ದ್ವಿತೀಯ ಪಿಯುಸಿ 'ಕಲಾ' ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ: ಟಾಪರ್ಸ್ ಲಿಸ್ಟ್ ಇಲ್ಲಿದೆ
ಬೆಂಗಳೂರು: 2026ರ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯಾದ್ಯಂತ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಈ ವರ್ಷ, ಒಟ್ಟಾರೆ ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿ (Arts Combination) ಯಾರು ಪ್ರಥಮ, ಎಷ್ಟು ಮಂದಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಪಿಯುಸಿ ಕಲಾ ವಿಭಾಗದಲ್ಲಿ ಈ ಬಾರಿ ಒಟ್ಟು 1,34,921 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 98,310 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಮೂಲಕ ಶೇ. 72.86ರಷ್ಟು ಫಲಿತಾಂಶ ದಾಖಲಾಗಿದೆ.

ಕಲಾ ವಿಭಾಗದ ಟಾಪರ್ ಇವರು
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ 'ಅರ್ಚನಾ ಡಿ.ಎಂ' ಮತ್ತು ರೇಣುಕಾ ಡಿ.ಎಂ ಹಾಗೂ ಕಲಬುರಗಿಯ ಶ್ರೀಮತಿ ವಿ.ಜಿ. ಮಹಿಳಾ ಪಿಯು ಕಾಲೇಜಿನ ಸೃಷ್ಟಿ ಅವರು 600ಕ್ಕೆ ತಲಾ 598 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ನಂತರದ ಸ್ಥಾಣದಲ್ಲಿ ಫಾತಿಮತ್ ಶಹ್ಲಾ, ಮಹಮ್ಮದ್ ಅಯಾನ್ ನದಾಫ್, ಸಾನಿಕಾ ಮತ್ತು ಶಿವಾನಂದ ಮುಂತಾದವರು 595 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಹಿಂದಿನ ವರ್ಷ ಕಲಾ ವಿಭಾಗದ ಸಾಧನೆ ಎಷ್ಟು?
ಕಳೆದ ವರ್ಷ 2024-25ರಲ್ಲಿ ಒಟ್ಟು 1.53 ಕಲಾ ವಿಭಾಗ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಆ ಪೈಕಿ 81,553 ಮಂದಿ ಉತ್ತೀರ್ಣವಾಗಿದ್ದರು. ಆಗ ಕಲಾ ವಿಭಾಗದಲ್ಲಿ ಶೇಕಡಾ 53.29 ರಷ್ಟು ಫಲಿತಾಂಶ ದಾಖಲಾಗಿತ್ತು. ಪ್ರಸ್ತುತ ವರ್ಷ ಈ ವಿಭಾಗದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ ಅನುದಾನಿತ, ಅನುದಾನ ರಹಿತ, ಸರ್ಕಾರಿ, ಖಾಸಗಿ ಹಾಗೂ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಇಬ್ಬರು ಸೇರಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications