ಚುನಾವಣಾ ಆಯೋಗ ಭರ್ಜರಿ ಸಿದ್ದತೆ; ಮಹಿಳಾ ಮತದಾರರಿಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 140 ಪಿಂಕ್ ಬೂತ್ ನಿರ್ಮಾಣ
ಬೆಂಗಳೂರು, ಮೇ09: 2023 ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯಾದ್ಯಂತ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಿದ್ದತೆಯನ್ನ ನಡೆಸಿದೆ.
ಬೆಂಗಳೂರು, ಕೋಲಾರ, ಮೈಸೂರು, ಹಾಸನ ಬೆಳಗಾವಿ, ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಚುನಾವಣಾ ಅಕ್ರಮ ತಡೆಯಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿ ತಪಾಸಣೆಯಲ್ಲಿ ತೊಡಗಿದ್ದಾರೆ.

ಇನ್ನೂ ಬೆಂಗಳೂರಲ್ಲಿ ಮಹಿಳಾ ಮತದಾರರ ಸೆಳೆಯಲು ಪಿಂಕ್ ಬೂತ್ ರೆಡಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 140 ಪಿಂಕ್ ಬೂತ್ ನಿರ್ಮಾಣ ಮಾಡಲಾಗಿದ್ದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಪಿಂಕ್ ಬೂತ್ ವ್ಯವಸ್ಥೆ ಮಾಡಲಾಗಿದೆ. ಯಾವ ವಾರ್ಡ್ ನಲ್ಲಿ ಮಹಿಳಾ ಮತದಾರರು ಹೆಚ್ಚಿರುವ ವಾರ್ಡ್ಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಮಹಿಳೆಯರ ಮತದಾನ ಪ್ರಕ್ರಿಯೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಪಿಂಕ್ ಬೂತ್ ಗಳನ್ನ ನಿರ್ಮಾಣ ಮಾಡಲಾಗಿದೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಮಾತನಾಡಿ, ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್ಕಿಡ್ ಇಂಟರ್‍ನ್ಯಾಶನಲ್ ಶಾಲೆಯಲ್ಲಿ ಪಿಂಕ್ ಬೂತ್ ಸ್ಥಾಪನೆ ಮಾಡಲಾಗಿದೆ. ಅದೇ ರೀತಿ ಮಹಿಳೆಯರು ಹೆಚ್ಚಾಗಿರುವ ವಾರ್ಡ್ ಗಳಲ್ಲಿ ಪಿಂಕ್ ಬೂತ್‍ಗಳನ್ನು ನಿರ್ಮಾಣ ಮಾಡಲಾಗಿದೆ ಅದರ ಮೂಲಕ ಮಹಿಳೆಯರ ಮತದಾನಕ್ಕೆ ಉತ್ತೇಜನ ನೀಡಲಾಗುತ್ತಿದೆ. ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡರು.
ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣೆ
ನಗರದ 28 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು, ಇವಿಎಂ, ಸಿಯು, ವಿವಿ ಪ್ಯಾಟ್, ಮತದಾನದ ದಿನ ಅಗತ್ಯವಿರುವ ಎಲ್ಲಾ ರೀತಿಯ ಸಾಮಗ್ರಿಗಳು, ಮತಗಟ್ಟೆಗಳಲ್ಲಿ ರಾತ್ರಿ ಉಳಿಯಲು ಮತಗಟ್ಟೆ ಅಧಿಕಾರಿಗಳಿಗೆ ಬೇಕಾದಂತಹ ವ್ಯವಸ್ಥೆ ಹಾಗೂ ಅವಶ್ಯಕ ಸಾಮಗ್ರಿಗಳ ಕಿಟ್ ಗಳ ವಿತರಣೆ ಮಾಡಿ ಮಧ್ಯಾಹ್ನದ ನಂತರ ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮೂಲಕ ಮತಗಟ್ಟೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ.
ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿರುವ ಮಸ್ಟರಿಂಗ್ ಕೇಂದ್ರಗಳ ಪೈಕಿ, ಇದುವರೆಗೆ ಶೇಷಾದ್ರಿಪುರಂ ಕಾಲೇಜು(ಯಲಹಂಕ), ಬಿಇಎಲ್ ಹೈ ಸ್ಕೂಲ್(ಬ್ಯಾಟರಾಯನಪುರ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ದಾಸರಹಳ್ಳಿ), ವಿದ್ಯಾ ವರ್ಧಕ ಸಂಘ(ಮಹಾಲಕ್ಷ್ಮಿ ಲೇಔಟ್)ದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications