Karnataka By Election: ಸಮೀಕ್ಷೆಯಿಂದ ಹೊರಬಿತ್ತು ಉಪಚುನಾವಣಾ ಫಲಿತಾಂಶ: ಸಿಎಂ ಸಿದ್ದರಾಮಯ್ಯ ಏನಂದ್ರು?
ಬೆಂಗಳೂರು, ನವೆಂಬರ್ 22: ಚುನಾವಣೋತ್ತರ ಸಮೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹರಿಯಾಣದಲ್ಲಿ ಎಕ್ಸಿಟ್ ಪೋಲ್ ಏನಾಯ್ತು. ಅದನ್ನು ನಂಬಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ ನನಗಿರುವ ಮಾಹಿತಿಯ ಪ್ರಕಾರ ನಾವು ಎಲ್ಲಾ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೆಹಲಿ ನಗರದಲ್ಲಿ ಕೆ.ಎಂ.ಎಫ್ ಮತ್ತು ಮಂಡ್ಯ ಹಾಲು ಒಕ್ಕೂಟ ಸೇರಿ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್ ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭ ಮಾಡಿದರು.

ಹಿಂದೆ ಪಶುಸಂಗೋಪನಾ ಸಚಿವನಾಗಿದ್ದು, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷನೂ ಆಗಿದ್ದೆ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಯಿತು ಎಂದರು.
ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ. ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3 ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಲು ಘೋಷಣೆ ಮಾಡಲಾಯಿತು. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಒಟ್ಟು 16 ಮಿಲ್ಕ್ ಯೂನಿಯನ್ಗಳಿವೆ. ರಾಜ್ಯದಲ್ಲಿ ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ನಿತ್ಯ ತಲಾ 2.5 ಲಕ್ಷ ಲೀ.ಟರ್ ಹಾಲು ಪೂರೈಕೆಯಾಗುತ್ತಿದೆ. ಇದೀಗ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ನವದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಇನ್ನು ಆರು ತಿಂಗಳೊಳಗೆ 5 ಲಕ್ಷ ಲೀಟರ್ ಗೆ ಏರಿಸುವ ಗುರಿ ನಮ್ಮದಾಗಿದೆ. ಹಾಲಿನ ಉತ್ಪಾದನೆಗಳಿಗೆ ಮಾರುಕಟ್ಟೆ ಬಹಳ ಮುಖ್ಯ ಎಂದರು.
ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ 10 ರಿಂದ 12 % ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ಬಗ್ಗೆ ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದು, ಇದನ್ನು ಆರ್.ಬಿ.ಐ ಒಪ್ಪಿಲ್ಲ ಎಂದು ಸಚಿವರು ಉತ್ತರವನ್ನೂ ಬರೆದಿದ್ದಾರೆ. ನಬಾರ್ಡ್ ಕೇಂದ್ರ ಸರ್ಕಾರದ ಕೆಳೆಗೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವರೇ ಅಸಹಾಯಕತೆಯನು ವ್ಯಕ್ತಪಡಿಸಿದರೆ ಹೇಗೆ? ಎಂದರು.ನಬಾರ್ಡ್ ನಲ್ಲಿ ಕಳೆದ ವರ್ಷ 5600 ಕೋಟಿ ರೂ.ಗಳನ್ನು ಅಲ್ಪಾವಧಿ ಸಾಲಕ್ಕಾಗಿ ನೀಡಲಾಗಿತ್ತು ಈ ವರ್ಷ 2340 ಕೊಟಿ ರೂ.ಗಳನ್ನು ನೀಡಿದ್ದಾರೆ.
3220 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗಿದೆ. 58% ರಷ್ಟು ಕಡಿಮೆ ಮಾಡಿರುವುದು ರೈತರಿಗೆ ಮಾಡಿರುವ ದ್ರೋಹ. ನಬಾರ್ಡ್ 4.50% ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. 5 ವರ್ಷಗಳ ಅಂಕಿಅAಶಗಳನ್ನು ತೆಗೆದು ನೋಡಿದರೆ 5000 ಕೋಟಿ ರೂ.ಗಳಿದೆ. ಸಾಲ ಕೊಡುವುದು ಯಾವಾಗಲೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಎಲ್ಲಾ ರಾಜ್ಯಗಳಿಗೂ ಕಡಿತ ಮಾಡಲಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವರಿಸಲಾಗಿದೆ.
ಆರು ವರ್ಷಗಳಿಂದ ಜಾಸ್ತಿ ಕೊಟ್ಟಿದ್ದು, ಈಗ ಕಡಿಮೆ ಮಾಡಿದರೆ ಹೇಗೆ? ನಮ್ಮ ಸರ್ಕಾರದ ವತಿಯಿಂದ 5 ಲಕ್ಷದವರೆಗೆ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತಿದೆ. 4.50% ಬಡ್ಡಿ ಕೊಡುವುದು ನಮ್ಮ ಸರ್ಕಾರ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲವನ್ನು 5-15 ಲಕ್ಷದವರೆಗೆ 3% ಬಡ್ಡಿದರದಲ್ಲಿ ನೀಡಲಾಗುತ್ತಿದೆ. 1200 ಕೋಟಿಗಳಿಗಿಂತಲೂ ಹೆಚ್ಚು ಬಡ್ಡಿಯನ್ನು ನೀಡುತ್ತೇವೆ. ಈ ಬಗ್ಗೆ ಆರ್.ಅಶೋಕ್, ಬಿ.ಎಸ್.ಯಡಿಯೂರಪ್ಪ, ಯತ್ನಾಳ್, ಸಿ.ಟಿ.ರವಿ, ಹೆಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.












Click it and Unblock the Notifications