2016ನೇ ವರ್ಷದ ವಿವಾದಗಳು: 'ಟಿಕ್ ಟಿಕ್ ಟಿಕ್' ಸರಿದಿದೆ ಕಾಲ

Posted By:
Subscribe to Oneindia Kannada

ವಿವಾದಗಳು- ಈ ಪದ ಕೇಳಿದರೆ ಎಂಥವರಿಗೂ ಒಂದು ಕ್ಷಣ ಕುತೂಹಲ ಕೆರಳುತ್ತದೆ. ವಿವಾದದಲ್ಲಿ ಸಿಕ್ಕಿಕೊಂಡವರಿಗೆ ಪ್ರಾಣಸಂಕಟ. ಈಗ ಏನ್ಮಾಡ್ತಾರೆ ನೋಡೋಣ ಎಂಬ ಕೆಟ್ಟ ಕುತೂಹಲ ಇತರರಿಗೆ. ಇನ್ನು ಶತ್ರುಗಳಂತೂ ಹಬ್ಬವೇ ಮಾಡಿಬಿಡ್ತಾರೆ. 2016 ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿವಾದಗಳೇ ವಿಪರೀತವಾಗಿ ಹಾಯ್ ಹೇಳಿವೆ.

ಅವರ 'ಟೈಮ್' ಕೆಟ್ಟು, ಸೆಕೆಂಡ್ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದ ಪ್ರಶ್ನೆ ಪತ್ರಿಕೆಗಳು ಬಯಲಾಗಿ ಮಾನ-ಮರ್ಯಾದೆ ಹರಾಜಾಯಿತು. ಸ್ಟೀಲ್ ಫ್ಲೈ ಓವರ್ ಹಣ್ಣುಗಾಯಿ-ನೀರುಗಾಯಿ ಮಾಡಿದರೆ, ತನ್ವೀರ್ ಸೇಠ್ ವಿಡಿಯೋ ನೋಡಿದ ಪ್ರಕರಣದಿಂದ ಹೊರಬಂದು ಮುಜುಗರ ತಪ್ಪಿಸಿಕೊಳ್ಳುವುದರೊಳಗೆ ಮೇಟಿ ಸಾಹೇಬರದೊಂದು ವಿಡಿಯೋ ಜಾಹೀರಾಗಿ, ಸರಕಾರಕ್ಕೆ ಸಕತ್ ಸಂಕಟ ತಂದಿಟ್ಟಿತು.[ವರ್ಷದ ಹಿನ್ನೋಟ : ಹಿಂದೂ ಕಾರ್ಯಕರ್ತರ ಸಾವಿನ ಸರಣಿ]

ಅಮ್ನೆಸ್ಟಿ ಇಂಟರ್ ನ್ಯಾಷನಲ್, ಅನುಪಮಾ ಶೆಣೈ ವಿವಾದ, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ, ಪೊಲೀಸರು ಪ್ರತಿಭಟನೆಗೆ ಮುಂದಾಗಿದ್ದು, ಟಿಪ್ಪು ಜಯಂತಿ ವಿವಾದ...ಉಫ್, ಒಂದೇ ಎರಡೇ? ಆದರೆ ಸಿದ್ದರಾಮಯ್ಯನವರು, ಕಾಂಗ್ರೆಸ್ ಸರಕಾರ, ಸಚಿವರು ಮಾಡಿದ ಅಥವಾ ಸಿಲುಕಿಕೊಂಡ ವಿವಾದದ ತೂಕ ಒಂದಾದರೆ, ನಟಿ-ಮಾಜಿ ಸಂಸದೆ ರಮ್ಯಾ ಅವರ ಪಾಕಿಸ್ತಾನ ಹೇಳಿಕೆಯದೇ ಒಂದು ತೂಕ. ಅವರಂತೂ ಪಾಕಿಸ್ತಾನದ ಪತ್ರಿಕೆಗಳಲ್ಲೂ ಸುದ್ದಿಯಾಗಿಬಿಟ್ಟರು.

