ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ; ದುಬಾರಿ ವಿದ್ಯುತ್ ಖರೀದಿ ನಡುವೆ ಬೆಸ್ಕಾಂಗೆ ₹293.62 ಕೋಟಿ ಲಾಭ!
ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಈ ವರ್ಷ ಮಳೆಯ ಕೊರತೆ, ಗೃಹಜ್ಯೋತಿ ಯೋಜನೆ ಸೇರಿದಂತೆ ವಿವಿಧ ಕಾರಣಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಈಗ ಕರ್ನಾಟಕದಲ್ಲಿ ಎಲ್ಲ ಕಡೆ ವಿದ್ಯುತ್ ಬೇಡಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಸರ್ಕಾರ ಉಳಿತಾಯದ ಕಡೆ ಗಮನ ಹರಿಸದೆ ವಿದ್ಯುತ್ ಖರೀದಿಯಲ್ಲಿ ನಿರತವಾಗಿದೆ. ಬಯಲುಸೀಮೆಯಾದ ಕೋಲಾರ, ತುರುವೇಕೆರೆಯಲ್ಲಿ ಬೆಳಗ್ಗೆ ಮತ್ತು ಸಂಜೆ 1 ಗಂಟೆ ವಿದ್ಯುತ್ ಇರುವುದಿಲ್ಲ. ಪಂಪ್‌ಸೆಟ್‌ಗೆ ದಿನದಲ್ಲಿ 2 ಗಂಟೆ ವಿದ್ಯುತ್ ಇರುವುದಿಲ್ಲ. ಜನ ಈಗ ಚಂಡಮಾರುತಕ್ಕೆ ಜಪ ಮಾಡುತ್ತ ಕುಳಿತಿದ್ದಾರೆ. ದಕ್ಷಿಣ ಭಾರತದಲ್ಲಿ ಎಲ್ಲೂ ವಿದ್ಯುತ್ ಲಭ್ಯವಿಲ್ಲ. ಈಶಾನ್ಯ ರಾಜ್ಯಗಳಿಂದ ಹೆಚ್ಚುವರಿ ವಿದ್ಯುತ್ ಪಡೆಯಬೇಕು. ಪ್ರತಿ ಯೂನಿಟ್ ದರ 13 ರೂಗಳಿಂದ 30 ರೂವರೆಗೆ ಬೆಳೆದಿದೆ.
ಸೋಲಾರ್ ವಿದ್ಯುತ್ 2-3 ರೂಗಳಿಗೆ ಲಭ್ಯವಿದ್ದರೂ ಅದನ್ನು ಬಳಸಿಕೊಳ್ಳಲು ವಿದ್ಯುತ್ ಗ್ರಿಡ್ ಜಾಲ ಪ್ರಬಲವಾಗಿಲ್ಲ. ಅಲ್ಲದೆ ಸೋಲಾರ್ ಹಗಲು ಮಾತ್ರ ಲಭ್ಯ. ಪವನ ವಿದ್ಯುತ್ ಲೆಕ್ಕಕ್ಕಿಲ್ಲ. ಮಳೆ ಸೂಚನೆ ಇಲ್ಲ. ಅದರೊಂದಿಗೆ ಈ ಬಾರಿ ಚಳಿಗಾಲ ಬರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಅಂದರೆ ವಿದ್ಯುತ್ ಬಳಕೆ ಇಳಿಮುಖಗೊಳ್ಳುವ ಲಕ್ಷಣ ಇಲ್ಲ. ಈಗ ಪ್ರತಿದಿನ 300 ದಶಲಕ್ಷ ಯೂನಿಟ್ ಬಳಕೆಯಾಗುತ್ತಿದೆ. ಇದರಲ್ಲಿ 90 ದಶಲಕ್ಷ ಯೂನಿಟ್ ಖಾಸಗಿಯದು. ಜಲ ವಿದ್ಯುತ್ ಕೇವಲ 21 ದಶಲಕ್ಷ ಯೂನಿಟ್ ನೀಡುತ್ತಿದೆ. ಡಿಸೆಂಬರ್ ಒಳಗೆ ಮಳೆ ಬಾರದೆ ಹೋದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ.

