Jan Ki Baat Exit Poll Survey 2023: ಕರ್ನಾಟಕದಲ್ಲಿ ಅತಂತ್ರ ಸರ್ಕಾರ?
ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಅಂತ್ಯವಾಗಿದ್ದು, ಕಣದಲಿದ್ದ 2,615 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಇದೀಗ ಫಲಿತಾಂಶವನ್ನು ಅಂದಾಜು ಮಾಡುವ ಪ್ರಮುಖ ಎಕ್ಸಿಟ್ ಪೋಲ್ ಸಮೀಕ್ಷೆ ಹೊರ ಬಂದಿದೆ. ಮೇ 13 ಶನಿವಾರ ಫಲಿತಾಂಶ ಪ್ರಕಟವಾಗಲಿದೆ.
ಇದರಲ್ಲಿ ಪ್ರಮುಖವಾಗಿ Jan Ki Baat ಸಂಸ್ಥೆ ಹಾಗೂ ಸುವರ್ಣ ಕನ್ನಡ ಟಿವಿ ಮಾಡಿರುವ ಎಕ್ಸಿಟ್ ಪೋಲ್ ಹೊರ ಬಂದಿದ್ದು, ಇದರ ಪ್ರಕಾರ ರಾಜ್ಯದಲ್ಲಿರುವ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 94ರಿಂದ 117 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಅಲ್ಲದೆ ಕಾಂಗ್ರೆಸ್ 91ರಿಂದ 106 ಹಾಗೂ ಜೆಡಿಎಸ್ 14ರಿಂದ 24 ಸ್ಥಾನಗಳನ್ನು ಪಡೆಯಲಿದ್ದು, ಇತರರು 2 ಸ್ಥಾನಗಳು ಬರಲಿದೆ ಎಂದು ಹೇಳಿದೆ.

ವಲಯವಾರು ಸ್ಥಾನಗಳ ವಿವರ:
ಇದಲ್ಲದೆ ಮುಂಬೈ ಕರ್ನಾಟಕ ಭಾಗದಲ್ಲಿ 50 ಕ್ಷೇತ್ರಗಳಿದ್ದು, ಜನ್‌ಕಿ ಬಾತ್ ಹಾಗೂ ಸುವರ್ಣ ನ್ಯೂಸ್ ಎಕ್ಸಿಟ್ ಪೋಲ್ ಪ್ರಕಾರ ಇಲ್ಲಿ ಬಿಜೆಪಿಗೆ 31 ಸ್ಥಾನ, ಕಾಂಗ್ರೆಸ್‌ಗೆ 19 ಸ್ಥಾನಗಳು ಬರಲಿದ್ದು, ಜೆಡಿಎಸ್ ಹಾಗೂ ಪಕ್ಷೇತರರು ಇಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಾರೆ ಎಂದು ಅಂದಾಜಿಸಲಾಗಿದೆ.
ಕರಾವಳಿ ಕರ್ನಾಟಕ ವಿಭಾಗ:
ಕರಾವಳಿ ಕರ್ನಾಟಕ ವಿಭಾಗದಲ್ಲಿ 19 ಕ್ಷೇತ್ರಗಳು ಬರಲಿದ್ದು, ಜನ್ ಕಿ ಬಾತ್ ಹಾಗೂ ಸುವರ್ಣ ನ್ಯೂಸ್ ಎಕ್ಸಿಟ್ ಪೋಲ್ ಪ್ರಕಾರ 15 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಕಾಂಗ್ರೆಸ್ 4 ಸ್ಥಾನ ಪಡೆಯಲಿದ್ದು, ಜೆಡಿಎಸ್ ಹಾಗೂ ಇತರರಿಗೆ ಇಲ್ಲಿ ಸ್ಥಾನವಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು ವಿಭಾಗ:
ಬೆಂಗಳೂರು ಭಾಗದಲ್ಲಿ ಒಟ್ಟು 32 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 17 ಸ್ಥಾನಗಳು ಹಾಗೂ ಕಾಂಗ್ರೆಸ್ 15 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಲಾಗಿದೆ. ಇದಲ್ಲದೆ ಜೆಡಿಎಸ್ ಹಾಗೂ ಇತರರು ಶೂನ್ಯ ಸಂಪಾದನೆ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ.
