"ಕಾಂಗ್ರೆಸ್‌ನಲ್ಲಿ ತಿಂಡಿ ತಿನ್ನಿಸೋಕೆ ಹೈಕಮಾಂಡ್ ಬರಬೇಕಾಯ್ತು"
ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಸಿಎಂ ಕುರ್ಚಿ ಕಿತ್ತಾಟದ ನಡುವೆ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಹೈಕಮಾಂಡ್ ಸೂಚನೆ ಮೇರೆಗೆ ಇಬ್ಬರೂ ನಾಯಕರು ಒಂದೆಡೆ ಸೇರಿ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಜೆಡಿಎಸ್ ವ್ಯಂಗ್ಯ ಮಾಡಿದ್ದು, ಕಾಂಗ್ರೆಸ್‌ನಲ್ಲಿ ತಿಂಡಿ ತಿನ್ನಿಸೋಕೆ ಹೈಕಮಾಂಡ್ ಬರಬೇಕಾಯ್ತು ಎಂದು ಟೀಕಿಸಿದೆ. ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ಕೊಟ್ಟು, ಜನರನ್ನು ಯಾಮಾರಿಸುತ್ತಿರುವ ಕಾಂಗ್ರೆಸ್ ಸರ್ಕಾರವು ಕುರ್ಚಿಗಾಗಿ 2.5 ವರ್ಷಕ್ಕೇ ಬಣಗಳಾಗಿ ಒಡೆದು ಹೋಳಾಗಿದೆ ಎಂದಿದೆ.
ಅಧಿಕಾರಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ಪರ-ವಿರೋಧ ಶಾಸಕರ ಪಟಾಲಂಗೆ ಮೇವು ಹಾಕಿ ದಿನಬೆಳಗಾದರೆ ಕೂಗುಮಾರಿಯಂತೆ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೆರೆಹಾನಿ, ಕಬ್ಬು, ಮೆಕ್ಕೆಜೋಳ ಬೆಲೆ ಕುಸಿತದಿಂದ ಅನ್ನದಾತರು ಕಂಗಾಲಾಗಿದ್ದಾರೆ. ಬೆಲೆ ಏರಿಕೆ, ಮೂಲಸೌಕರ್ಯ ಕೊರತೆ, ಸಾವಿರಾರು ಸರ್ಕಾರಿ ಶಾಲೆಗಳು ಬಂದ್, ಅಭಿವೃದ್ಧಿ ಇಲ್ಲದೆ ಜನಸಾಮಾನ್ಯರು ಹೈರಾಣಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದೆ.

ಇವೆಲ್ಲದರ ಪರಿವೇ ಇಲ್ಲದೇ, ಕುರ್ಚಿಗಾಗಿ ಭಂಡ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್, ಹೈಕಮಾಂಡ್ ಮೀಟಿಂಗ್, ಬೆಂಬಲಿಗರ ಮೀಟಿಂಗ್, ಟೆಂಪಲ್ ರನ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದು, ರಾಜ್ಯದ ಪರಿಸ್ಥಿತಿ ಅದೋಗತಿಗೆ ಇಳಿಸಿದ್ದಾರೆ ಎಂದು ಹರಿಹಾಯ್ದಿದೆ. ಬೆಂಗಳೂರಿನ 'ಕಾವೇರಿ' ನಿವಾಸದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಹೈಕಮಾಂಡ್ ನಾಯಕರು ನಮಗೆ ಕರೆ ಮಾಡಿ ಗೊಂದಲ ಪರಿಹರಿಸಿಕೊಳ್ಳುವ ಮಾಡುವ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದರು. ನಾವು ಅದರಂತೆ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದು ಈ ಹಿಂದೆಯೂ ನಾನು ಸ್ಪಷ್ಟಪಡಿಸಿದ್ದೆ. ನಮ್ಮ ನಡುವೆ ನಾಳೆಯಿಂದ ಯಾವುದೇ ರೀತಿಯ ಗೊಂದಲಗಳು ಇರಲ್ಲ. ಈಗಲೂ ಸಹ ಯಾವುದೇ ಗೊಂದಲವಿಲ್ಲ. ಈ ಹಿಂದೆಯೂ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹೈಕಮಾಂಡ್ ನಾವಿಬ್ಬರೂ ಮಾತು ಕೇಳ್ತೀವಿ
ರಾಜಕೀಯವಾಗಿ ನಮ್ಮಿಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಹಿಂದೆಯೂ ಕೆಲಸ ಮಾಡಿಕೊಂಡು ಬಂದಿದ್ದೇವೆ, ಮುಂದೆಯೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ, ಇರೋದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಗುಂಪುಗಾರಿಕೆಗೆ ಹಿಂದೆಯೂ ಅವಕಾಶ ಕೊಡಲಿಲ್ಲ, ಈಗಲೂ ಕೊಡಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಅದು ನಮ್ಮ ಕರ್ತವ್ಯ. ಪ್ರತಿಯೊಬ್ಬ ಶಾಸಕರನ್ನು, ಕಾರ್ಯಕರ್ತರನ್ನು ಮತ್ತು ನಮ್ಮ ಪಕ್ಷವನ್ನು ಶಕ್ತಿಶಾಲಿಯಾಗಿ ಬೆಳೆಸಬೇಕು. ಅದೂ ನಮ್ಮಿಬ್ಬರ ಕರ್ತವ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. 2028ಕ್ಕೆ ಮತ್ತೆ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರಲು ಹಲವು ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ ಎಂದಿದ್ದಾರೆ.
ಮರು ಚುನಾವಣೆ ಬಯಸುತ್ತಿದ್ದಾರೆ
ರಾಜ್ಯದಲ್ಲಿ ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿರುವ ಕಾರಣ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಎಟಿಎಂ ಸಿಕ್ಕಂತಾಗಿದೆ. ದುರಾಡಳಿತವನ್ನು ನೋಡಿ ಬೇಸತ್ತಿರುವ ರಾಜ್ಯದ ಜನತೆ ಸರ್ಕಾರ ವಿಸರ್ಜನೆಗೊಂಡು ಮರು ಚುನಾವಣೆ ನಡೆಯಲಿ ಎಂದು ಬಯಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications