Maha Kumbh Mela: ಮಹಾಕುಂಭ ಮೇಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ವಿಶೇಷ ಆಹ್ವಾನ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯಲಿದೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾಕುಂಭ ಮೇಳ ನಡೆಯಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ವಿಕಲಚೇತನರ ಸಬಲೀಕರಣ ಸಚಿವ ನರೇಂದ್ರ ಹಾಗೂ ಹಣಕಾಸು ಸಚಿವರಾ ಸುರೇಶ್ ಖನ್ನಾ ಅವರು ಇಂದು ಡಿಸಿಎಂ ಅವರ ಗೃಹಕಚೇರಿಗೆ ಆಗಮಿಸಿದ್ದು, ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಆಹ್ವಾನ ನೀಡಿದ್ದಾರೆ. ಆಹ್ವಾನದ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅವರು ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ 2025ಕ್ಕೆ ಮೂಲಸೌಕರ್ಯಗಳನ್ನು ಹೆಚ್ಚಿಸಲು 5,500 ಕೋಟಿ ರೂಪಾಯಿಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಪ್ರಯಾಗ್ ರಾಜ್ ಮತ್ತು ಹರಿದ್ವಾರದಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ನಡೆಯುತ್ತದೆ.
ಭಾರತದಲ್ಲಿ ಕುಂಭಮೇಳದ ಇತಿಹಾಸವನ್ನು ಗಮನಿಸಿದರೆ ಈ ಹಿಂದೆ ಭೂಮಿಯು ದೇವತೆಗಳಿಗೆ ತಂಗುವ ಸ್ಥಳವಾಗಿತ್ತು. ಅಮರರಾಗಲು ಅಮೃತವನ್ನು ಪಡೆಯಲು ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದ ಯುದ್ಧದಲ್ಲಿ ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯ ನದಿಗಳ ಮೇಲೆ ಅಮೃತವು ಬಿದ್ದಿತು ಎಂದು ನಂಬಲಾಗಿದೆ.

ಹಾಗಾಗಿ ಇದನ್ನು ದೇವತೆಗಳ ಸ್ಥಳ ಎಂದೇ ಧಾರ್ಮಿಕವಾಗಿ ನಂಬಲಾಗಿದೆ. ಪ್ರಯಾಗ್‌ರಾಜ್ ಕುಂಭಮೇಳವು ಜಗತ್ತಿನಲ್ಲೇ ಅತಿ ಹೆಚ್ಚು ಜನ ಸೇರುವ ಸಮಾರಂಭಗಳಲ್ಲಿ ಒಂದಾಗಿದೆ. ಕುಂಭಮೇಳದ ಸಮಯದಲ್ಲಿ ಅಲ್ಲಿನ ಪವಿತ್ರ ನದಿಗಳ ನೀರು ಅಮೃತವಾಗಿ ಬದಲಾಗುತ್ತದೆ ಎನ್ನುವ ಐತಿಹ್ಯವಿದೆ.
ಈ ಹಬ್ಬದಲ್ಲಿ ಹಿಂದೂ ಧರ್ಮದವರು ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಈ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಎನ್ನಲಾಗಿದೆ. 2019ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದಿದ್ದ ಕುಂಭಮೇಳದಲ್ಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ ಒಂದು ಮಿಲಿಯನ್ ವಿದೇಶಿ ಪ್ರವಾಸಿಗರೂ ಸೇರಿದಂತೆ 24 ಮಿಲಿಯನ್ ಜನರು ಭಾಗಿಯಾಗಿದ್ದರು ಎಂದು ವರದಿಯಾಗಿದೆ.
ಕುಂಭಮೇಳದಲ್ಲಿನ ಪವಿತ್ರ ಸ್ನಾನವು ಮೋಕ್ಷಕ್ಕೆ ಇನ್ನೊಂದು ಮಾರ್ಗ ಎಂದೂ ನಂಬಲಾಗಿದೆ. ಹಾಗಾಗಿ ಈ ಕುಂಭಮೇಳಕ್ಕೆ ಭಾರತದ ಮೂಲೆಮೂಲೆಯಿಂದ ಮಾತ್ರವಲ್ಲದೆ ಜಗತ್ತಿನ ವಿವಿಧ ದೇಶಗಳು ಜನರು ಕೂಡ ಭಾಗಿಯಾಗುತ್ತಾರೆ. ಪ್ರಯಾಗರಾಜ್‌ನಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭಮೇಳ ವೆಂದು ಕರೆಯಲಾಗುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಹಾಗೂ 144 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭಮೇಳವೆಂದು ಕರೆಯಲಾಗುತ್ತದೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 2025ರ ಜನವರಿಯಲ್ಲಿ ನಡೆಯಲಿರುವ ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಅಲ್ಲಿನ ಸಂಗಮ್ ನಗರಿಯಲ್ಲಿ ನಿನ್ನೆ ಆಯೋಜಿಸಿದ್ದ ಸುಮಾರು 5,500 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆ ಹಾಗೂ ಕಾಮಗಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ಮಹಾ ಕುಂಭಮೇಳವು ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಭವ್ಯತೆಯ ಮಹಾಯಜ್ಞವಾಗಿದ್ದು, ಇದು ವಿಕಸಿತ ಭಾರತದ ಪರಿಕಲ್ಪನೆಗೆ ಬಲ ತುಂಬಲಿದೆ ಎಂದು ಹೇಳಿದ್ದಾರೆ.












Click it and Unblock the Notifications