ಕರ್ನಾಟಕದಲ್ಲಿ ಈಗ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಸಂಜೆ 6 ರಿಂದ 10 ವರೆಗೆ ಕೊರತೆ ಅಧಿಕಗೊಂಡಿದೆ. ಇದಕ್ಕಾಗಿ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ 13 ರೂ.ಗಳಿಂದ 20 ರೂ ವರೆಗೆ ಖರೀದಿ ಮಾಡಿ ನಗರ ಪ್ರದೇಶದ ಜನರಿಗೆ ನೀಡಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಸರಿಸಮಾನವಾಗಿ ಲೋಡ್‌ಶೆಡ್ಡಿಂಗ್ ಜಾರಿಗೆ ತರಲಾಗಿದೆ. ಈಗ ಎಲ್ಲೆಲ್ಲಿ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿದೆಯೊ ಅಲ್ಲಿಯ ಗ್ರಾಹಕರಿಗೆ ದುಬಾರಿ ವಿದ್ಯುತ್ ಖರೀದಿಯ ಹೊರೆಯನ್ನು ಮುಂಬರುವ ದಿನಗಳ ಮಾಸಿಕ ಬಿಲ್‌ನಲ್ಲಿ ಸೇರಿಸಲು ಬರುವುದಿಲ್ಲ.
ಇದನ್ನು ಕೆಇಆರ್‌ಸಿ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ದುಬಾರಿ ವಿದ್ಯುತ್ ಪಡೆಯದವರೂ ಹೆಚ್ಚಿನ ದರ ನೀಡಬೇಕಾಗುತ್ತದೆ. ಪ್ರತಿ ತಿಂಗಳೂ ಇಂಧನ ದರ ಹೊಂದಾಣಿಕೆಗೆ ಕೆಇಆರ್‌ಸಿ ಮೊದಲೇ ಅವಕಾಶ ನೀಡಿದೆ. ದಕ್ಷಿಣ ಭಾರತದಲ್ಲಿ ಎಲ್ಲ ರಾಜ್ಯಗಳು ಈಗ ದುಬಾರಿ ವಿದ್ಯುತ್ ಖರೀದಿ ಮಾಡುತ್ತಿವೆ. ಪ್ರತಿ ಯೂನಿಟ್‌ಗೆ 13 ರೂಗಳಿಂದ 30 ರೂವರೆಗೆ ಮಾರುಕಟ್ಟೆಯಲ್ಲಿ ವಿದ್ಯುತ್ ಮಾರಾಟವಾಗುತ್ತಿದೆ. ನಮ್ಮಲ್ಲಿ ಕೂಡಗಿಯಲ್ಲಿ ಎನ್‌ಟಿಪಿಸಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ. ಅದರಿಂದ ಹೆಚ್ಚುವರಿ ವಿದ್ಯುತ್ ಪಡೆಯಬಹುದು. ಆದರೆ ಖಾಸಗಿ ವಿದ್ಯುತ್ ಖರೀದಿಮಾಡಿದರೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಜೇಬು ತುಂಬುತ್ತದೆ. ಹೀಗಾಗಿ ಖಾಸಗಿ ವಿದ್ಯುತ್‌ಗೆ ಬೇಡಿಕೆ ಅಧಿಕಗೊಂಡಿದೆ.
ವಿದ್ಯುತ್ ಖರೀದಿ ದರ ವಿವರ
ಪ್ರತಿದಿನ ಸರಾಸರಿ ಖರೀದಿ 6.47 ರೂ. ಯೂನಿಟ್‌ಗೆ
ಈಗ ಮುಕ್ತ ಮಾರುಕಟ್ಟೆ ದರ 14 ರೂ.
ದೀರ್ಘಕಾಲಿಕ ಒಪ್ಪಂದ ದರ 7.50 ರೂ.