ಇಲ್ಲಿ ನೀಡುತ್ತಿರುವ ವಿವಾದಗಳ ಪಟ್ಟಿಯಲ್ಲಿ ಕೆಲವು ನಾವೇ ಬಿಟ್ಟಿದ್ದೇವೆ. ಲ್ಯಾಬ್ ಹಗರಣ, ಮೈಸೂರಿನ ಮರಿಗೌಡ ಪ್ರಕರಣ ಇನ್ನೂ ಇವೆ. ಅವುಗಳನ್ನು ನೀವು ಮತ್ತೆ ನೆನಪಿಸಿ, ನಾಲ್ಕು ವಾಕ್ಯ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.[2016: ಒನ್ಇಂಡಿಯಾ ಯೂಟ್ಯೂಬ್ ವಿಡಿಯೋ ಟಾಪ್ 10]

ಉಬ್ಲೋ ವಾಚು

ಉಬ್ಲೋ ವಾಚು

ಸಿದ್ದರಾಮಯ್ಯ ಅವರು ಸಮಾಜವಾದದ ಪ್ರತಿಪಾದಕರು. ಅವರು ಹಾಕಿರುವ ಉಬ್ಲೋ ವಾಚಿನ ಬೆಲೆ ಎಷ್ಟು ಕೇಳಿರಿ ಅಂತ ಶುರು ಹಚ್ಚಿಕೊಂಡವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. "ಇಲ್ಲ ಅದು ನನ್ನ ಫ್ರೆಂಡ್ ಗಿಫ್ಟ್ ಕಣ್ರಿ" ಅಂದರು ಸಿಎಂ. ಅದು ಕದ್ದ ವಾಚ್. ಗಿಫ್ಟ್ ಬಂದಿದೆ ಅಂತ ಕುಮಾರಣ್ಣ. ಕೊನೆಗೆ ವಾಚ್ ಅನ್ನು ವಿಧಾನಸಭೆಗೆ ಕೊಟ್ಟುಬಿಟ್ಟರು ಸಿದ್ದರಾಮಯ್ಯ. ಅಲ್ಲಿಗೆ ಒಂದು ವಾಚಿನ ಪ್ರಸಂಗದ ಕೊನೆ ದೃಶ್ಯ ಹಾಗಾಯಿತು.

ಪಾಕಿಸ್ತಾನ ನರಕ, ರಮ್ಯಾ ಹೇಳಿಕೆ ಮತ್ತು ಹೋಲಿಕೆ

ಪಾಕಿಸ್ತಾನ ನರಕ, ರಮ್ಯಾ ಹೇಳಿಕೆ ಮತ್ತು ಹೋಲಿಕೆ

ಪಾಕಿಸ್ತಾನಕ್ಕೆ ಹೋಗೋದು ಅಂದರೆ ನರಕಕ್ಕೆ ಹೋದಹಾಗೆ ಅಂದಿದ್ದರು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್. "ಹಾಗೇನಿಲ್ಲ, ನಾನು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದೀನಿ. ಅಲ್ಲಿಯೂ ಒಳ್ಳೆ ಜನ ಇದ್ದಾರೆ" ಅಂದರು ನಟಿ-ಮಾಜಿ ಸಂಸದೆ ರಮ್ಯಾ. ಶುರುವಾಯಿತು ಅಲ್ಲಿಂದ ವಿವಾದ. ರಮ್ಯಾ ಮೇಲೆ ಕೋರ್ಟ್ ಗಳಲ್ಲಿ ಮೊಕದ್ದಮೆ ಹೂಡಲಾಯಿತು. ಪಾಕಿಸ್ತಾನದ ಪತ್ರಿಕೆಗಳಲ್ಲೂ ಆಕೆ ಸುದ್ದಿಯಾದರು.