ಹಳೆ ಮೈಸೂರು ವಿಭಾಗ:
ಇನ್ನು ಹಳೆ ಮೈಸೂರು ಭಾಗದಲ್ಲಿ ಒಟ್ಟು 57 ವಿಧಾನಸಭಾ ಕ್ಷೇತ್ರಗಳ ಪೈಕಿ ಜನ್ ಕಿ ಬಾತ್ ಸುವರ್ಣ ನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದರೆ, 24 ಸ್ಥಾನ ಕಾಂಗ್ರೆಸ್, ಜೆಡಿಎಸ್ 16 ಸ್ಥಾನಗಳು ಮತ್ತು ಇತರರು 2 ಸ್ಥಾನಗಳಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಹೈದರಾಬಾದ್ ಕರ್ನಾಟಕ ವಿಭಾಗ:
ಅದರಂತೆ ಹೈದರಾಬಾದ್ ಕರ್ನಾಟಕದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 15 ಸ್ಥಾನಗಳು ಕಾಂಗ್ರೆಸ್ 24 ಸ್ಥಾನಗಳು ಹಾಗೂ ಜೆಡಿಎಸ್‌ಗೆ 01 ಸ್ಥಾನ ಪಡೆಯಲಿದೆ ಎಂದು ಹೇಳಿದೆ. ಈ ಭಾರಿ ಇತರರಿಗೆ ಇಲ್ಲಿ ಅವಕಾಶವಿಲ್ಲ ಎಂದು ಸಮೀಕ್ಷೆ ತಿಳಿಸಿದೆ.
ಕೇಂದ್ರ ಕರ್ನಾಟಕ ಭಾಗದಲ್ಲಿರುವ 26 ಸ್ಥಾನಗಳಲ್ಲಿ ಬಿಜೆಪಿಗೆ 13 ಸ್ಥಾನಗಳು, ಕಾಂಗ್ರೆಸ್‌ಗೆ 11 ಸ್ಥಾನಗಳು, ಜೆಡಿಎಸ್‌ಗೆ 02 ಸ್ಥಾನಗಳು ಸಿಗಲಿದ್ದು ಇತರರು ಶೂನ್ಯ ಎಂದು ಸಮೀಕ್ಷೆ ಅಂದಾಜಿಸಿದೆ.
ಇನ್ನು ಜನ್ ಕಿ ಬಾತ್ ಸುವರ್ಣ ನ್ಯೂಸ್ ಪ್ರಕಾರ ಪಕ್ಷಾವಾರು ಮತ ಹಂಚಿಕೆ ಪ್ರಮಾಣ ಬಿಜೆಪಿಗೆ 37.5ರಿಂದ 39%, ಕಾಂಗ್ರೆಸ್‌ಗೆ 38ರಿಂದ 40% ರಷ್ಟು ಮತ ಹಂಚಿಕೆಯಾಗಲಿದೆ ಎಂದು ಹೇಳಿದೆ. ಅದರಂತೆ ಜೆಡಿಎಸ್‌ಗೆ 14ರಿಂದ 17% ಮತ ಹಂಚಿಕೆಯಾದರೆ ಇತರರಿಗೆ 8.5ರಿಂದ 6% ಮತ ಹಂಚಿಕೆಯಾಗಲಿದೆ ಎಂದು ಸಮೀಕ್ಷೆ ವಿವರ ತಿಳಿಸಿದೆ. ಮೇ 10 ಬುಧವಾರ ಮತದಾನ ಮುಕ್ತಾಯವಾಗಿದ್ದು, ಈಗ ಎಲ್ಲರ ಚಿತ್ತ ಫಲಿತಾಂಶದ ದಿನವಾದ 13ನೇ ತಾರೀಖಿನತ್ತ ನೆಟ್ಟಿದೆ.












Click it and Unblock the Notifications