ಚುನಾವಣೆಗೆ ನಾಮಪತ್ರ ಸಲ್ಲಿಸದವರೆಷ್ಟು ಇಲ್ಲಿದೆ ಪೂರ್ಣ ವಿವರ
ಬೆಂಗಳೂರು, ಏಪ್ರಿಲ್ 24: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಗಡುವು ಮುಗಿದಿದ್ದು ಒಟ್ಟು 3374 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಇರುವ ವಿಧಾನಸಭಾ ಕ್ಷೇತ್ರಗಳು 224.
ಏಪ್ರಿಲ್ 17 ರಿಂದ ಏಪ್ರಿಲ್ 24ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿತ್ತು, ಈ ನಡುವೆ ಎರಡು ದಿನ ರಜೆ ಇದ್ದಿದ್ದರಿಂದ ಒಟ್ಟು ಆರು ದಿನ ನಾಮಪತ್ರ ಸಲ್ಲಿಸಲು ಅವಕಾಶ ಇತ್ತು.
1673 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‌ನ 250, ಬಿಜೆಪಿಯ 282, ಜೆಡಿಎಸ್‌ನ 239 ಮಂದಿ, ಬಿಎಸ್‌ಪಿಯ 22, ಸಿಪಿಐಎಂನ 2, ಸಿಪಿಐನ 3, ಎನ್‌ಸಿಪಿಯ 15 ಅಭ್ಯರ್ಥಿಗಳು ಮತ್ತು ಎಎಪಿ ಸೇರಿದಂತೆ ಇತರೆ ಪಕ್ಷಗಳ 896 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಈ ಬಾರಿ ಒಟ್ಟು 259 ಮಂದಿ ಮಹಿಳೆಯರು ಮತ್ತು 3115 ಪುರುಷರು ಈ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ 17 ಮಂದಿ ಮಹಿಳೆಯರು, ಕಾಂಗ್ರೆಸ್‌ನಿಂದ 16, ಜೆಡಿಎಸ್‌ನಿಂದ 14 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ 90 ಮಹಿಳೆಯರು ಪಕ್ಷೇತರರಾಗಿ, ಎಎಪಿ ಸೇರಿದಂತೆ ಇತರೆ ಪಕ್ಷಗಳ 119 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.
ಅತಿ ಹೆಚ್ಚು ನಾಮಪತ್ರ ಸಲ್ಲಿಕೆ ಆಗಿರುವುದು ಮುಳಬಾಗಲು ಕ್ಷೇತ್ರದಿಂದ ಅಲ್ಲಿ ಬರೋಬ್ಬರಿ 60 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ವರುಣಾದಲ್ಲಿ 35 ನಾಮಪತ್ರ ಸಲ್ಲಿಕೆಯಾಗಿವೆ. 95ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ 15ಕ್ಕಿಂತಲೂ ಹೆಚ್ಚು ನಾಮ ಪತ್ರ ಸಲ್ಲಿಕೆಯಾಗಿವೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ 218 ಮಂದಿ ಹೆಸರಷ್ಟೆ ಇತ್ತಲ್ಲ ಆದರೆ 239 ಮಂದಿ ಹೇಗೆ ನಾಮಪತ್ರ ಸಲ್ಲಿಸಿದರು ಎಂದು ಗೊಂದಲ ಗೊಳ್ಳುವಂತಿಲ್ಲ. ಏಕೆಂದರೆ ಕೆಲವು ಕ್ಷೇತ್ರಗಳಲ್ಲಿ ಡಮ್ಮಿ ಅಭ್ಯರ್ಥಿಗಳು ನಮಪತ್ರ ಸಲ್ಲಿಸಿರುತ್ತಾರೆ.
ಯಾರಾದರೂ ಪಕ್ಷದ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿ ನಂತರ ವಾಪಾಸ್ಸು ಪಡೆದುಬಿಟ್ಟರೆ. ನಿಜ ಅಭ್ಯರ್ಥಿಯ ನಾಮಪತ್ರ ರದ್ದಾಗುವ ಭೀತಿ ಇದ್ದರೆ ಹೀಗೆ ಇನ್ನೂ ಕೆಲವು ಕಾರಣಗಳಿಗಾಗಿ ಡಮ್ಮಿ ಅಭ್ಯರ್ಥಿಗಳು ನಮಪತ್ರ ಸಲ್ಲಿಸಿರುತ್ತಾರೆ. ಎಲ್ಲಾ ಪಕ್ಷಗಳು ಈ ರೀತಿಯ ಜಾಗೃತೆ ವಹಿಸುವುದು ಸಾಮಾನ್ಯ.
ಏಪ್ರಿಲ್ 25 ರಿಂದ ನಾಮಪತ್ರ ಪರಿಶೀಲನೆ ಪ್ರಾರಂಭವಾಗುತ್ತಿದ್ದು, ಏಪ್ರಿಲ್ 27 ನಾಮಪತ್ರ ವಾಪಾಸ್ಸು ಪಡೆಯಲು ಕೊನೆಯ ದಿನವಾಗಿದೆ. ಮೇ 12ರಂದು ಮತದಾನ ನಡೆಯಲಿದ್ದು, ಮೇ 15ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications