Kannada Rajyotsava: ಪ್ರಧಾನಿ ಮೋದಿ, ಸಿಎಂ ಡಿಕೆಶಿ, ಪ್ರಕಾಶ್ ರಾಜ್ & ದೆಹಲಿ ಸಿಎಂ ಸೇರಿ ಗಣ್ಯರಿಂದ ಕನ್ನಡಿಗರಿಗೆ ಶುಭಾಶಯ
ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಶುಭಕೋರಿದ್ದಾರೆ. "ನನ್ನ ನೆಲ.. ನನ್ನ ಬೇರು .. ನನ್ನ ಅಸ್ಮಿತೆ ಕನ್ನಡ . ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ನನ್ನ ಹೆಮ್ಮೆ .. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು' ಎಂದು ನಟ ಪ್ರಕಾಶ್ ರಾಜ್ ಅವರು ಶುಭಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಶುಭಕೋರಿದ್ದಾರೆ.
ಕನ್ನಡ ರಾಜ್ಯೋತ್ಸವ - ಪ್ರಗತಿಯ ನಿತ್ಯೋತ್ಸವ.. ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ, ಭಾಷೆ ಮತ್ತು ಬದುಕಿನ ಸೊಬಗನ್ನು ತನ್ನೊಡಲಲ್ಲಿ ಹೊತ್ತಿರುವ ಹೆಮ್ಮೆಯ ನಮ್ಮ ಕನ್ನಡ ನಾಡಿಗೆ ನಮನಗಳು. ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಆತ್ಮಗೌರವ ಮತ್ತು ಬದುಕಿನ ಉಸಿರು. ಕನ್ನಡದ ಕಂಪು ಜಗದಗಲ ಪಸರಿಸಲಿ, ಕನ್ನಡಿಗರ ಹೆಮ್ಮೆ ನಿತ್ಯವೂ ಬೆಳಗಲಿ. ನಾಡು, ನುಡಿ, ನೆಲ, ಜಲದ ರಕ್ಷಣೆಯ ಸಂಕಲ್ಪದೊಂದಿಗೆ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶುಭಕೋರಿದ್ದಾರೆ.

ಕನ್ನಡವೇ ಜೀವಾಳ, ಕನ್ನಡವೇ ಚಿರಕಾಲ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಕನ್ನಡವೆಂದರೆ ಬರಿ ನುಡಿಯಲ್ಲ, ಅದು ನಮ್ಮ ಉಸಿರು ಮತ್ತು ಸಂಸ್ಕೃತಿ. ಕಾವೇರಿಯಿಂದ ಗೋದಾವರಿಯವರೆಗೆ ಹರಿದು ಬಂದಿರುವ ನಮ್ಮ ನಾಡಿನ ಪರಂಪರೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ. ನಮ್ಮ ನಾಡು-ನುಡಿಯ ಹಿರಿಮೆ ವಿಶ್ವದೆಲ್ಲೆಡೆ ಬೆಳಗಲಿ. ಕನ್ನಡ ನೆಲದಲ್ಲಿ ಹುಟ್ಟಿದ ನಾವೇ ಧನ್ಯರು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಎಂದು ಡಿ.ಕೆ ಶಿವಕುಮಾರ್ ಅವರು ಶುಭಕೋರಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ನಾಡಿನ ಸಮಸ್ತ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಮ್ಮ ಹೆಮ್ಮೆ, ಕರ್ನಾಟಕ ನಮ್ಮ ಕರ್ಮಭೂಮಿ! ಶ್ರೀಮಂತ ಇತಿಹಾಸ, ಸಮೃದ್ಧ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ಅದ್ವಿತೀಯ ಭಾಷಾ ಸೌಂದರ್ಯವನ್ನು ಹೊಂದಿರುವ ಕನ್ನಡ ನಾಡು ನಮ್ಮೆಲ್ಲರ ಹೆಮ್ಮೆಯ ಪ್ರತೀಕ. ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಕನ್ನಡಿಗರ ಏಳಿಗೆಯ ಸಂಕಲ್ಪದೊಂದಿಗೆ, ಅಭಿವೃದ್ಧಿ ಹೊಂದಿದ ಕರ್ನಾಟಕದ ನಿರ್ಮಾಣಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಟ್ವೀಟ್ ಮಾಡಿ ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು!
ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್‌ಅಪ್‌ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ ಶುಭ ಹಾರೈಕೆ
ಇನ್ನು ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ ಅವರು ಕನ್ನಡ ರಾಜ್ಯೋತ್ಸವದ ಶುಭಾಶಯ ಹಂಚಿಕೊಂಡಿದ್ದಾರೆ. ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ವಿಜಯನಗರದ ವೈಭವಯುತ ಪರಂಪರೆ ಮತ್ತು ಕನ್ನಡ ಸಾಹಿತ್ಯದ ಕಾಲಾತೀತ ಸೌಂದರ್ಯದಿಂದ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವದವರೆಗೆ, ಕರ್ನಾಟಕವು ಪರಂಪರೆ ಮತ್ತು ಆಧುನಿಕತೆಯ ಸುಂದರ ಸಂಗಮವಾಗಿದೆ. ಕರ್ನಾಟಕವು ಸಮೃದ್ಧಿಯ ಹೊಸ ಎತ್ತರಗಳನ್ನು ಏರುವುದನ್ನು ಮುಂದುವರಿಸಲಿ ಮತ್ತು ವಿಕ್ಷಿತ್ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡಲಿ ಎಂದು ರೇಖಾಗುಪ್ತಾ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications
