Next CM of Karnataka: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರೇ ಫೇವರೇಟ್; ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಹಿರಂಗ
ಬೆಂಗಳೂರು, ಮೇ 10: ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೂ ಮುನ್ನ ರಾಜ್ಯದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ನಡೆಸಿವೆ. ಈಗಾಗಲೇ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಬಿಡುಗಡೆಯಾಗಿದ್ದು, ಬಹುತೇಕ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಲಿದೆ ಎಂದೇ ಹೇಳಿವೆ. ಇತ್ತ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಹೆಚ್ಚಿನ ಜನರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಈ ಬಾರಿ ರಾಜ್ಯ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹಲವು ತಂತ್ರಗಾರಿಕೆಯನ್ನ ನಡೆಸಿತ್ತು. ಆಡಳಿತ ವಿರೋಧಿ ಅಲೆಯನ್ನ ತಪ್ಪಿಸಲು ಮತ್ತೆ ಮತದಾರ ಓಲೈಕೆಗೆ ಮೋದಿ ಅವರ ಮೂಲಕ ಪ್ರಚಾರ ನಡೆಸಿ, ಅಬ್ಬರದ ರೋಡ್ ಶೋ, ಪ್ರಚಾರದ ನಡುವೆಯೂ South First ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ ಎಂದಿದೆ.

ಪ್ರಮುಖವಾಗಿ ಮುಖ್ಯಮಂತ್ರಿ ಅಭ್ಯರ್ಥಿ, ಪ್ರಮುಖ ಸಮುದಾಯಗಳು ಯಾವ ಪಕ್ಷದತ್ತ ಒಲವು ಹೊಂದಿವೆ. ಹಿಂದಿನ ಸರ್ಕಾರಗಳ ಆಡಳಿತ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಮೊದಲ ಸ್ಥಾನನದಲ್ಲಿದ್ದು, ಬಿಜೆಪಿ ಎರಡನೇ ಸ್ಥಾನ ಪಡೆದುಕೊಳ್ಳಲಿದೆ. ಮೂರನೇ ಸ್ಥಾನದಲ್ಲಿ ಜೆಡಿಎಸ್ ಇರಲಿದೆ. ಇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸೌತ್ ಫಸ್ಟ್ ಸಮೀಕ್ಷೆ ತಿಳಿಸಿದೆ.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಸಮೀಕ್ಷೆ?
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಸಮೀಕ್ಷೆ ನಡೆಸಿದ್ದು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಬಹುಜನರು ಆಯ್ಕೆ ಮಾಡಿದ್ದಾರೆ, ಎರಡನೇ ಸ್ಥಾನದಲ್ಲಿ ಬಸವರಾಜ ಬೊಮ್ಮಾಯಿ, ಮೂರನೇ ಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾಲ್ಕನೇ ಸ್ಥಾನದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಐದನೇ ಸ್ಥಾನದಲ್ಲಿ ಡಿಕೆ ಶಿವಕುಮಾರ್ ಅವರನ್ನು ಮತದಾರರು ಆಯ್ಕೆ ಮಾಡಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಮತದಾರರಲ್ಲಿ ಸ್ವಲ್ಪ ಹೆಚ್ಚು ಜನಪ್ರಿಯರಾಗಿದ್ದಾರೆ, ಇನ್ನು ಮತದಾರರು ತಮ್ಮ ಮತ ಚಲಾಯಿಸುವಾಗ ಪಕ್ಷ ಮತ್ತು ಅಭ್ಯರ್ಥಿಯಷ್ಟೇ ಅಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಮತದಾರರು ಗಮನಿಸುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.












Click it and Unblock the Notifications