ಅ.15ಕ್ಕೆ ಜೆಡಿಎಸ್ ಕೋರ್ ಕಮಿಟಿ ಪಟ್ಟಿ ಬಿಡುಗಡೆ
ಬೆಂಗಳೂರು, ಅ.6 : ಜೆಡಿಎಸ್ ಪಕ್ಷದೊಳಗಿನ ಅಸಮಾಧಾನಗಳನ್ನು ಬಗೆಹರಿಸಲು ಕೋರ್ ಕಮಿಟಿ ರಚನೆ ಮಾಡಲಾಗಿದೆ. ಅ.15ರಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೋರ್ ಕಮಿಟಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಒಟ್ಟು 11 ಸದಸ್ಯರು ಸಮಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್‌ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಕೋರ್ ಕಮಿಟಿ ರಚನೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಪಕ್ಷಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೋರ್ ಕಮಿಟಿಯಲ್ಲಿ ತಗೆದುಕೊಳ್ಳಲಾಗುತ್ತದೆ. ವಿಧಾನಪರಿಷತ್ ಮತ್ತು ವಿಧಾನಸಭೆಯ ಸದಸ್ಯರು ಕೋರ್ ಕಮಿಟಿಯಲ್ಲಿರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಸದ್ಯ ಕೋರ್ ಕಮಿಟಿ ರಚನೆ ಮಾಡಲಾಗಿದ್ದು ಹಿರಿಯರು ಮತ್ತು ಕಿರಿಯ ಸದಸ್ಯರು ಸೇರಿದಂತೆ ಒಟ್ಟು 11 ಸದಸ್ಯರ ಕೋರ್ ಕಮಿಟಿಯನ್ನು ಅಂತಿಮಗೊಳಿಸಲಾಗಿದೆ. ಅ.15ರಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕೋರ್ ಕಮಿಟಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. [ಜೆಡಿಎಸ್ ಶಾಸಕಾಂಗ ಸಭೆಯ ಮುಖ್ಯಾಂಶಗಳು]
ಮೊದಲು ಎಚ್.ಡಿ.ದೇವೇಗೌಡರ ಕುಟುಂಬದ ಯಾವ ಸದಸ್ಯರು ಕೋರ್ ಕಮಿಟಿಯಲ್ಲಿರಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ಸಮತಿಯಲ್ಲಿ ಸಮನ್ವಯ ಸಾಧಿಸುವ ಉದ್ದೇಶದಿಂದ ದೇವೇಗೌಡರ ಒಪ್ಪಿಗೆ ಪಡೆದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೋರ್ ಕಮಿಟಿಗೆ ಸೇರಿಸಲಾಗಿದೆ. ಉಳಿದಂತೆ ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಸಮತಿ ಸದಸ್ಯರಾಗಿರುತ್ತಾರೆ. [ರಾಜಕೀಯವಾಗಿ ಮಹತ್ವದ ನಿರ್ಧಾರಕ್ಕೆ ಬಂದ ಕುಮಾರಸ್ವಾಮಿ]
ಜಮೀರ್ ಅಸಮಾಧಾನ : ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಕುಮಾರಸ್ವಾಮಿ ನಡುವಿನ ಅಸಮಾಧಾನ ಮತ್ತೊಮ್ಮೆ ಬಯಲಾಗಿದೆ. ಸೋಮವಾರ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಬಕ್ರೀದ್ ಪ್ರಾರ್ಥನೆ ಸಭೆಗೆ ಕುಮಾರಸ್ವಾಮಿ ಆಗಮಿಸಿಲ್ಲ ಎಂದು ಜಮೀರ್ ಅಹಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಕುಮಾರಸ್ವಾಮಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.











Click it and Unblock the Notifications