Rain: ರಾಜ್ಯದಲ್ಲಿ ಶೇ 43 ಮಳೆ ಕೊರತೆ: ಬರದತ್ತ ಕರ್ನಾಟಕ, ಕೃಷಿ ಇಲಾಖೆ ಅನಾಥ: ಅಶೋಕ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಆಗಿ ಮುಂಗಾರು ಹಂಗಾಮಿನ ಬೆಳೆ ಒಣಗುತ್ತಿದೆ. ರಾಜ್ಯದ ಅನ್ನದಾತ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಕಾಯುತ್ತಿದ್ದರೆ, ನಿಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ ಅಧಿಕಾರ ಹಂಚಿಕೆಯ ಲೆಕ್ಕಾಚಾರದಲ್ಲೇ ಮುಳುಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಇಡೀ ಕೃಷಿ ವಲಯ ಸಂಕಷ್ಟದಲ್ಲಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಒಮ್ಮೆ ವಿಧಾನಸೌಧದಿಂದ ಹೊರಗೆ ಬಂದು ರೈತರ ಹೊಲಗಳತ್ತ ಕಣ್ಣಾಡಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಕ್ಸ್ ಪೋಸ್ಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರು ಮಳೆಗೆ ಕಾಯುತ್ತಿದ್ದಾರೆ. ಬಿತ್ತಿದ ಬೆಳೆ ಕೈಗೆ ಸಿಗುವ ಅನುಮಾನ, ಚಿಂತೆ ಅವರಲ್ಲಿ ಕಾಡುತ್ತಿದೆ. ಕೃಷಿ ಸಚಿವರನ್ನು ಆಯ್ಕೆ ಮಾಡದೇ ಇಲಾಖೆಯನ್ನು ಸರ್ಕಾರ ಅನಾಥವಾಗಿಸಿದೆ ಎಂದು ಅವರು ದೂರಿದ್ದಾರೆ.

ಕರ್ನಾಟಕವು ಸಂಪೂರ್ಣ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಳೆ ಸಾಮಾನ್ಯಕ್ಕಿಂತ ಶೇ. 43 ರಷ್ಟು ಕಡಿಮೆಯಾಗಿದೆ. ಬಿತ್ತನೆ ಋತುಮಾನದ ಗುರಿಯ ಕೇವಲ ಶೇ. 30 ರಷ್ಟು ತಲುಪಿದೆ. ಬೆಳೆಗಳು ಒಣಗುತ್ತಿವೆ, ರೈತರು ಸಂಕಷ್ಟದಲ್ಲಿದ್ದಾರೆ ಮತ್ತು ಖಾರಿಫ್ ಋತುವು ವಿಪತ್ತಿನತ್ತ ಜಾರುತ್ತಿದೆ. ರೈತರು ಬರ ಮತ್ತು ಅನಿಶ್ಚಿತತೆಯ ವಿರುದ್ಧ ಹೋರಾಡುತ್ತಿರುವಾಗ, ಕಾಂಗ್ರೆಸ್ ಸರ್ಕಾರವು ಅಂತ್ಯವಿಲ್ಲದ ಬಣ ಯುದ್ಧ, ಸಚಿವ ಚೌಕಾಶಿ ಮತ್ತು ಅಧಿಕಾರ ಹಂಚಿಕೆ ರಾಜಕೀಯದಲ್ಲಿ ಸಿಲುಕಿಕೊಂಡಿದೆ ಎಂದು ಕಿಡಿ ಕಾರಿದರು.
30 ವರ್ಷಗಳ ಬಳಿಕ ಭದ್ರಾ ಒಡಲು ಖಾಲಿ
ರಾಜ್ಯದ ಬಯಲುಸೀಮೆಯ ಜೀವನಾಡಿಯಾಗಿರುವ ಭದ್ರಾ ನದಿ ಇಂದು ಮರಳುಗಾಡಿನಂತಾಗಿದೆ. ಮೂರು ದಶಕಗಳ ಬಳಿಕ ನದಿಯ ಒಡಲು ಸಂಪೂರ್ಣ ಒಣಗಿ ಹೋಗಿದೆ. ನದಿಯ ಮಧ್ಯದಲ್ಲೇ ಯುವಕರು ವಾಲಿಬಾಲ್ ಆಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ನದಿಯ ದುಸ್ಥಿತಿ ಅಲ್ಲ, ಇದು ಕಾಂಗ್ರೆಸ್ ಸರ್ಕಾರದ ಆದ್ಯತೆಗಳ ದಿವಾಳಿತನದ ಸಂಕೇತ ಎಂದರು.
ಮುಂಗಾರು ಮಳೆ ಕೊರತೆ: ಬರ ಜಿಲ್ಲೆಗಳೆಂದು ಘೋಷಣೆಗೆ ಆಗ್ರಹ
ಹಾವೇರಿ ಜಿಲ್ಲೆಯಲ್ಲಿ ಶೇ.57 ರಷ್ಟು ಮಳೆ ಕೊರತೆ ಉಂಟಾಗಿದೆ. ಬಿತ್ತಿದ ಬೀಜ ಗೇಣುದ್ದದ ಸಸಿಯಾಗಿದ್ದು, ಬಿಸಿಲಿಗೆ ಕಮರಿದೆ. ಅದೇ ರೀತಿ ಕಲಬುರಗಿಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಬೀದಿಗಿಳಿದು ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸುತ್ತಿದ್ದಾರೆ. ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ನಿಮ್ಮ ಕಲಬುರಗಿಯ ಸಚಿವರು ಮಾತ್ರ ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಸುದ್ದಿಯಲ್ಲಿರುವ ತಂತ್ರಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ.
ಸಾಲ ಮಾಡಿ ಬಿತ್ತನೆ ಮಾಡಿದ ರೈತ ತನ್ನ ಬೆಳೆ ಉಳಿಸಿಕೊಳ್ಳಲಾಗದೆ ಕಂಗಾಲಾಗಿದ್ದಾನೆ. ಇತ್ತ ಮಳೆಯು ಇಲ್ಲ, ಫಸಲು ಇಲ್ಲದಂತಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರಕ್ಕೆ ರೈತರ ಸಂಕಷ್ಟಗಳೇ ಕಾಣುತ್ತಿಲ್ಲ ಎಂದು ತಿಳಿಸಿದರು.
ರೈತರು ಮಳೆಗಾಗಿ ಪೂಜೆ ಮಾಡುತ್ತಿದ್ದಾರೆ. ಮಳೆ ಇಲ್ಲದೇ ಜಲಾಶಯಗಳು ಬರಿದಾಗುತ್ತಿವೆ. ಬರಗಾಲದ ಭೀತಿ ರಾಜ್ಯವನ್ನು ಆವರಿಸುತ್ತಿದೆ. ರಾಜ್ಯಕ್ಕೆ ಕೃಷಿ ಸಚಿವರೇ ಇಲ್ಲದಾಗಿದೆ. ಕಳೆದ ಒಂದು ತಿಂಗಳಿಂದ ರಾಜ್ಯಕ್ಕೆ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲದಾಗಿದ್ದು, ರೈತರ ಸಂಕಷ್ಟ ಕೇಳುವವರಿಲ್ಲ. ಹಾವೇರಿ, ಕಲಬುರಗಿ, ಗದಗ, ಚಿಕ್ಕಮಗಳೂರು, ವಿಜಯಪುರ ಸೇರಿದಂತೆ ರಾಜ್ಯದ ಮೂಲೆಮೂಲೆಗಳಲ್ಲಿ ರೈತರು ಆತಂಕದಲ್ಲಿದ್ದಾರೆಂದು ಕಳವಳ ವ್ಯಕ್ತಪಡಿಸಿದರು. ಇದಕ್ಕಿಂತ ದೊಡ್ಡ ಆಡಳಿತ ವೈಫಲ್ಯ ಇನ್ನೇನು ಬೇಕು? ಎಂದು ಅವರು ಪ್ರಶ್ನಿಸಿದರು.
ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲಿಸಿ
ರಾಜ್ಯದಲ್ಲಿ ಬರಗಾಲದ ಸ್ಥಿತಿ ಇದ್ದು, ಮುಖ್ಯಮಂತ್ರಿಗಳು ಕೂಡಲೇ ಜಿಲ್ಲಾ ಪ್ರವಾಸ ಕೈಗೊಳ್ಳಬೇಕು. ಅರ್ಹ ರೈತರಿಗೆ ಪರಿಹಾರ ಘೋಷಿಸಬೇಕು. ಅದಾಗದಿದ್ದರೆ ರಾಜ್ಯ ಸರ್ಕಾರಕ್ಕೆ ರೈತರಿಗಿಂತ ಕುರ್ಚಿಯೇ ಮುಖ್ಯ ಎಂದು ಹೇಳಿ ಬಿಡಿ ಎಂದು ಲೇವಡಿ ಮಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಸಮಸ್ಯೆ ಆಲಿಸಲು ಸಮಯವಿಲ್ಲ, ಕೃಷಿ ಯೋಜನೆಗೆ ಸಮಯವಿಲ್ಲ, ಬರಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಮಯವಿಲ್ಲ, ಸಚಿವ ಸಂಪುಟದ ಒಳಜಗಳ ಮತ್ತು ರಾಜಕೀಯ ಒಪ್ಪಂದ ಮಾಡಿಕೊಳ್ಳಲು ಸಾಕಷ್ಟು ಸಮಯವಿದೆ. ಕೃಷಿ ತುರ್ತು ಪರಿಸ್ಥಿತಿಯ ಮಧ್ಯದಲ್ಲಿ ಪೂರ್ಣ ಸಮಯದ ಕೃಷಿ ಸಚಿವರನ್ನು ನೇಮಿಸಲು ಸಾಧ್ಯವಾಗದ ಸರ್ಕಾರವು ರೈತರೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೊಳ್ಳುವ ನೈತಿಕ ಅಧಿಕಾರವನ್ನು ಹೊಂದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.














Click it and Unblock the Notifications