List Of Candidates Who Filled Election Nomination Today: ಡಿಕೆಶಿ ಭದ್ರಕೋಟೆಯಲ್ಲಿ ಆರ್.ಅಶೋಕ್ ಶಕ್ತಿ ಪ್ರದರ್ಶನ
ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಸಮೀಪಿಸುತ್ತಿದ್ದು, ಹಲವು ರಾಜಕೀಯ ಪಕ್ಷಗಳ ನಾಯಕರು ಮಂಗಳವಾರ ಏಪ್ರಿಲ್ 18ರಂದು ಭರ್ಜರಿ ರೋಡ್ ಶೋ ಹಾಗೂ ಶಕ್ತಿ ಪ್ರದರ್ಶನ ನಡೆಸುವ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ.
ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ವೇಳಾಪಟ್ಟಿಯಂತೆ ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 13 ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 20 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಏಪ್ರಿಲ್ 20 ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅಂದು ಅಮವಾಸೆ ಇರುವ ಕಾರಣ ಬಹುತೇಕ ರಾಜಕೀಯ ನಾಯಕರು ಏಪ್ರಿಲ್ 18 ಹಾಗೂ ಏಪ್ರಿಲ್ 19 ರಂದೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಉಮೇದುವಾರಿಕೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್
ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರು ಇಂದು ತಮ್ಮ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದರು. ಧಾರವಾಡದ ಸುಭಾಷ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ತೆರೆದ ವಾಹನದ ಮೂಲಕ ಅದ್ಧೂರಿ ಮೆರವಣಿಗೆ ಮಾಡಿದ ಅರವಿಂದ ಬೆಲ್ಲದ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿವಿಧ ಮುಖಂಡರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿದ ಸಚಿವ ಬಿ.ಶ್ರೀರಾಮುಲು
ಬಳ್ಳಾರಿ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಬಿ.ಶ್ರೀರಾಮುಲು ಮಂಗಳವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮೊದಲು ಶ್ರೀರಾಮುಲು, ಕೋಟೆ ಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿ ಹೇಮಂತ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಕಡೂರು: ನಾಮಪತ್ರ ಸಲ್ಲಿಸಿದ ವೈಎಸ್‌ವಿ ದತ್ತಾ
ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಚಿವ ಎಚ್ ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ. ಬೃಹತ್ ಮೆರವಣಿಗೆ ನಡೆಸಿ ಚುನಾವಣಾ ಕಚೇರಿಗೆ ಬಂದ ವೈಎಸ್‌ವಿ ದತ್ತಾ ಅಧಿಕಾರಿ ಚುನಾವಣಾ ಕವಿರಾಜ್‌ಗೆ ನಾಮಪತ್ರ ಸಲ್ಲಿದ್ದಾರೆ. ಈ ವೇಳೆ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಹಣ ನೀಡಿದ್ದಾರೆ.
ತೀರ್ಥಹಳ್ಳಿ : ನಾಮಪತ್ರ ಸಲ್ಲಿಸಿದ ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗ: ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಆರಗ ಜ್ಞಾನೇಂದ್ರ ನಾಮಪತ್ರ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿರುವ ಅವರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಕೆ.ಜೆ ಜಾರ್ಜ್ ನಾಮಪತ್ರ ಸಲ್ಲಿಕೆ
ಬೆಂಗಳೂರು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಜೆ ಜಾರ್ಜ್ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತರದಲ್ಲಿ ಮರು ಆಯ್ಕೆ ಬಯಸಿರುವ ಕೆ.ಜೆ ಜಾರ್ಜ್ ಈ ಬಾರಿಯೂ ಗೆಲುವು ಸಾಧಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಜಗಳೂರಿನಲ್ಲಿ ನಾಮಪತ್ರ ಸಲ್ಲಿಸಿದ ದಂಪತಿ
ದಾವಣಗೆರೆ ಜಿಲ್ಲೆಯ ಜಗಳೂರು ಎಸ್ಟಿ ಮೀಸಲು ಕ್ಷೇತ್ರದಲ್ಲಿ ದಂಪತಿ ನಾಮಪತ್ರ ಸಲ್ಲಿಸಿದ್ದಾರೆ.ಗಳೂರಿನ ಎಸ್ಟಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಎಸ್ ವಿ ರಾಮಚಂದ್ರ ಮತ್ತು ಪತ್ನಿ ಇಂದಿರಾ ಎಸ್.ಆರ್ ನಾಮಪತ್ರ ಸಲ್ಲಿಸಿದ್ದಾರೆ. ಶಾಸಕ ರಾಮಚಂದ್ರ ಅವರು ನಾಲ್ಕು ಚುನಾವಣೆಯಲ್ಲಿ 3ರಲ್ಲಿ ಗೆದ್ದಿದ್ದು, ಈ ಬಾರಿ 5ನೇ ಸಲ ಕಣದಲ್ಲಿದ್ದು, ಗೆಲುವಿಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ನಾಮಪತ್ರ ಸಲ್ಲಿಸಿದ ವೀರೇಂದ್ರ ಪಪ್ಪಿ
ಚಿತ್ರದುರ್ಗ : 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದ್ಯಮಿ ವೀರೇಂದ್ರ ಪಪ್ಪಿ ಅವರು ತನ್ನ ಸಾವಿರಾರು ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮೊದಲು ಚಳ್ಳಕೆರೆ ನಗರದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮತ ಕ್ಷೇತ್ರಕ್ಕೆ ತೆರಳಿದ ಅವರು ಚಿತ್ರದುರ್ಗ ನಗರದ ಕನಕ ಸರ್ಕಲ್‌ನಿಂದ ಸಾವಿರಾರು ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿ, ನಂತರ ತಾಲೂಕು ಚುನಾವಣೆ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.
ಡಿಕೆ ಶಿವಕುಮಾರ್ ಭದ್ರಕೋಟೆಯಲ್ಲಿ ಆರ್.ಅಶೋಕ್ ಶಕ್ತಿ ಪ್ರದರ್ಶನ
ಕನಕಪುರ ವಿಧಾನಸಭಾ ಕ್ಷೇತ್ರದ ನಾಮಪತ್ರ ಸಲ್ಲಿಕೆಗೂ ಮುನ್ನ ಆರ್.ಅಶೋಕ್ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಆರ್.ಅಶೋಕ್ ಸಾವಿರಾರು ಕಾರ್ಯಕರ್ತರ ಜೊತೆ ರೋಡ್ ಶೋ ನಡೆಸಿದರು. ಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರದಲ್ಲಿ ಆರ್.ಅಶೋಕ್ ಶಕ್ತಿ ಪ್ರದರ್ಶನ ಮಾಡಿದ್ದು, ಹೂವಿನ ಸುರಿಮಳೆ ಸುರಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಆರ್.ಅಶೋಕ್ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು.
ಕುಣಿಗಲ್: ಪಕ್ಷೇತರ ಅಭ್ಯರ್ಥಿ ಬಿಬಿ ರಾಮಸ್ವಾಮಿ ಗೌಡ ನಾಮಪತ್ರ ಸಲ್ಲಿಕೆ
ತುಮಕೂರು:ಕುಣಿಗಲ್ ಕ್ಷೇತದ ಪಕ್ಷೇತರ ಅಭ್ಯರ್ಥಿ ಬಿಬಿ ರಾಮಸ್ವಾಮಿ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮತ್ತೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ ಬಿ.ಬಿ ರಾಮಸ್ವಾಮಿ ಗೌಡ ಕುಣಿಗಲ್ ಚುನಾವಣಾ ಅಧಿಕಾರಿಗಳಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆ ವೇಳೆ ದೇವೇಗೌಡ ಹಾಜರು
ಚಿಕ್ಕಮಗಳೂರಿನ ಕಡೂರಿನಲ್ಲಿ ಇಂದು ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರೂ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 17 ಸೋಮವಾರ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಡಿ ಕೆ ಶಿವಕುಮಾರ್, ವರುಣಾ ವಿಧಾನಸಭಾ ಕ್ಷೇತ್ರದಿಂದ ವಿ ಸೋಮಣ್ಣ, ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಶರತ್ ಬಚ್ಚೇಗೌಡ, ಹೊಳೆ ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಹೆಚ್. ಡಿ. ರೇವಣ್ಣ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ , ಪದ್ಮನಾಭ ನಗರದ ವಿಧಾನಸಭಾ ಕ್ಷೇತ್ರದಿಂದ ಆರ್ ಅಶೋಕ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಇಂದು( ಏಪ್ರಿಲ್ 18)ಆರ್ ಅಶೋಕ್ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.












Click it and Unblock the Notifications