7 ಗಂಟೆಗೆ ಮತದಾನ ಆರಂಭ: ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿ ಇಲ್ಲಿದೆ
ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನ 7 ಗಂಟೆಗೆ ಆರಂಭವಾಗಲಿದೆ. ಎಲ್ಲಾ ಚುನಾವಣಾಧಿಕಾರಿಗಳು ಮತದಾನಕ್ಕೆ ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.
ಎಲ್ಲಾ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 2615 ಮಂದಿ ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ, 2430 ಪುರುಷ ಅಭ್ಯರ್ಥಿಗಳಿದ್ದು, 184 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಓರ್ವ ತೃತೀಯ ಲಿಂಗಿ ಕೂಡ ಈ ಬಾರಿ ಕಣದಲ್ಲಿರುವುದು ವಿಶೇಷ.

ರಾಜ್ಯಾದ್ಯಂತ 58,458 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಗೊಂದಲಕ್ಕೆ ಆಸ್ಪದ ಕೊಡದಂತೆ ಚುನಾವಣಾ ಪ್ರಕ್ರಿಯೆ ಮುಗಿಸಲು ಅಧಿಕಾರಿಗಳು ಶ್ರಮಿಸಿದ್ದಾರೆ. ಒಟ್ಟು 84119 ಮಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 5,30,85,566 ಮಂದಿ ಮತಾದರರು ಇದ್ದಾರೆ. ಇದರಲ್ಲಿ 2,66,82,156 ಮಂದಿ ಪುರುಷ ಮತದಾರರು, 2,63,98,483 ಮಂದಿ ಮಹಿಳಾ ಮತದಾರರು ಹಾಗೂ 4,927 ಮಂದಿ ತೃತೀಯ ಲಿಂಗಿ ಮತದಾರರಾಗಿದ್ದಾರೆ. ಇದರ ಜೊತೆಗೆ 47,488 ಸೇವಾನಿರತ ಮತದಾರರು ಇದ್ದಾರೆ. ಸದ್ಯ 224 ಕ್ಷೇತ್ರಗಳ ಜಿಲ್ಲಾವಾರು ವಿಭಾಗಿಸಿ 36 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.
ಬೆಳಗಾವಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ. 39.47 ಲಕ್ಷ ಮಂದಿ ಮತದಾರರಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 36.74 ಲಕ್ಷ ಮತದಾರರಿದ್ದು ಎರಡನೇ ಸ್ಥಾನದಲ್ಲಿದೆ. ಕೊಡಗು ಜಿಲ್ಲೆಯಲ್ಲಿ 4.56 ಲಕ್ಷ ಮತದಾರರಿದ್ದು ಅತಿ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ ಎನಿಸಿಕೊಂಡಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ಯಾಮನೂರು ಶಿವಶಂಕರಪ್ಪ ಕಣದಲ್ಲಿರುವ ಅತ್ಯಂತ ಹಿರಿಯ ಅಭ್ಯರ್ಥಿಯಾಗಿದ್ದಾರೆ. ಇವರಿಗೆ 92 ವರ್ಷ ವಯಸ್ಸಾಗಿದೆ. ಈ ಬಾರಿ ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಪ್ರಜಾಪ್ರಭುತ್ವದ ಹಬ್ಬಕ್ಕೆ ತಯಾರಾದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾದರಿ ಮತಗಟ್ಟೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸಜ್ಜಾಗಿ, ವೈವಿಧ್ಯಮಯ ಬಣ್ಣಗಳಿಂದ ಕಂಗೊಳಿಸುತ್ತಿದೆ. ಮತದಾರ ಮಹನೀಯರಿಗೆ ಮತಗಟ್ಟೆಗೆ ಸ್ವಾಗತ.@SpokespersonECI @ECISVEEP @ChitradurgaDeo #KarnatakaAssemblyElection2023 pic.twitter.com/ul4aJoqu2B
— Chief Electoral Officer, Karnataka (@ceo_karnataka) May 9, 2023
ಹಲವು ಕಡೆಗಳಲ್ಲಿ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ವಿಭಿನ್ನವಾಗಿ ಅಲಂಕಾರ ಮಾಡಲಾಗಿದೆ. ಪ್ರಜಾಪ್ರಭುತ್ವದ ದೊಡ್ಡ ಹಬ್ಬದಲ್ಲಿ ಎಲ್ಲರೂ ಭಾಗವಹಿಸಬೇಕು, ಪ್ರತಿಯೊಬ್ಬರು ಮತಚಲಾಯಿಸಬೇಕು ಎಂದು ಚುನಾವಣಾ ಆಯೋಹ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆ. ಮಹಿಳೆಯರಿಗಾಗಿಯೇ ಹಲವು ಕಡೆಗಳಲ್ಲಿ ಪಿಂಕ್ ಬೂತ್‌ಗಳನ್ನು ಸ್ಥಾಪನೆ ಮಾಡಲಾಗಿದೆ.












Click it and Unblock the Notifications