Karnataka Budget 2023: ಪೊಲೀಸರಿಗೆ ಬಂಪರ್, ಈ ವರ್ಷವೇ 2,125 ಮನೆ
ಬೆಂಗಳೂರು, ಜುಲೈ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಪೊಲೀಸರಿಗೆ ಪ್ರಸಕ್ತ ವರ್ಷದಲ್ಲಿ ಬರೋಬ್ಬರಿ ಪೊಲೀಸ್ ಗೃಹ 2025 ಯೋಜನೆಯಡಿ ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಪೊಲೀಸ್ ಸಿಬ್ಬಂದಿಗೆ ಸುಸಜ್ಜಿತ ವಸತಿ ಗೃಹವನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಪೊಲೀಸ್ ಗೃಹ 2025 ಯೋಜನೆಯಡಿ ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷ 450 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

ಪೊಲೀಸ್ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಲು 2023-24ನೇ ಸಾಲಿನಲ್ಲಿ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಪೊಲೀಸ್ ಠಾಣೆ ಮತ್ತು ಕಛೇರಿ ಕಟ್ಟಡಗಳು, ಎಂ.ಟಿ. ಶೆಡ್, ಶಸ್ತ್ರಾಗಾರ ಮುಂತಾದ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ನಮ್ಮ ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಮಹತ್ವ ನೀಡಲಿದೆ. ʻನೈತಿಕ ಪೊಲೀಸ್ ಗಿರಿʼಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ, ಸೌಹಾರ್ದ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಸಮಾಜದಲ್ಲಿ ಹದಗೆಟ್ಟಿದ್ದ ಸಾಮರಸ್ಯದ ವಾತಾವರಣವನ್ನು ಮರುನಿರ್ಮಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ತವ್ಯದ ಸಮಯದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ತರಬೇತಿ ಶಾಲೆಗಳನ್ನು 20 ಕೋಟಿ ರೂ. ಗಳ ವೆಚ್ಚದಲ್ಲಿ ಬಲವರ್ಧನೆ ಮಾಡಲಾಗುವುದು. ಪೊಲೀಸ್ ಇಲಾಖೆಗೆ ಡ್ರೋನ್ ಕ್ಯಾಮರಾ, ಕಣ್ಗಾವಲು ಕ್ಯಾಮರಾ ಹಾಗೂ ಬಾಡಿವೋರ್ನ್ ಕ್ಯಾಮರಾಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದ ಮಾದರಿಯಲ್ಲಿ ರಾಜ್ಯದ ಇತರೆ ಏಳು ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ ರೂ. ಗಳ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ (STP) ಕಾರ್ಯವನ್ನು ಹಾಗೂ ಐದು ಕೇಂದ್ರ ಕಾರಾಗೃಹಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವಾಚ್ ಟವರ್ ಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಹೊಸದಾಗಿ ಐದು ಸಂಚಾರ ಪೊಲೀಸ್ ಠಾಣೆಗಳನ್ನು ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳನ್ನು ಮತ್ತು ಕಛೇರಿಗಳನ್ನು ಬಲಪಡಿಸಲು ಎರಡು ಹಂತಗಳಲ್ಲಿ ಒಟ್ಟು 2,454 ಹುದ್ದೆಗಳನ್ನು ಸೃಜಿಸಲಾಗುವುದು.
ಪರಾಧಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಪರಾಧ ತನಿಖಾ ವಿಭಾಗ (CID), ಸೈಬರ್ ಅಪರಾಧ ಘಟಕ (CCD) ಮತ್ತು ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳ ಘಟಕಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲು ಕ್ರಮವಹಿಸಲಾಗುವುದು.
ಬೆಂಗಳೂರು ಕೇಂದ್ರ ಕಾರಾಗೃಹದ ಮಾದರಿಯಲ್ಲಿ ರಾಜ್ಯದ ಇತರೆ ಏಳು ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ ರೂ. ಗಳ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ (STP) ಕಾರ್ಯವನ್ನು ಹಾಗೂ ಐದು ಕೇಂದ್ರ ಕಾರಾಗೃಹಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವಾಚ್ ಟವರ್ ಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.












Click it and Unblock the Notifications