ಅನುಗ್ರಹ ಯೋಜನೆ ಮತ್ತೆ ಆರಂಭ: ಹೈನುಗಾರರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?
ಬೆಂಗಳೂರು, ಜುಲೈ 7: ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಲು ಮುಂದಾಗಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ 100 ಕೋಟಿ ರೂಪಾಯಿ ಷೇರು ಬಂಡವಾಳ ಹೂಡಲಿದೆ.
ಇದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ. ಆಕಸ್ಮಿಕ ಮರಣ ಹೊಂದುವ ಕುರಿ, ಮೇಕೆ ಸಾಕಾಣಿಕೆದಾರರು ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ʻಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆʼ ಎಂಬ ಧ್ಯೇಯವಾಕ್ಯ ಹೊಂದಿರುವ ʻನಂದಿನಿʼಯು ಕೋಟ್ಯಾಂತರ ಜನರ ಬದುಕಿಗೆ ಆಸರೆಯಾಗಿದೆ. ನಂದಿನಿ ಬ್ರಾಂಡ್ ಕನ್ನಡಿಗರೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಹೊಂದಿದ್ದು, ಇದನ್ನು ಉಳಿಸಿ ಇನ್ನಷ್ಟು ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದ ವೇಳೆ ತಿಳಿಸಿದರು.
ಅನುಗ್ರಹ ಯೋಜನೆ ಮತ್ತೆ ಆರಂಭ
ಕಳೆದ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ʻಅನುಗ್ರಹʼ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು ನಿರ್ಲಕ್ಷಿಸಿದೆ ಎಂದ ಸಿದ್ದರಾಮಯ್ಯ, ಈ ಯೋಜನೆಯನ್ನು ಪುನರ್‌ಸ್ಥಾಪಿಸಿ ಕುರಿ ಮತ್ತು ಮೇಕೆಗಳಿಗೆ 5,000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಹಾಲಿನ ಇಳುವರಿ ಹೆಚ್ಚಿಸಲು ಕ್ರಮ
ರಾಜ್ಯದಲ್ಲಿ 2022-23 ನೇ ಸಾಲಿನಲ್ಲಿ ಚರ್ಮಗಂಟು ರೋಗದ ಹರಡುವಿಕೆ, ಪಶು ಆಹಾರದ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ, ವಾಣಿಜ್ಯ ಬೆಳೆಗಳ ಪ್ರದೇಶಗಳ ಹೆಚ್ಚಳ ಹಾಗೂ ಮುಂಗಾರು ತಡವಾಗಿರುವ ಕಾರಣಗಳಿಂದ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಹಾಲಿನ ಇಳುವರಿಯಲ್ಲಿ ಶೇ.5 ರಿಂದ ಶೇ.7 ರಷ್ಟು ಇಳಿಕೆಯಾದೆ. ಉತ್ತಮ ಹಾಲು ನೀಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಹಾಗೂ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ, ಔಷಧಿ ಮತ್ತು ಲಸಿಕೆಗಳನ್ನು ಒದಗಿಸುವ ಮೂಲಕ ಹಾಲಿನ ಇಳುವರಿಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
2022-2023ರಲ್ಲಿ ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಒಟ್ಟು 32,045 ಜಾನುವಾರುಗಳು ಮೃತಪಟ್ಟಿದ್ದು. ಇದರಲ್ಲಿ ಒಟ್ಟು 25,859 ಮರಣ ಹೊಂದಿದ ಜಾನುವಾರುಗಳಿಗೆ 53 ಕೋಟಿ ರೂ. ಪರಿಹಾರಧನವನ್ನು ವಿತರಿಸಲಾಗಿದೆ. ಬಾಕಿ ಇರುವ ಮರಣಹೊಂದಿದ 5,851 ಜಾನುವಾರುಗಳ ಮಾಲೀಕರಿಗೆ 12 ಕೋಟಿ ರೂ. ಪರಿಹಾರ ಧನವನ್ನು ವಿತರಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications