜೋಡಣೆ) ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಆಗ ನೀವು ಹಾಲಿ ವಾಸಿಸುವ ಮನೆಯಲ್ಲಿ ಗೃಹ ಜ್ಯೋತಿ ಯೋಜನೆ ನಿಯಮಗಳು, ಲಾಭ ಅನ್ವಯವಾಗಲಿದೆ.
ಹುಬ್ಬಳ್ಳಿಯ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 2024ರ ಜುಲೈ ಅಂತ್ಯಕ್ಕೆ ಒಟ್ಟು 33.25 ಲಕ್ಷ ಜನರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಅವುಗಳ ಪೈಕಿ 32.67 ಲಕ್ಷ ಜನರು ಸದರಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇಂತಹವರು ಮನೆ ಬದಲಾಯಿಸುವವರಿದ್ದರೆ ಅವರಿಗೆ ಡಿ.ಲಿಂಕ್ ಸೌಲಭ್ಯ ಸಿಗಲಿದೆ.

ಡಿ-ಲಿಂಕ್ ಮಾಡುವುದು ಹೇಗೆ?
ಗೃಹ ಜ್ಯೋತಿ ಬಳಕೆದಾರರು https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಣಿ ಮಾಡಿಕೊಂಡು ಈ ಡಿ-ಲಿಂಕ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆ ಪಡೆಯಬಹುದೆಂದು ತಿಳಿಸಲಾಗಿದೆ.
ಮನೆ ಬದಲಾಯಿಸಿದವರು ಇದನ್ನು ಮಾಡಿ
ಮೊದಲು ಮಾಡಬೇಕಾದ ಕೆಲಸವೇನೆಂದರೆ ನೀವು ಬದಲಾಯಿಸಿದ ಮನೆಯಲ್ಲಿ ಮೊದಲು ವಾಸವಿದ್ದವರ ಆಧಾರ್ ಸಂಖ್ಯೆ ಜೊತೆ ಆರ್.ಆರ್ ನಂಬರ್ ಲಿಂಕ್ ಆಗಿದೆಯೇ ಅಥವಾ ಅವರು ಡಿ-ಲಿಂಕ್ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಆಗಿರದಿದ್ದರೆ ಡಿ-ಲಿಂಕ್ ಮಾಡಿ, ಹೊಸದಾಗಿ ಆರ್.ಆರ್. ನಂಬರ್ ಲಿಂಕ್ ಮಾಡಿಕೊಂಡು ನೀವಿರುವ ಮನೆಯಲ್ಲಿ ಗೃಹ ಜ್ಯೋತಿಯ ಲಾಭ ಪಡೆದುಕೊಳ್ಳಬೇಕು.
ಕರ್ನಾಟಕ ರಾಜ್ಯ ಸರ್ಕಾರದ ಪ್ರಕಾರ, ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಒಟ್ಟು 1.56 ಕೋಟಿಯಷ್ಟು ಜನ. ಇದರಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಹಾಯವಾಗಲಿದೆ. ಆದರೆ, ಮನೆ ಬದಲಿಸುವಾಗ ಈ ಸೌಲಭ್ಯ ಮುಂದುವರಿಸಲು ಡಿ-ಲಿಂಕ್ ಸೌಲಭ್ಯ ಕಲ್ಪಿಸಬೇಕೆಂದು ಕೋರಿದ್ದರು. ಅದರಂತೆ ಜನರ ಬೇಡಿಕೆ ಈಡೇರಿಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ತಿಳಿಸಿದ್ದಾರೆ.












Click it and Unblock the Notifications