ಸೋಲನ್ನೇ ಸವಾಲಾಗಿ ಸ್ವೀಕರಿಸಿ ಗೆದ್ದ ಮುಧೋಳದ ಯುವ ರೈತ, ಅಣಬೆ ಕೃಷಿಯಲ್ಲಿ ಅತ್ಯದ್ಭುತ ಸಾಧನೆ
ಕಾಲಕ್ಕೆ ತಕ್ಕಂತೆ ಕೃಷಿ ಪದ್ಧತಿಯನ್ನೂ ಬದಲಿಸಿಕೊಂಡರೆ ಭೂತಾಯಿಯೇ ಹೊಸ ದಾರಿ ತೋರಿಸುತ್ತಾಳೆ ಎಂಬುದಕ್ಕೆ ಈ ರೈತನ ಕಥೆಯೇ ಪ್ರಮುಖ ಸಾಕ್ಷಿಯಾಗಿದೆ. ವಿಶೇಷ ಅಂದ್ರೆ ಈ ಯಶಸ್ಸು ಕಂಡಿರುವುದು ಕರ್ನಾಟಕದ ವ್ಯಕ್ತಿ. ಹಾಗಾದ್ರೆ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಕೃಷಿ ಎಂದರೆ ಕೇವಲ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುವುದಷ್ಟೇ ಅಲ್ಲ, ಸರಿಯಾದ ಯೋಜನೆಯಿದ್ದರೆ ಅತ್ಯಲ್ಪ ಬಂಡವಾಳದಲ್ಲೂ ಸಣ್ಣ ಜಾಗದಲ್ಲಿ ಭಾರಿ ಯಶಸ್ಸು ಕಾಣಬಹುದು ಎಂಬುದನ್ನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯುವ ರೈತ ಮಹೇಶ್ ಕೊಳೂರು ಪ್ರತ್ಯಕ್ಷವಾಗಿ ಸಾಬೀತುಪಡಿಸಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.

ಆರಂಭಿಕ ಸವಾಲುಗಳು ಹಾಗೂ ಮಾರುಕಟ್ಟೆಯ ಅಸ್ಥಿರತೆಯನ್ನು ಮೆಟ್ಟಿ ನಿಂತು ಇಂದು ಹೋಟೆಲ್ ಹಾಗೂ ಸೂಪರ್ ಮಾರ್ಕೆಟ್‌ಗಳಿಗೆ ಪ್ರತಿದಿನ ನೂರಾರು ಕೆ.ಜಿ. ಅಣಬೆ ಪೂರೈಸುತ್ತಿರುವ ಈ ಉದ್ಯಮಿಯ ಯಶಸ್ಸಿನ ಪಯಣ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಅದರಲ್ಲೂ ಈ ರೋಚಕ ಕಥೆ ಈಗಿನ ಯುವ ಪೀಳಿಗೆಯವರಿಗೆ ಹೇಳಿ ಮಾಡಿಸಿದಂತಿದೆ.
ಕರ್ನಾಟಕದ ರೈತನ ಯಶಸ್ಸಿನ ಕಥೆ
ಸಂಪ್ರದಾಯಿಕ ಬೆಳಗಳನಷ್ಟೇ ನಂಬಿಕೊಳ್ಳದೆ ವೈವಿಧ್ಯಮಯ ಕೃಷಿಯತ್ತ ಹೆಜ್ಜೆ ಇಟ್ಟು ಯಶಸ್ಸು ಸಾಧಿಸಿದ ಸಾಧಕರ ಕಥೆಗಳು ಹಲವರಿಗಿಂದು ಸ್ಪೂರ್ತಿಯಾಗಿವೆ. ಹಾಗೆಯೇ ಇದೀಗ ಕರ್ನಾಟಕದ ರೈತರೊಬ್ಬರು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಅಣಬೆ ಕೃಷಿ ಉದ್ಯಮ ಇಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಈ ಕುರಿತು ಮಾತನಾಡಿದ ರೈತ ತಮ್ಮ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.
ಉದ್ಯಮಿ ಮಹೇಶ್ ಹೇಳಿದ್ದೇನು?
'ಆರಂಭಿಕ ದಿನಗಳಲ್ಲಿ ಕೇವಲ 30 ಬ್ಯಾಗ್‌ಗಳಷ್ಟು ಅಣಬೆ ಬೆಳೆಯುತ್ತಿದ್ದೆ. ಆದರೆ ಈಗ ಪ್ರತಿದಿನ ಸರಾಸರಿ 200 ಕೆ.ಜಿ.ಯಷ್ಟು ಅಣಬೆಯನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದೇನೆ. ಕೃಷಿಯಲ್ಲಿ ಎದುರಾದ ಆರಂಭಿಕ ಅಡೆತಡೆಗಳು, ತಾಂತ್ರಿಕ ಸವಾಲುಗಳು ಮತ್ತು ಮಾರುಕಟ್ಟೆ ಅಸ್ಥಿರತೆಯನ್ನು ಮೆಟ್ಟಿ ನಿಂತು, ನಿರಂತರ ಶ್ರಮದಿಂದ ಈ ಉದ್ಯಮ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ,' ಎಂದು ಹೇಳಿದ್ದಾರೆ.
