ಕರ್ನಾಟಕ ಚುನಾವಣೆ; ಅಂಚೆ ಮತದಾನ ಮಾಡಲು ನಿಯಮಗಳು
ಬೆಂಗಳೂರು, ಏಪ್ರಿಲ್ 24; ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ. ಸೋಮವಾರ ಮಧ್ಯಾಹ್ನ 3 ಗಂಟೆಯ ತನಕ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 10ರಂದು ಚುನಾವಣೆ ನಡೆಯಲಿದೆ.
ಚುನಾವಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು, ಯೋಧರು ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅಂಚೆ ಮೂಲಕ ಮತ ಚಲಾವಣೆ ಮಾಡಲು ಕೆಲವು ನಿಯಮಗಳಿವೆ. ಅವುಗಳ ಕುರಿತು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಅಂಚೆ ಮತದಾನಕ್ಕಾಗಿ ಒಟ್ಟು 5 ನಮೂನೆ ಮತ್ತು ಲಕೋಟೆ ನೀಡಲಾಗುತ್ತದೆ. ಮತಪತ್ರ, ನಮೂನೆ 13 ಎ (ಮತದಾರರಿಂದ ಘೋಷಣೆ), ನಮೂನೆ 13 ಬಿ (ಅಂಚೆ ಮತಪತ್ರವನ್ನು ಹಾಕುವ ಲಕೋಟೆ), ನಮೂನೆ 13 ಸಿ (ಅಂಚೆ ಮತಪತ್ರವಿರುವ ಲಕೋಟೆ ಮತ್ತು ಮತದಾರರ ಘೋಷಣೆಯನ್ನು ಹಾಕುವ ಲಕೋಟೆ), ನಮೂನೆ 13 ಡಿ ( ಮತದಾರರ ಮಾರ್ಗದರ್ಶನಕ್ಕಾಗಿ ಸೂಚನೆಗಳು) ನಮೂನೆ 13 ಎ ರಲ್ಲಿ ಮತದಾರರ ಘೋಷಣೆ ನಮೂನೆಯಲ್ಲಿ ಮತದಾರನು ಘೋಷಣೆ ಮಾಡಿ, ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿಕೊಳ್ಳಬೇಕು.
ಮತದಾನ ಮಾಡುವುದು ಹೇಗೆ?; ಮತದಾರನು ಅಂಚೆ ಮತಪತ್ರದಲ್ಲಿ ಮತದಾನವನ್ನು ಮಾಡಿ (ಕ್ರಾಸ್ ಗುರುತು ಅಥವಾ ಟಿಕ್ ಮಾರ್ಕ್ ಮಾಡುವ ಮೂಲಕ) ನಮೂನೆ 13 ಬಿ ಲಕೋಟೆಯ ಮೇಲೆ ವಿಧಾನ ಸಭಾ ಕ್ಷೇತ್ರದ ಹೆಸರು ಮತ್ತು ಮತಪತ್ರದ ಕ್ರಮಸಂಖ್ಯೆಯನ್ನು ನಮೂದಿಸಿ, 13 ಬಿ ಲಕೋಟೆಯೊಳಗೆ ಮತ ಚಲಾಯಿಸಿದ ಮತಪತ್ರವನ್ನು ಹಾಕಿ ಗಮ್ಮಿನಿಂದ ಲಕೋಟೆಯನ್ನು ಮುಚ್ಚಬೇಕು.

ನಂತರ ನಮೂನೆ 13 ಸಿ ನಲ್ಲಿ ಮತ ಚಲಾಯಿಸಿದ ಮತ ಪತ್ರವಿರುವ ಲಕೋಟೆ (13 ಬಿ) ಮತ್ತು ಮತದಾರನಿಂದ ಘೋಷಣೆ (ನಮೂನೆ 13 ಎ) ಅನ್ನು ಹಾಕಿ ಗಮ್ಮಿನಿಂದ ಲಕೋಟೆಯನ್ನು ಮುಚ್ಚಿ, ಲಕೋಟೆ ಮೇಲೆ ಸಹಿ ಮಾಡಿ, ಚುನಾವಣಾಧಿಕಾರಿಗಳ ವಿಳಾಸವನ್ನು ನಮೂದಿಸಬೇಕು. ಮೇ 13ರಂದು ಮತ ಎಣಿಕೆ ಸಂದರ್ಭದಲ್ಲಿ ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಿದ ಬಳಿಕ ಮತಯಂತ್ರದಲ್ಲಿನ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಪೋಸ್ಟಲ್ ವೋಟಿಂಗ್ ಸೆಂಟರ್ ಆರಂಭ; ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ (ಪಿವಿಸಿ) ತೆರೆಯವ ದಿನಾಂಕವನ್ನು ನಿಗದಿಪಡಿಸುವ ಕುರಿತು ಪತ್ರವೊಂದನ್ನು ಬರೆದಿದೆ. ಸಂಜಯ್ ಬಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ ಸಿ. ಆ. ಸು. ಇ. (ಚುನಾವಣೆಗಳು) ಈ ಕುರಿತು ಪತ್ರವನ್ನು ಬರೆದಿದ್ದಾರೆ.
ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ (AVES) ಮತದಾನಕ್ಕಾಗಿ ಪೋಸ್ಟಲ್ ವೋಟಿಂಗ್ ಸೆಂಟರ್ (PVC) ಅನ್ನು ದಿನಾಂಕ 2/5/2023 ರಿಂದ 6/5/2023ಗಳಲ್ಲಿ ಸತತವಾಗಿ ಮೂರು ದಿವಸಗಳಲ್ಲಿ ಪಿ. ವಿ. ಸಿ. ಕೇಂದ್ರ ತೆರೆಯುವಂತೆ ತಿಳಿಸಲಾಗಿತ್ತು. ದಿನಾಂಕ 22/4/2023ರಂದು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಸರೆನ್ಸ್‌ನಲ್ಲಿ ನಿರ್ದೇಶಿಸಿದಂತೆ ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ತೆರೆಯಲು ತೀರ್ಮಾನ ಮಾಡಲಾಗಿದೆ.
ಅಂದರೆ ದಿನಾಂಕ 2/5/2023 ರಿಂದ 4/5/2023ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಅಗತ್ಯ ಕ್ರಮವಹಿಸಬೇಕು ಹಾಗೂ ಸದರಿ ನಿರ್ದೇಶನವನ್ನು ಸಂಬಂಧಪಟ್ಟ ಎಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು, ಭಾರತ ಚುನಾವಣಾ ಆಯೋಗ ನಿದಿಪಡಿಸಿದ ಮಾರ್ಗಸೂಚಿಗಳನ್ವಯ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಪತ್ರದಲ್ಲಿ ಸೂಚನೆ ನೀಡಲಾಗಿದೆ.












Click it and Unblock the Notifications