ಕರ್ನಾಟಕದ ಮಹಿಳೆಯರಿಗೆ ಗುಡ್‌ನ್ಯೂಸ್: ಶೀಘ್ರದಲ್ಲೇ ಸಿಗಲಿದೆ ವೇತನ ಸಹಿತ ಮುಟ್ಟಿನ ರಜೆ
ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯದ ಮಹಿಳೆಯರ ಬಹುದಿನದ ಬೇಡಿಕೆ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಲು ಹೊಸ ನೀತಿ ರೂಪಿಸುವ ಬಗ್ಗೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮುಟ್ಟಿನ ರಜೆ ಅನಿವಾರ್ಯ, ಹೀಗಾಗಿ ವೇತನ ಸಹಿತ ಮುಟ್ಟಿನ ರಜೆ ನೀಡಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು.
ಮಹಿಳೆಯರ ಈ ಪ್ರಮುಖವಾದ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದ್ದು, ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕವಾಗಿ 6 ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಲು ನೀತಿ ರೂಪಿಸಲು ಮುಂದಾಗುತ್ತಿದೆ. ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡುವುದರ ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಳೆದ ಮೂರು ತಿಂಗಳ ಹಿಂದೆ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯದಲ್ಲಿಯೂ ಈ ವಿಚಾರ ಚರ್ಚೆಯಲಿದ್ದು, ಕರ್ನಾಟಕದಲ್ಲಿ ವೇತನ ಸಹಿತ ರಜೆ ನೀಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮುಟ್ಟಿನ ರಜೆ ನೀಡಿದರೆ ಅದರ ಸಾಧಕ ಹಾಗೂ ಬಾಧಕಗಳ ಬಗ್ಗೆ ಪರಿಶೀಲಿಸಲು ಈಗಾಗಲೇ ಸಮಿತಿ ರಚಿಸಲಾಗಿದ್ದು, ಈ ಸಮಿತಿ ನೀಡುವ ವರದಿ ಮೇಲೆ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಬಗ್ಗೆ ಹಾಗೂ ಎಷ್ಟು ದಿನ ನೀಡಬೇಕು ಎನ್ನುವುದರ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದೆ.
ಇನ್ನು ಈ ಬಗ್ಗೆ ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, 'ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವರ್ಷಕ್ಕೆ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತಿದೆ' ಎಂದರು.
'ನಾವು ಈ ನೀತಿಯನ್ನು ಜಾರಿಗೆ ತರಲು ಯೋಜಿಸುತ್ತಿದ್ದೇವೆ. ಈಗಾಗಲೇ ಈ ಬಗ್ಗೆ ಸಮಿತಿ ರಚಿಸಿದ್ದೇವೆ. ಈ ಸಮಿತಿ ವರ್ಷಕ್ಕೆ ಆರು ದಿನಗಳು ವೇತನ ಸಹಿತ ರಜೆ ನೀಡಲು ಶಿಫಾರಸು ಮಾಡಿದೆ. ನಾವು ಈಗ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇವೆ' ಎಂದು ತಿಳಿಸಿದರು.

ಇನ್ನು 'ಮಹಿಳೆಯರ ಬೇಡಿಕೆ ಹಾಗೂ ಸಮಿತಿ ನೀಡಿರುವ ಸಲಹೆಗಳನ್ನು ಪರಿಗಣಿಸುತ್ತಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಮಿತಿಯ ಸದಸ್ಯರೊಂದಿಗೆ ಸಭೆ ಕರೆದಿದ್ದೇವೆ. ನಾವು ಮಹಿಳಾ ಉದ್ಯೋಗಿಗಳನ್ನು ಬೆಂಬಲಿಸುತ್ತದೆ. ಅವರಿಗೆ ಇಂತಹ ಸಮಯದಲ್ಲಿ ರಜೆಯ ಅನಿವಾರ್ಯತೆ ಇದ್ದಾಗ ತೆಗೆದುಕೊಳ್ಳಲು ಅವಕಾಶ ನೀಡುತ್ತೇವೆ' ಎಂದು ಸಚಿವರು ಹೇಳಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications