KEA: ವೃತ್ತಿಪರ ಕೋರ್ಸ್‌ಗಳ ಶುಲ್ಕ ಹೆಚ್ಚಿಸಿ ಅಧಿಕೃತ ಆದೇಶ: ಸರ್ಕಾರದಿಂದ ಮತ್ತೊಂದು ಹೊರೆ
ಬೆಂಗಳೂರು, ಜುಲೈ 21: ಇಂಧನ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೆ ಇದೀಗ ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆದೇಶ ಹೊರಡಿಸಿದೆ. ಈ ಮೂಲಕ ಮತ್ತೊಂದು ಶಾಕ್ ನೀಡಲಾಗಿದೆ.
ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ದರವನ್ನು ಶುಲ್ಕವನ್ನು ಶೇಕಡಾ 10ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಶುಲ್ಕ ಹೆಚ್ಚಿಸಿ ನಿಗದಿ ಮಾಡಿರುವ ಈ ಹೊಸ ಆದೇಶವು ಇದೇ ವರ್ಷದ 2024-25ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಆದೇಶಿಸಲಾಗಿದೆ.

ಶುಲ್ಕ ಎಷ್ಟು ಹೆಚ್ಚಾಗಿದೆ? ಆದೇಶದಲ್ಲಿ ಏನಿದೆ?
ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಇತರ ಶುಲ್ಕವಾಗಿ ವಾರ್ಷಿಕ ರೂ.20,000/-ಗಳನ್ನು ಮೀರದಂತೆ ಪ್ರಥಮ ವರ್ಷದ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ಪಾವತಿಸಬೇಕೆಂದು ತಿಳಿಸಿದೆ.
ನಂತರದ ವರ್ಷಗಳಲ್ಲಿ ಆಯಾಯ ಕಾಲೇಜುಗಳಲ್ಲಿಯೇ ಪಾವತಿಸಬೇಕು. ಈ ಶುಲ್ಕಕ್ಕೆ ಕಾಲೇಜುಗಳಿಂದ ಬ್ರೇಕ್ ಅಪ್ ಪಡೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಹಾಗೂ ಆಯಾಯ ಕಾಲೇಜುಗಳ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಆಯಾಯ ಕಾಲೇಜುಗಳ ಪ್ರಾಂಶುಪಾಲರುಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.
ಈ ಕಾಲೇಜುಗಳಿಗೆ ಶುಲ್ಕ ನಿಗದಿ
ಸರ್ಕಾರಿ ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯದ ಶೇಕಡಾ 50ರಷ್ಟು ಸೀಟುಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು (ಶೇ.50ರಷ್ಟು ಸೀಟುಗಳಿಗೆ), ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ವಿಶ್ವವಿದ್ಯಾಲಯದ ಶುಲ್ಕ ಮತ್ತು ಇತರೆ ಶುಲ್ಕ ಸೇರಿದಂತೆ ಮೊದಲನೇ ವರ್ಷಕ್ಕೆ ರೂ.42.116/- ಮತ್ತು ತದನಂತರ ವರ್ಷಗಳಿಗೆ ರೂ.35,016/-ಗಳನ್ನು ಪ್ರತಿ ವಿದ್ಯಾರ್ಥಿಯಿಂದ ಪಡೆಯಬೇಕು. ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.

ದಿನಾಂಕ 25ನೇ ಮಾರ್ಚ್ 2021ರಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಅಧಿನಿಯಮ 2021ರನ್ವಯ IIT ಮಾದರಿಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವಾಗಿರುವ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ) ಬೆಂಗಳೂರು, ಈ ಸಂಸ್ಥೆಯಲ್ಲಿನ ಇಂಜಿನಿಯರಿಂಗ್ ಕೋರ್ಸುಗಳಿಗೆ ಮೊದಲನೇ ವರ್ಷಕ್ಕೆ ರೂ.47.250/- (ಎಲ್ಲಾ ರೀತಿಯ ಶುಲ್ಕಗಳನ್ನು ಒಳಗೊಂಡಂತೆ) ಶುಲ್ಕವನ್ನು ನಿಗದಿಪಡಿಸಲಾಗಿದೆ.
ಇದರಲ್ಲಿ ಬೋಧನಾ ಶುಲ್ಕ ರೂ.30,000/- ಗಳಾಗಿರುತ್ತದೆ. ಮತ್ತು ತದನಂತರ ವರ್ಷಗಳಿಗೆ ರೂ.45,750/-ಗಳನ್ನು ಪ್ರತಿ ವಿದ್ಯಾರ್ಥಿಯಿಂದ ಪಡೆಯಲು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯುವಿಟಿಗೆ ನಿಗದಿ ಆದ ಶುಲ್ಕ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಈ ವಿಶ್ವವಿದ್ಯಾಲಯದ ಅಧೀನದ ಘಟಕ ಕಾಲೇಜುಗಳಲ್ಲಿ ನಡೆಸುತ್ತಿರುವ ಸ್ನಾತಕ ಕೋರ್ಸುಗಳ ಉಳಿದ ಶೇ.50ರಷ್ಟು ಸೀಟುಗಳಿಗೆ 2024-25ನೇ ಸಾಲಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳಿಗೆ ನಿಗದಿಪಡಿಸಿರುವ ಕನಿಷ್ಟ ಶುಲ್ಕ (Lower Limit fee) ರೂ.76,135/- ಜೊತೆಗೆ ಸ್ಕಿಲ್ ಶುಲ್ಕ (ಐಚಿಕವಾಗಿ) ನಿಗದಿ ಮಾಡಲಾಗಿದೆ.
ಅನುದಾನರಹಿತ ಕಾಲೇಜಲ್ಲಿ ಶುಲ್ಕ ಎಷ್ಟಿದೆ?
ಖಾಸಗಿ ಅನುದಾನರಹಿತ ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಸರ್ಕಾರವು ನಿಗಧಿಪಡಿಸಿರುವ ರೂ.76,135/- ಗಳನ್ನು ಸಂಸ್ಥೆಗಳು ಪಡೆದಲ್ಲಿ ಕಾಮೆಡ್- ಕೋಟಾದ ಸೀಟುಗಳಿಗೆ ರೂ.2,61,477/- ಗಳನ್ನು ಪಡೆಯಬೇಕು.
ಇನ್ನೂ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಸರ್ಕಾರವು ನಿಗಧಿಪಡಿಸಿರುವ ರೂ.84,596/- ಗಳನ್ನು ಸಂಸ್ಥೆಗಳು ಪಡೆದಲ್ಲಿ ಕಾಮೆಡ್-ಕೆ ಕೋಟಾದ ಸೀಟುಗಳಿಗೆ ರೂ.1,86,111/ ಶುಲ್ಕ ವಿಧಿಸಲಾಗಿದೆ. ಶುಲ್ಕದ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯುವವರು ಇಲ್ಲಿನ ಶುಲ್ಕ ಏರಿಕೆ ಗಮನಿಸಬೇಕು. ಇಲ್ಲವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್ ಪರಿಶೀಲಿಸಿಕೊಂಡು ಪ್ರವೇಶ ಪಡೆಯಬೇಕು.












Click it and Unblock the Notifications