ಸ್ಟೀಲ್ ಬ್ರಿಜ್ ಅಥವಾ ಚಿನ್ನದ್ದೋ

ಸ್ಟೀಲ್ ಬ್ರಿಜ್ ಅಥವಾ ಚಿನ್ನದ್ದೋ

ಏಳೆಂಟು ಕಿಲೋಮೀಟರ್ ಸೇತುವೆ ನಿರ್ಮಿಸುವುದಕ್ಕೆ ಎಷ್ಟು ಖರ್ಚು ಆಗಬಹುದು? 1,800 ರಿಂದ 2 ಸಾವಿರ ಕೋಟಿ. ಈ ವಿಷಯ ನಮ್ಮ ರಾಜ್ಯದಲ್ಲಿ ಜನ ಸಾಮಾನ್ಯರಿಗೂ ಗೊತ್ತಾಗಿದ್ದು ಈಚೆಗೆ. ಅದೂ ಕಾಂಗ್ರೆಸ್ ಸರಕಾರದಿಂದ. ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಸ್ಟೀಲ್ ಬ್ರಿಜ್ ಕಟ್ತೀವಿ. ಜಸ್ಟ್ ಥೌಸಂಡ್ ಏಯ್ಟ್ ಹಂಡ್ರೆಡ್ ಕ್ರೋರ್ ಅಂದರು. ಸ್ವಾಮಿ ಅದೇನು ಚಿನ್ನದ್ದೋ ಅಂತ ಗಾಬರಿಯಾಗಿ, ದೊಡ್ಡ ಮಟ್ಟದ ಪ್ರತಿಭಟನೆಗಳಾಗಿ, ವಿವಾದ ಆಗಿದ್ದಂತೂ ಹೌದು.

ಮತಕ್ಕಾಗಿ ಹಣ, ಮರ್ಯಾದೆಯೇ ಪಣ

ಮತಕ್ಕಾಗಿ ಹಣ, ಮರ್ಯಾದೆಯೇ ಪಣ

ರಾಜ್ಯಸಭಾ ಚುನಾವಣೆಗೆ ಮತ ಹಾಕುವುದಕ್ಕೆ ಇಷ್ಟು ದುಡ್ಡು ಮಡಗಿ ಅಂದಿದ್ದಾರೆ ಕರ್ನಾಟಕದ ಶಾಸಕರು ಎಂದು ರಾಷ್ಟ್ರೀಯ ಮಾಧ್ಯಮವೊಂದು ಕುಟುಕು ಕಾರ್ಯಾಚರಣೆ ನಡೆಸಿದ್ದರ ವಿಡಿಯೋ ಪ್ರಸಾರ ಮಾಡಿತು. ಸಂಬಂಧ ಪಟ್ಟ ಶಾಸಕರು ಆಕ್ರೋಶದಿಂದ ಪ್ರತಿಭಟನೆಯನ್ನೇ ಮಾಡಿದರು.

ಲೋಕಾಯುಕ್ತ ರಂಕಲು

ಲೋಕಾಯುಕ್ತ ರಂಕಲು

ಕರ್ನಾಟಕ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಅವರ ಮಗ ಅಶ್ವಿನ್ ರಾವ್ ಮೇಲೆ ಬಂದ ಆರೋಪಗಳು, ಅ ನಂತರದ ಘಟನಾವಳಿಗಳು ರಾಜ್ಯದ ಪಾಲಿಗೆ ಖಂಡಿತವಾಗಿಯೂ ಕಪ್ಪು ಚುಕ್ಕೆ. ಸದ್ಯಕ್ಕೆ ರಾಜ್ಯದಲ್ಲಿ ಲೋಕಾಯುಕ್ತ ಅನ್ನೋ ಸಂಸ್ಥೆಯಿದೆ. ಆದರೆ ವೈಭಾಸ್ಕರ್ ರಾವ್ ಅವರ ಬದಲಿಗೆ ಯಾರನ್ನೂ ನೇಮಿಸಿಲ್ಲ. ಲಂಚಕ್ಕೆ ಒತ್ತಾಯಿಸಿದ್ದು, ಫೋನ್ ಮಾಡಿದ್ದು, ಅಸ್ತಿ ಸಂಪಾದನೆ ಹೀಗೆ ನಾನಾ ಆರೋಪಗಳು ಕೇಳಿಬಂದಿತ್ತು.

ಪಿಯುಸಿ ಪತ್ರಿಕೆ ಆಲ್ ಔಟ್

ಪಿಯುಸಿ ಪತ್ರಿಕೆ ಆಲ್ ಔಟ್

ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಷ್ಟು ತಮಾಷೆಗೆ ಗುರಿಯಾದ ಸಂಗತಿ ಯಾವುದೂ ಇರಲಿಕ್ಕಿಲ್ಲ. ಪ್ರಶ್ನೆ ಪತ್ರಿಕೆ ಬಯಲಾಯಿತು, ಹಾಳಾಗಿ ಹೋಗಲಿ ಅಂತ ಮತ್ತೊಂದು ಪತ್ರಿಕೆ ಮಾಡಬಹುದು. ಇಲ್ಲಿ ಆಲೌಟ್. ಅರಕ್ಕೆ ಆರೂ ಆಚೆ ಬಂದು, ವಿದ್ಯಾರ್ಥಿಗಳು-ಪೋಷಕರು ಹಿಡೀ ಶಾಪ ಹಾಕಿದರು. ಸದ್ಯಕ್ಕೆ ಸಿಐಡಿ ತನಿಖೆ ನಡೆಯುತ್ತಿದೆ. ಅದರೆ ಅಡಿಕೆಗೆ ಹೋದ ಮಾನ... ಇಲ್ಲ ಬಿಡಿ, ಇದು ಆನೆಗೆ ಹೋದ ಮಾನ. ಅದೇನು ಕೊಟ್ಟರೂ ಬರಲ್ಲ.