ದಿನದ ಬೇಡಿಕೆ 300 ದಶಲಕ್ಷ ಯೂನಿಟ್
ಲೋಡ್‌ಶೆಡ್ಡಿಂಗ್ ದಿನಕ್ಕೆ 2-3 ಗಂಟೆ
ಒಟ್ಟು ಕೊರತೆ 2 ಸಾವಿರ ಮೆಗಾವ್ಯಾಟ್

ಪ್ರಸಕ್ತ ಸಾಲಿನಲ್ಲಿ ಬೆಸ್ಕಾಂಗೆ ಬರೋಬ್ಬರಿ 293.62 ರೂ. ಕೋಟಿ ಲಾಭ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು 2025-26ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 293.62 ಕೋಟಿ ರೂ. ಲಾಭ ದಾಖಲಿಸಿದೆ. ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಸ್ಕಾಂನ 144ನೇ ಆಡಳಿತ ಮಂಡಳಿ ಸಭೆಯಲ್ಲಿ 2025-26ನೇ ಸಾಲಿನ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆ ಹಾಗೂ ಲಾಭ ದಾಖಲಿಸಲು ಕಾರಣವಾದ ಅಂಶಗಳನ್ನು ಮಂಡಿಸಲಾಯಿತು.
ಬೆಸ್ಕಾಂ ಲಾಭದ ಹಾದಿಯಲ್ಲಿ ಸಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇಂಧನ ಸಚಿವರು, "ಹೆಚ್ಚಿದ ಆದಾಯ ವಸೂಲಿ, ವಿದ್ಯುತ್ ಖರೀದಿಯಲ್ಲಿ ಸಮರ್ಪಕ ನಿರ್ವಹಣೆ ಮತ್ತು ಹಣಕಾಸು ವೆಚ್ಚದಲ್ಲಿನ ಇಳಿಕೆ, ಆರ್ಥಿಕ ಶಿಸ್ತು ಹೆಚ್ಚಿಸಿರುವುದು ಮುಂತಾದ ಸಂಯೋಜಿತ ಪರಿಣಾಮವಾಗಿ 2025-26ನೇ ಸಾಲಿನಲ್ಲಿ ಬೆಸ್ಕಾಂ 293.62 ಕೋಟಿ ರೂ. ಲಾಭ ದಾಖಲಿಸಲು ಸಾಧ್ಯವಾಗಿದೆ. ಅಲ್ಲದೆ, ಆದಾಯ ಹೆಚ್ಚಳ ಮತ್ತು ವೆಚ್ಚ ನಿಯಂತ್ರಣಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸುಧಾರಣೆ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆದಾಯದ ಬಗ್ಗೆ ಮಾತನಾಡಿರುವ ಸಚಿವ ಕೆ.ಜೆ ಜಾರ್ಜ್ ಅವರು, ನಮ್ಮ ಸಮರ್ಪಕ ಬಿಲ್ಲಿಂಗ್ ವ್ಯವಸ್ಥೆಯು ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರೋಬ್ ರೀಡಿಂಗ್ ವ್ಯವಸ್ಥೆಯಿಂದ ಸಿಬ್ಬಂದಿ ಹಸ್ತಕ್ಷೇಪ ಕಡಿಮೆಯಾಗಿದ್ದು, ಬಿಲ್ಲಿಂಗ್ ನಿಖರತೆ ಹೆಚ್ಚಿದೆ. ಇದರಿಂದ ಸುಮಾರು 100 ಮಿಲಿಯನ್ ಯೂನಿಟ್ ಹೆಚ್ಚುವರಿ ವಿದ್ಯುತ್ ಮಾರಾಟಕ್ಕೆ ಕಾರಣವಾಗಿರುವುದರ ಜತೆಗೆ ಗರಿಷ್ಠ ಬೇಡಿಕೆಯನ್ನು ನಿಖರವಾಗಿ ದಾಖಲಿಸಲು ಸಹ ನೆರವಾಗಿದೆ. ಹೆಚ್ಚಿನ ಆದಾಯ ನೀಡುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರ ವಿಭಾಗದಲ್ಲಿ ಶೇ.100ರಷ್ಟು ಬಿಲ್ಲಿಂಗ್ ದಕ್ಷತೆ ಸಾಧಿಸಲು ಬೆಸ್ಕಾಂ ಮುಂದಾಗಿದೆ ಎಂದಿದ್ದಾರೆ.
ಹೆಚ್ಚಿನ ಮೊತ್ತದ ಬಾಕಿ ಹಣಕ್ಕೆ ಸಂಬಂಧಿತ ಕಾನೂನು ಹೋರಾಟ ಮತ್ತು ನಿಯಂತ್ರಣ ಸಂಬಂಧಿತ ಪ್ರಕರಣಗಳ ನಿರಂತರ ಅನುಸರಣೆ ಮೂಲಕ ಕಂಪನಿಗೆ ಬರಬೇಕಿದ್ದ ಆದಾಯವನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ನಿಗದಿತ ಶುಲ್ಕ, ಕ್ರಾಸ್ ಸಬ್ಸಿಡಿ ಸರ್ಚಾರ್ಜ್ ಮತ್ತು ಹೆಚ್ಚುವರಿ ಸರ್ಚಾರ್ಜ್‌ಗಳ ಮೂಲಕ ಲಭ್ಯವಾಗುವ ಆದಾಯವೂ ಸೇರಿದೆ. ಸರಾಸರಿ ಆದಾಯ ವಸೂಲಿ (ಎಆರ್‌ಆರ್)ಯನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ಆದಾಯದ ಮೇಲ್ವಿಚಾರಣೆ, ಉತ್ತಮ ದರ ಪರಿಷ್ಕರಣೆ ಪ್ರಸ್ತಾವನೆಗಳು ಮತ್ತು ಪರಿಣಾಮಕಾರಿ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ವೆಚ್ಚ ನಿರ್ವಹಣೆ ಹಾಗೂ ನಷ್ಟ ಆಗದಂತೆ ವಹಿಸಿದ ಎಚ್ಚರಿಕಾ ಕ್ರಮಗಳನ್ನು ವಿವರಿಸಿದ ಸಚಿವರು, "ವಿದ್ಯುತ್ ಖರೀದಿಯ ಸಮರ್ಪಕ ನಿರ್ವಹಣೆ, ಹಳೆಯ ಬಾಕಿಗಳನ್ನು ಕಂತುಗಳಲ್ಲಿ ಪಾವತಿಸುವ ಮೂಲಕ ವಿಳಂಬ ಪಾವತಿಯ ಹೆಚ್ಚುವರಿ ಶುಲ್ಕದ (ಎಲ್‌ಪಿಎಸ್) ಹೊರೆ ಕಡಿಮೆ ಮಾಡುವುದರ ಜತೆಗೆ, ಅರ್ಹ ಎಫ್.ಪಿ.ಪಿ.ಸಿ.ಎ. ಮೊತ್ತಗಳನ್ನು ಮತ್ತೆ ಪಡೆಯಲಾಗಿದೆ. ಅಲ್ಲದೇ, ವಿದ್ಯುತ್ ಉತ್ಪಾದನಾ ಸಂಸ್ಥೆಗಳು ನೀಡುವ ಮುಂಗಡ ಪಾವತಿ ರಿಯಾಯಿತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂದರು.
ಹೆಚ್ಚಿನ ಬಡ್ಡಿದರದ ಸಾಲಗಳ ಪುನರ್‌ರಚನೆ ಮೂಲಕ ಹಣಕಾಸು ವೆಚ್ಚವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಬಡ್ಡಿ ವೆಚ್ಚ ಇಳಿಕೆಯಾಗುವುದರ ಜತೆಗೆ, ನಗದು ನಿರ್ವಹಣೆಯೂ ಸುಧಾರಿಸಿದೆ. ಸಾಲದ ಪಾವತಿಯಲ್ಲಿ ಬೆಸ್ಕಾಂ ಯಾವುದೇ ಡಿಫಾಲ್ಟ್ ಮಾಡಿಲ್ಲ ಎಂದು ಸಚಿವರು ಹೇಳಿದ್ದಾರೆ.



Click it and Unblock the Notifications