ಕೃಷಿ ಡಿಪ್ಲೊಮಾ ಮುಗಿಸಿದ್ದ ಮಹೇಶ್ ಅವರು 2021ರಲ್ಲಿ ಕೇವಲ 30 ಅಣಬೆ ಬ್ಯಾಗ್‌ಗಳೊಂದಿಗೆ ಕೃಷಿಗೆ ಕಾಲಿಟ್ಟಿದ್ದರು. ಆರಂಭದಲ್ಲಿ ದಿನಕ್ಕೆ ಕೇವಲ 3 ಕೆ.ಜಿ. ಸಿಗುತ್ತಿದ್ದ ಇಳುವರಿಯು ಅವರ ಸತತ ಪ್ರಯತ್ನದಿಂದಾಗಿ ಇಂದು ದಿನಕ್ಕೆ ಸರಾಸರಿ 200 ಕೆ.ಜಿ. ಅಣಬೆ ಉತ್ಪಾದಿಸುವ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ.
ಮಹೇಶ್ ಅವರ ಸಂಬಂಧಿಯೊಬ್ಬರು ಸೂಕ್ತ ಮಾರುಕಟ್ಟೆ ಸಿಗದೆ ಅಣಬೆ ಕೃಷಿಯಲ್ಲಿ ನಷ್ಟ ಅನುಭವಿಸಿ ಕೆಲಸ ಕೈಬಿಟ್ಟಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಮಹೇಶ್ ಅವರ ರಾಜ್ಯದ ವಿವಿಧ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಆರಂಭದಲ್ಲಿ ಬೈಕ್‌ನಲ್ಲಿ ಪ್ರತಿದಿನ 50 ಕಿ.ಮೀ. ಸಂಚರಿಸಿ, ಜನರಿಗೆ ಅಣಬೆಯ ಪೌಷ್ಟಿಕಾಂಶದ ಅರಿವು ಮೂಡಿಸುತ್ತಾ ನೇರ ಮಾರಾಟ ಮಾಡುತ್ತಿದ್ದರು. ತದನಂತರ ಕೃಷಿ ಮೇಳಗಳು, ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿ ವ್ಯಾಪಾರವನ್ನು ವಿಸ್ತರಿಸಿಕೊಂಡರು.
ಕೇವಲ ಅಣಬೆ ಮಾರಾಟಕ್ಕೆ ಸೀಮಿತವಾಗದೆ 2024ರಿಂದ ಸಂಸ್ಕರಣೆಗೆ ಕೈಹಾಕಿದ ಮಹೇಶ್, ಅಣಬೆ ಪುಡಿ, ಕುಕ್ಕೀಸ್, ಪಾಪಡ್, ಚಿಪ್ಸ್, ಉಪ್ಪಿನಕಾಯಿ ಸೇರಿದಂತೆ 20ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ತಮ್ಮ ತಾಯಿಗೆ ಅಣಬೆ ಪುಡಿ ನೀಡಿ ಆರೋಗ್ಯ ಸುಧಾರಿಸಿದ್ದು, ಈ ಹೊಸ ಉತ್ಪನ್ನಗಳನ್ನು ಆವಿಷ್ಕರಿಸಲು ಪ್ರೇರಣೆಯಾಯಿತು.
ತರಬೇತುದಾರನಾಗಿ ಸಾವಿರಾರು ಜನರಿಗೆ ದಾರಿ
ತಾವು ಗಳಿಸಿದ ಜ್ಞಾನವನ್ನು ಬೇರೆಯವರಿಗೆ ಧಾರೆಯೆರೆಯಲು 2024ರಿಂದ ತರಬೇತಿ ಕೇಂದ್ರ ಆರಂಭಿಸಿದ ಮಹೇಶ್, ಈವರೆಗೆ 3,000ಕ್ಕೂ ಹೆಚ್ಚು ಜನರಿಗೆ ಅಣಬೆ ಕೃಷಿ ತರಬೇತಿ ನೀಡಿದ್ದಾರೆ. ಇವರಲ್ಲಿ ಶೇಕಡ 30ರಷ್ಟು ಜನರು ಸ್ವಂತ ಘಟಕ ತೆರೆದಿದ್ದು, ಹಲವರು ತಾವು ಬೆಳೆದ ಅಣಬೆಯನ್ನು ಮಹೇಶ್ ಅವರ ಸಂಸ್ಕರಣಾ ಘಟಕಕ್ಕೇ ಪೂರೈಸುತ್ತಿದ್ದಾರೆ. ಇವರ ಈ ನವೀನ ಪ್ರಯತ್ನವನ್ನು ಗುರುತಿಸಿ ಕೃಷಿ ಇಲಾಖೆಯ ನವ ಉದ್ಯಮ ಯೋಜನೆಯಡಿ ಆರ್ಥಿಕ ನೆರವು ನೀಡಿ ಗೌರವಿಸಲಾಗಿದೆ. ಕೇವಲ 30,000 ಬಂಡವಾಳ ಹಾಗೂ ಸಣ್ಣ ಶೆಡ್ ಇದ್ದರೆ ದಿನಕ್ಕೆ 2-3 ಗಂಟೆ ಶ್ರಮವಹಿಸಿ ತಿಂಗಳಿಗೆ 30,000ಕ್ಕೂ ಹೆಚ್ಚು ಗಳಿಸಬಹುದು ಎಂದು ಮಹೇಶ್ ತೋರಿಸಿಕೊಟ್ಟಿದ್ದಾರೆ.


Click it and Unblock the Notifications