ಪೊಲೀಸರು ಪ್ರತಿಭಟನೆ

ಪೊಲೀಸರು ಪ್ರತಿಭಟನೆ

ನಮಗೆ ಸವಲತ್ತಿಲ್ಲ, ಸಂಬಳ ನೆಟ್ಟಗಿಲ್ಲ, ಗೌರವವಿಲ್ಲ..ಹೀಗೊಂದು ಉದ್ದದ ಆರೋಪಗಳ ಪಟ್ಟಿ ಇಟ್ಟುಕೊಂಡು ಪೊಲೀಸರೇ ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಂಡ ಇತಿಹಾಸ ಕಾಂಗ್ರೆಸ್ ಸರಕಾರದಲ್ಲಿ ಸೃಷ್ಟಿಯಾಯಿತು. ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನವನ್ನೇನೋ ಸರಕಾರ ಮಾಡಿತು. ಆದರೆ ಶಶಿಧರ್ ಎಂಬ ಮಾಜಿ ಪೊಲೀಸಪ್ಪನ ಬದುಕು ಏನಾಯಿತು, ಪೊಲೀಸರ ಸಂಕಷ್ಟ ತೀರಿತೆ? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ.

ರೆಬೆಲ್ ಸ್ಟಾರ್ ಅನುಪಮಾ ಶೆಣೈ

ರೆಬೆಲ್ ಸ್ಟಾರ್ ಅನುಪಮಾ ಶೆಣೈ

ಕೂಡ್ಲಗಿ ಡಿವೈಎಸ್ ಪಿ ಆಗಿದ್ದ ಅನುಪಮಾ ಶೆಣೈ ರೆಬೆಲ್ ಸ್ಟಾರ್ ಆಗಿಬಿಟ್ಟರು. ಸಚಿವ ಪರಮೇಶ್ವರ್ ನಾಯ್ಕ್ ಸ್ಥಿತಿ ಹಣ್ಣುಗಾಯಿ ನೀರುಗಾಯಿ ಆಯಿತು ಅಂದುಕೊಳ್ಳುವಷ್ಟರಲ್ಲಿ ಶೆಣೈ ಅವರೇ ತಮ್ಮ ಹುದ್ದೆಗೆ ರಾಜೀನಾಮೆ ಒಗಾಯಿಸಿಬಿಟ್ಟರು.

ಅಮ್ನೆಸ್ಟಿ ವಿರುದ್ಧ ಆಕ್ರೋಶ

ಅಮ್ನೆಸ್ಟಿ ವಿರುದ್ಧ ಆಕ್ರೋಶ

ಬೆಂಗಳೂರಿನಲ್ಲಿ ನಡೆದ ಕಾಶ್ಮೀರಿಗಳ ಸಭೆಯಲ್ಲಿ ಭಾರತ ಹಾಗೂ ಸೇನೆ ವಿರುದ್ಧದ ಘೋಷಣೆ ಕೇಳಿಬಂತು. ಈ ಪ್ರಕರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಾಯಿತು. ಆ ನಂತರ ನಡೆದ ಪ್ರತಿಭಟನೆಗಳು, ಆಕ್ರೋಶ ರಾಜ್ಯ ಸರಕಾರದ ಪಾಲಿಗೆ ಸವಾಲಾಯಿತು.

ತನ್ವೀರ್ ಸೇಠ್

ತನ್ವೀರ್ ಸೇಠ್

ಶಿಕ್ಷಣ ಸಚಿವ ತನ್ವೀರ್ ಸೇಠ್ ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅರೆನಗ್ನ ವಿಡಿಯೋ ನೋಡಿದರು ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಸ್ವತಃ ಸೇಠ್ ಅವರೇ, ಮನೆಯಿಂದ ತುಂಬ ಕಾಲ ಆಚೆ ಇರ್ತೀವಿ, ನೋಡಿದರೆ ಏನೀಗ ಅಂತ ಒಮ್ಮೆ ಅಂದರು. ಏನೋ ಮೆಸೇಜ್ ಬಂತು, ಅದು ಏನಂತ ನೋಡಿದ್ದಾರೆ ಅಷ್ಟೇ ಎಂದು ಅವರ ಪರವಾಗಿ ಕೆಲವರು ವಾದ ಹೂಡಿದರು. ಈಗಲೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೇ ಮುಂದುವರಿದಿದ್ದಾರೆ.

ಮೇಟಿ ವಿಡಿಯೋ ಹಗರಣ

ಮೇಟಿ ವಿಡಿಯೋ ಹಗರಣ

ಅಬಕಾರಿ ಖಾತೆಗೂ ಹೆಣ್ಣುಮಕ್ಕಳ ಜತೆಗಿನ ಹಗರಣಕ್ಕೂ ಏನೋ ಸ್ಮೆಲ್ ಐತೆ ಅಂತ ಜನ ಮಾತನಾಡಿಕೊಳ್ಳುವಂತೆ ಆಗಿದ್ದು ಎಚ್.ವೈ.ಮೇಟಿ ಅವರ ಹಗರಣದಿಂದ. ವಿಡಿಯೋ ಬಿಡುಗಡೆ ಆಯಿತು. ಮೇಟಿ ರಾಜೀನಾಮೆ ಕೊಟ್ಟರು. ಅದು ನಾನಲ್ಲ, ನಾನಲ್ಲ, ನಾನಲ್ಲ ಎಂದರು. ಸಿದ್ದರಾಮಯ್ಯ ಅವರು ಸಿಐಡಿ ತನಿಖೆಗೆ ವಹಿಸಿದರು. ಬಾಗಲಕೋಟೆಯಲ್ಲಿ ಮೇಟಿ ಅವರ ಬೆಂಬಲಿಗರು ಶ್ಯಾನೆ ಬೇಸರ ಮಾಡಿಕೊಂಡರು.

ಗಣಪತಿ ಭಟ್ ಆತ್ಮಹತ್ಯೆ

ಗಣಪತಿ ಭಟ್ ಆತ್ಮಹತ್ಯೆ

ಮಡಿಕೇರಿಯಲ್ಲಿ ಡಿವೈಎಸ್ ಪಿ ಗಣಪತಿ ಭಟ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಹೆಸರು ಕೇಳಿಬಂತು. ಸ್ವತಃ ಗಣಪತಿ ಅವರು ಜಾರ್ಜ್ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿ, ತಮಗೆ ಕಿರುಕುಳ ನೀಡಿದ್ದರು ಎಂದು ವಿಡಿಯೋ ಒಂದರಲ್ಲಿ ಹೇಳಿದ್ದರು. ಆ ನಂತರ ಜಾರ್ಜ್ ರಾಜೀನಾಮೆ ನೀಡಿ, ಮತ್ತೆ ಸಚಿವ ಸ್ಥಾನಕ್ಕೆ ವಾಪಸಾದರು.

ಟಿಪ್ಪು ಜಯಂತಿ ವಿವಾದ

ಟಿಪ್ಪು ಜಯಂತಿ ವಿವಾದ

ಟಿಪ್ಪು ಜಯಂತಿ ಅಂದರೆ ಬೆಚ್ಚಿ ಬೀಳುವಂತಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಟಿಪ್ಪು ಜಯಂತಿ ಅಚರಣೆ ಬಗ್ಗೆ ತುಂಬ ಪ್ರೀತಿ. ಆದರೆ ಸತತ ಎರಡನೇ ವರ್ಷವೂ ಫಜೀತಿಯಾಯಿತು. ವಿಪಕ್ಷಗಳು, ಕೆಲ ಸಂಶೋಧಕರು, ಕೆಲ ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹೊರತಾಗಿಯೂ ಟಿಪ್ಪು ಜಯಂತಿ ನಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Controversies 2016 : Many controversies gripped Karnataka in the year 2016. Be it Anupama Shenoy's resignation or video by HY Meti. We have listed out some of the major controversies happened in Karnataka in this year.
Please Wait while comments are loading...