ಸಿನಿ ಕಾರ್ಮಿಕರ ಬಹು ವರ್ಷಗಳ ಬೇಡಿಕೆ ಕೊನೆಗೂ ಈಡೇರಿಸಿ ಸರ್ಕಾರ
ಬೆಂಗಳೂರು, ಜುಲೈ 25: ರಾಜ್ಯದ ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ 'ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ವಿಧೇಯಕ'ವು ವಿಧಾನ ಮಂಡಲದಲ್ಲಿ ಅನುಮೋದನೆಯಾಯಿತು.
ವಿಧಾನಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಭಾಧ್ಯಕ್ಷರ ಸೂಚನೆ ಪಡೆದು ವಿಧೇಯಕವನ್ನು ಮಂಡಿಸಿದರು. ಕಷ್ಟದಲ್ಲಿ ಜೀವನ ನಡೆಸುತ್ತಿರುವ ಈ ಕ್ಷೇತ್ರಗಳ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಈ ವಿಧೇಯಕವನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ ಎಂದು ಸಂತೋಷ್ ಲಾಡ್ ತಿಳಿಸಿದರು. ಸಚಿವರು ವಿಧೇಯಕ ಮಂಡಿಸುತ್ತಿದ್ದಂತೆ ವಿರೋಧ ಪಕ್ಷದ ನಾಯಕರಾದಿಯಾಗಿ ಹಲವು ಸದಸ್ಯರು ಸಂತೋಷ್ ಲಾಡ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತ, ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಇದೊಂದು ಐತಿಹಾಸಿಕ ಮಸೂದೆಯಾಗಿದ್ದು, ಬಹಳ ವರ್ಷಗಳಿಂದ ಜಾರಿಯಾಗದೇ ಚರ್ಚೆಯಲ್ಲೇ ಇತ್ತು. ಈಗ ವಿಧೇಯಕದ ಅನುಮೋದನೆಯೊಂದಿಗೆ, ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಮಂಡಳಿ ರಚನೆಯಾಗಿ, ಅವರೆಲ್ಲ ಸಂಘಟಿತ ವಲಯಕ್ಕೆ ಸೇರ್ಪಡೆಯಾಗುತ್ತಾರೆ. ನೋಂದಾಯಿತ ಕಾರ್ಯಕರ್ತರು ಪಿಂಚಣಿ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ, ಹೆರಿಗೆ, ಅಂತ್ಯಕ್ರಿಯೆ ವೆಚ್ಚ, ಆರೋಗ್ಯ ಸಹಾಯಧನ, ವಿಮಾ ಸೇರಿದಂತೆ ಹಲವು ಸಾಮಾಜಿಕ, ಆರ್ಥಿಕ ಭದ್ರತೆಗಳ ಸದುಪಯೋಗ ಪಡೆಯಲಿದ್ದಾರೆ.
ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಕ್ರಮ
ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ವೇತನ, ಇಎಸ್‌ಐ ಮತ್ತು ಪಿಎಫ್ ನಲ್ಲಾಗುವ ತೊಂದರೆ ತಪ್ಪಿಸಲಾಗುವುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾಯಕೊಂಡ ಶಾಸಕರಾದ ಬಸವಂತಪ್ಪ ಕೆ ಎಸ್ ಅವರು, ಅವರು ಕೇಳಿದ ಪ್ರಶ್ನೆಗೆ ಸಂತೋಷ್ ಲಾಡ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೊಸೈಟಿ ಮಾಡಿ ಅಲ್ಲಿಂದ ಔಟ್ ಸೋರ್ಸ್ ಮಾಡಬೇಕು. ಔಟ್ ಸೋರ್ಸ್ ಏಜೆನ್ಸಿಗಳಿಗೆ ಕಡಿವಾಣ ಹಾಕಲಾಗುವುದು. ಸೊಸೈಟಿ ಮಾಡಿ ಅಲ್ಲಿ ನೋಂದಣಿ ಮಾಡಬೇಕು ಎಂಬ ನಿಯಮ ಜಾರಿಯಾಗಲಿದೆ ಎಂದು ಹೇಳಿದರು.
ಔಟ್‌ಸೋರ್ಸ್ ಏಜೆನ್ಸಿಗಳು ಕಡಿಮೆ ವೇತನ ನೀಡಿ ನೌಕರರನ್ನು ಶೋಷಣೆ ಮಾಡುತ್ತಿವೆ ಎಂಬ ಶಾಸಕ ಕೆ ಎಂ ಶಿವಲಿಂಗೇಗೌಡ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಾಮಾನ್ಯವಾಗಿ ಪಿಎಫ್, ಇಎಸ್‌ಐ ಅನ್ನು ಗುತ್ತಿಗೆದಾರ ಕೊಡಲೇಬೇಕು ಎಂಬ ಕಾನೂನು ಇದೆ. ಕಾರ್ಮಿಕರ ಎಟಿಎಂ ಕಾರ್ಡ್ ಮತ್ತು ಪಾಸ್‌ಬುಕ್ ಅನ್ನು ಗುತ್ತಿಗೆದಾರರೇ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ನಿಖರವಾದ ದೂರು ಇದ್ದರೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಕಾರ್ಮಿಕರಿಗೆ ತಿಂಗಳು ತಿಂಗಳು ವೇತನ ಕೊಡಲ್ಲ ಎಂಬ ದೂರುಗಳಿವೆ. ಇಎಸ್‌ಐ ತುಂಬದವರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications