ಕಿರಿಯ ವೈದ್ಯರ ಪ್ರತಿಭಟನೆ ಕೂಗು ಸರ್ಕಾರಕ್ಕೆ ಕೇಳಿಸಿತೆ?
ಬೆಂಗಳೂರು, ಏ. 9: ಮಾಸಿಕ ಸ್ಟೈಫಂಡ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮತ್ತು ಗೃಹ ವೈದ್ಯರು ಶಿವಾಜಿನಗರದ ಬೌರಿಂಗ್ ಮತ್ತು ಲೇಡಿಕರ್ಜನ್ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನಮ್ಮಲ್ಲಿ ಕೆಲವರು ಸೂಪರ್ ಸ್ಪೆಶಾಲಿಟಿ ವೈದ್ಯರಿದ್ದೇವೆ. ಸರ್ಕಾರ ನೀಡುತ್ತಿರುವ 30 ಸಾವಿರ ಯಾತಕ್ಕೂ ಸಾಲುತ್ತಿಲ್ಲ ಎಂದು ಆರೋಪಿಸಿದರು.
ಬೆಂಗಳೂರು ಸೇರಿದಂತೆ ಬಳ್ಳಾರಿಯ ವಿಜಯನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಹುಬ್ಬಳ್ಳಿಯ ಕಿಮ್ಸ್, ಹಾಸನದ ಹಿಮ್ಸ್, ಬೀದರ್ ಮತ್ತು ಬೆಳಗಾವಿ ವೈದ್ಯ ಶಿಕ್ಷಣ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಲಾಯಿತು.

ಮೊಂಬತ್ತಿ ಪ್ರತಿಭಟನೆ
ನಮ್ಮದು ಸಕಾರಾತ್ಮಕ ಬೇಡಿಕೆ. ಇಂದು ಸಹ ಕೆಲಸ ಮಾಡಿ ಬಂದಿದ್ದೇವೆ. ನಾಳೆಯೂ ಕೆಲಸ ಮಾಡುತ್ತೇವೆ. ಪ್ರತಿಭಟನೆ ಎಂಬ ಕಾರಣಕ್ಕೆ ರೋಗಿಗಳ ಹಿತ ಬಲಿಕೊಡುವುದಿಲ್ಲ. ಸರ್ಕಾರ ಈ ಬಾರಿಯಾದರೂ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯ ಪುನೀತ್ ಆಗ್ರಹಿಸಿದರು.

300ಕ್ಕೂ ಅಧಿಕ ವೈದ್ಯರು
ಪ್ರತಿಭಟನೆಯಲ್ಲಿ 300ಕ್ಕೂ ಅಧಿಕ ವೈದ್ಯರು ಪಾಲ್ಗೊಂಡಿದ್ದರು. ಬುಧವಾರ ಸಂಜೆ 6.30ಕ್ಕೆ ಆರಂಭವಾದ್ದ ಮೌನ ಮೆರವಣಿಗೆ ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಒಂದು ಸುತ್ತು ಹಾಕಿತು.

ಗ್ರಾಮೀಣ ಭಾಗಕ್ಕೆ ತೆರಳಲು ಸಿದ್ಧ
ವೈದ್ಯರು ಗ್ರಾಮೀಣ ಭಾಗಕ್ಕೆ ತೆರಳಲ್ಲ ಎಂಬ ಆರೋಪವಿದೆ. ಸರ್ಕಾರ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಸಮರ್ಪಕ ವೇತನ ನೀಡಿದರೆ ಹಳ್ಳಿಗಳಿಗೆ ತೆರಳಿ ರೋಗಿಗಳ ಸೇವೆ ಮಾಡುತ್ತೇವೆ ಎಂದು ಬೌರಿಂಗ್ ಆಸ್ಪತ್ರೆಯ ಅಶ್ವಿನಿ ಹೇಳಿದರು.

ಮುಖ್ಯಮಂತ್ರಿಗೆ ಮನವಿ
ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡಲಾಗಿದ್ದು, ನಮ್ಮ ಎಲ್ಲ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿ ಮತ್ತು ಉ ನ್ನತ ಶಿಕ್ಷಣ ಸಚಿವರಿಗೆ ಸಲ್ಲಿಸುತ್ತೇವೆ. ಅವರು ಈ ಬಗ್ಗೆ ಪೂರಕವಾಗಿ ಸ್ಪಂದಿಸುವ ಭರವಸೆಯಿದೆ ಎಂದು ಡಾ. ಅರುಣ್ ಕುಮಾರ್ ಹೇಳಿದರು.

ಬೇರೆ ರಾಜ್ಯಗಳನ್ನು ನೋಡಿ
ಪಕ್ಕದ ಆಂಧ್ರ ಪ್ರದೇಶ, ತಮಿಳುನಾಡಿಗೆ ಹೋಲಿಸಿದರೆ ನಮ್ಮ ರಾಜ್ಯದ ಜೀವನ ನಿರ್ವಹಣೆ ವೆಚ್ಚ ಅತಿಹೆಚ್ಚಿದೆ. ಆದರೆ ಇಲ್ಲಿ ಕಡಿಮೆ ವೇತನ ನೀಡಲಾಗುತ್ತಿದೆ. ಕೆಲಸಕ್ಕೂ ಭದ್ರತೆಯಿಲ್ಲ. ಕೊನೆಯ ವರ್ಷದಲ್ಲಿ ಕಲಿಯುತ್ತಿರುವವರು ಮದುವೆಯಾಗಿದ್ದು ಕುಟುಂಬವನ್ನು ನಿಭಾಯಿಸಬೇಕಿದೆ. ಈ ಎಲ್ಲ ಕಾರಣಗಳಿಂದ ನೀಡುತ್ತಿರುವ ಸ್ಟೈಫಂಡ್ ಹೆಚ್ಚಳ ಮಾಡಲೇಬೇಕು ಎಂದು ಆಗ್ರಹಿಸಿದರು.

ಧಿಕ್ಕಾರವಿಲ್ಲದ ಪ್ರತಿಭಟನೆ
ಉಳಿದ ಪ್ರತಿಭಟನೆಗಳಂತೆ ಘೋಷಣೆಗಳ ಆರ್ಭಟ ಇರಲಿಲ್ಲ. ಎಲ್ಲರೂ ಶಿಸ್ತಿನಿಂದಲೇ ಸಂಚರಿಸಿದರು. ಕೈಯಲ್ಲಿ ಮೊಂಬತ್ತಿ ಹಿಡಿದು, ಘೋಷಣಾ ಪತ್ರಗಳನ್ನು ಹಿಡಿದು ಒಬ್ಬರ ಹಿಂದೆ ಒಬ್ಬರು ತೆರಳಿ ಆವರಣದಲ್ಲಿ ಸಮಾವೇಶಗೊಂಡರು.












Click it and Unblock the Notifications