ಬೆಂಗಳೂರು: ನಕಲಿ ಔಷಧ ಮಾರಾಟ ದಂಧೆಗೆ ಬ್ರೇಕ್; 24 ಫಾರ್ಮಾಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಿದ FDA
ಜನರ ಪ್ರಾಣ ಉಳಿಸಬೇಕಾದ ಜೀವ ರಕ್ಷಕ ಔಷಧಗಳ ಹೆಸರಿನಲ್ಲಿ ನಕಲಿ ಮಾತ್ರೆಗಳನ್ನ ಮಾರುಕಟ್ಟೆಗೆ ಬಿಡುತ್ತಿದ್ದ ದೊಡ್ಡ ಜಾಲವೊಂದನ್ನ ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (FDA) ಇತ್ತೀಚೆಗೆ ಭೇದಿಸಿದೆ. ಈ ನಕಲಿ ಔಷಧ ಕಾರ್ಯಾಚರಣೆಯ ಬೆನ್ನಲ್ಲೇ ರಾಜ್ಯಾದ್ಯಂತ ಔಷಧ ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಅಧಿಕಾರಿಗಳು, ಇದೀಗ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ನಕಲಿ ಔಷಧಿಗಳ ಮಾರಾಟ ಹಾಗೂ ವಿತರಣೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದ ಒಟ್ಟು 24 ಫಾರ್ಮಾ ವ್ಯಾಪಾರಿಗಳ ವಿರುದ್ಧ ಬಿಸಿ ಮುಟ್ಟಿಸಲಾಗಿದೆ.

ಭಾರಿ ನಕಲಿ ಔಷಧ ಜಾಲ ಭೇದಿಸಿದ ಎಫ್‌ಡಿಎ: 24 ಫಾರ್ಮಾ ಪರವಾನಗಿ ರದ್ದು
ನಕಲಿ ಔಷಧ ಜಾಲವನ್ನಾ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, 16 ಮಂದಿ ಔಷಧ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಪರವಾನಗಿ ರದ್ದು ಮಾಡಿದ್ದಾರೆ. ಇನ್ನುಳಿದ ಎಂಟು ಮಂದಿಯ ಲೈಸೆನ್ಸ್ ಅನ್ನ ಅಮಾನತುಗೊಳಿಸಲಾಗಿದೆ. ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಈ ಜಾಲದ ವಿರುದ್ಧ ಕೈಗೊಂಡಿರುವ ಈ ತ್ವರಿತ ಕ್ರಮವು ರಾಜ್ಯದ ವೈದ್ಯಕೀಯ ಹಾಗೂ ಫಾರ್ಮಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿತ್ತು ನಕಲಿ ಔಷಧ ದಂಧೆ
ಕರ್ನಾಟಕ ಎಫ್‌ಡಿಎಯ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಭಾಗದ ಅಧಿಕಾರಿಗಳು ಕಳೆದ ಆಗಸ್ಟ್ 18 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ಕುರುಬರಕೇರನಹಳ್ಳಿಯ ಫಾರ್ಮ್‌ಹೌಸ್ ಒಂದರ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದ ನಕಲಿ ಔಷಧ ಮರು-ಪ್ಯಾಕೇಜಿಂಗ್ ಮತ್ತು ಮರು-ಲೇಬಲಿಂಗ್ ಘಟಕವನ್ನ ಅಧಿಕಾರಿಗಳು ಈ ದಾಳಿಯ ಮೂಲಕ ಪತ್ತೆಹಚ್ಚಿದ್ದರು.
ಹೊರಗಿನಿಂದ ನೋಡಲು ಸಾಮಾನ್ಯ ತೋಟದ ಮನೆಯಂತೆ ಕಾಣುತ್ತಿದ್ದ ಈ ಜಾಗದಲ್ಲಿ, ಬೃಹತ್ ಮಟ್ಟದಲ್ಲಿ ಔಷಧಿಗಳ ಅಕ್ರಮ ದಂಧೆ ನಡೆಯುತ್ತಿತ್ತು. ಈ ಕಾರ್ಯಾಚರಣೆಯು ಎಫ್‌ಡಿಎ ಇತಿಹಾಸದಲ್ಲಿಯೇ ಅತಿ ದೊಡ್ಡ ಭೇಟೆಯಾಗಿ ಹೊರಹೊಮ್ಮಿದೆ.
ಅವಧಿ ಮುಗಿದ ಮಾತ್ರೆಗಳಿಗೆ ಕ್ಯೂಆರ್ ಕೋಡ್: ನಕಲಿ ಲೇಬಲ್ ಅಂಟಿಸಿ ವಂಚನೆ
ಈ ಜಾಲವು ನೆರೆಯ ರಾಜ್ಯಗಳಿಂದ ಅತ್ಯಂತ ಕಡಿಮೆ ಬೆಲೆಯ ಜೆನೆರಿಕ್ ಔಷಧಿಗಳನ್ನ ಕದ್ದುಮುಚ್ಚಿ ತರಿಸಿಕೊಳ್ಳುತ್ತಿತ್ತು. ಬಳಿಕ ಆ ಔಷಧಿಗಳನ್ನ ಸಣ್ಣ ಸಣ್ಣ ಬಾಟಲಿಗಳು ಹಾಗೂ ಹೊಸ ಕವರ್‌ಗಳಲ್ಲಿ ಮರು-ಪ್ಯಾಕ್ ಮಾಡಲಾಗುತ್ತಿತ್ತು. ಬಹುರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಕಂಪನಿಗಳು ತಯಾರಿಸುವ ಅತ್ಯಂತ ದುಬಾರಿ ಹಾಗೂ ಜೀವ ರಕ್ಷಕ ಔಷಧಿಗಳ ನಕಲಿ ಲೇಬಲ್‌ಗಳನ್ನ ಇವುಗಳಿಗೆ ಅಂಟಿಸಿ, ಅಸಲಿ ಔಷಧಗಳಂತೆಯೇ ಬಿಂಬಿಸಲಾಗುತ್ತಿತ್ತು.
ಗ್ರಾಹಕರನ್ನ ಹಾಗೂ ವೈದ್ಯರನ್ನ ನಂಬಿಸಲು ಈ ಲೇಬಲ್‌ಗಳ ಮೇಲೆ ನಕಲಿ ಕ್ಯೂಆರ್ ಕೋಡ್‌ಗಳನ್ನ ಸಹ ಮುದ್ರಿಸಲಾಗಿತ್ತು. ಇಷ್ಟೇ ಅಲ್ಲದೆ, ಅವಧಿ ಮುಗಿದ ಮಾತ್ರೆಗಳಿಗೆ ಹೊಸ ರೂಪ ಕೊಟ್ಟು, ಮತ್ತೆ ಮಾರುಕಟ್ಟೆಗೆ ಬಿಡಲು ಸಿದ್ಧಪಡಿಸಿಡಲಾಗಿದ್ದ ನೂರಾರು ಬಾಕ್ಸ್‌ಗಳನ್ನ ಸಹ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
16 ಫಾರ್ಮಸಿಗಳ ಲೈಸನ್ಸ್ ರದ್ದು
1. ಅವೆಸ್ಕೊ ಹೆಲ್ತ್‌ಕೇರ್
2. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ
3. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ
4. ಪಟೇಲ್ ಮೆಡಿ ಟ್ರೇಡ್
5. ರಾಜರಾಜೇಶ್ವರಿ ಫಾರ್ಮಾ
6. ಸೂರ್ಯ ಸ್ಪೆಷಾಲಿಟಿ ಫಾರ್ಮಾ
7. ಎಸ್‌ಡಬ್ಲ್ಯೂಎಸ್ ಫಾರ್ಮಾ
8. ಕೃಪಾ ಹೆಲ್ತ್‌ಕೇರ್
9. ಸೆಂಟ್ ಫಿಲೋಮಿನಾ ಹಾಸ್ಪಿಟಲ್ ಡ್ರಗ್ ಸೆಂಟರ್
10. ಸಾಗರ್ ಫಾರ್ಮಾ
11. ಝೈಮಸ್ ಫಾರ್ಮಾ
12. ಫಾರ್ಚೂನ್ ಮೆಡಿಕಲ್ ಸೊಲ್ಯೂಷನ್ಸ್
13. ಎಕ್ಸೆಲ್ಲೇರ್ ಫಾರ್ಮಾ
14. ಪಟೇಲ್ ಮೆಡಿಕಲ್
15. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ
16. ಎನ್.ಎಸ್. ಫಾರ್ಮಾ - ಹುಬ್ಬಳ್ಳಿ
ಲೈಸನ್ಸ್ ಅಮಾನತುಗೊಂಡಿರುವ ಫಾರ್ಮಸಿಗಳು
1. ಮೆಡ್ ಫಾರ್ಮಾ
2. ಸೂರ್ಯ ಸ್ಪೆಷಾಲಿಟಿ ಹಾಸ್ಪಿಟಲ್
3. ಸಾಗರ್ ಫಾರ್ಮಾ
4. ವಿವಾಂತ ಫಾರ್ಮಾಸ್ಯುಟಿಕಲ್ಸ್
5. ಮಾರುತಿ ಮೆಡಿಕಲ್ಸ್
6. ಹೈ-5 ಫಾರ್ಮಾ
7. ಫೈಜರ್ ಲಿಮಿಟೆಡ್
8. ವಿವಾ ಫಾರ್ಮಾ - ಬೆಳಗಾವಿ
ತಪ್ಪಿತಸ್ಥರಿಗೆ ಕಾದಿದೆ ಕಠಿಣ ಶಿಕ್ಷೆ: ಎಸ್‌ಐಟಿ ತನಿಖೆ ಚುರುಕು
ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಈ ಪ್ರಕರಣವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, 1940ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ 17B ಅಡಿಯಲ್ಲಿ ನಕಲಿ ಔಷಧಿಗಳ ತಯಾರಿಕೆ ಹಾಗೂ ಮಾರಾಟವನ್ನು ಗಂಭೀರ ಅಪರಾಧ ಎಂದು ವರ್ಗೀಕರಿಸಲಾಗಿದೆ.
ಸೆಕ್ಷನ್ 27 ರ ಪ್ರಕಾರ, ಇಂತಹ ಅಪರಾಧ ಸಾಬೀತಾದರೆ ತಪ್ಪಿತಸ್ಥರಿಗೆ ಕನಿಷ್ಠ 10 ವರ್ಷಗಳ ಕಠಿಣ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿ ಶಿಕ್ಷೆಯವರೆಗೆ ದಂಡನೆ ವಿಧಿಸಲು ಅವಕಾಶವಿದೆ. ಇದರ ಜೊತೆಗೆ ಭಾರಿ ಪ್ರಮಾಣದ ದಂಡವನ್ನ ಸಹ ವಿಧಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, "ರಾಜ್ಯದಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನರ ಜೀವದ ಜೊತೆ ಆಟವಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದ ಆಳ-ಅಗಲವನ್ನ ಭೇದಿಸಲು ಹಾಗೂ ಇದರಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರನ್ನ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನ ರಚಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಎಸ್‌ಐಟಿ ಅಧಿಕಾರಿಗಳು ಈ ರ‍್ಯಾಕೆಟ್‌ನ ಹಿಂದಿರುವ ಪ್ರಮುಖ ರೂವಾರಿಗಳ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.


Click it and Unblock the Notifications
