Gram Panchayat: ಗ್ರಾಮ ಪಂಚಾಯಿತಿ ಕಛೇರಿಗೆ ಸಿಸಿಟಿವಿ ಕಣ್ಗಾವಲು, ಮಾರ್ಗಸೂಚಿ
ಬೆಂಗಳೂರು, ಆಗಸ್ಟ್ 18: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಕಾರ್ಯ ವೈಖರಿಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ. ಪ್ರತಿ ಗ್ರಾಮ ಪಂಚಾಯತಿ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಈ ಕುರಿತು ಕೆ. ಯಾಲಕ್ಕಿಗೌಡ, ನಿರ್ದೇಶಕರು (ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಯಾವ ಪ್ರದೇಶ ಸಿಸಿಟಿವಿ ಕಣ್ಗಾವಲಿನಲ್ಲಿ ಇರಬೇಕು ಎಂಬುದು ಸೇರಿದಂತೆ ಮಾರ್ಗಸೂಚಿಯಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಅನ್ನು ಜಾರಿಗೊಳಿಸುವ ಮೂಲಕ ಹಾಗೂ ವಿಕೇಂದ್ರಿಕರಣದ ತತ್ವಕ್ಕನುಸಾರವಾಗಿ ರಾಜ್ಯದ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ, ಪ್ರಕಾರ್ಯಗಳು ಹಾಗೂ ಸಿಬ್ಬಂದಿಗಳನ್ನು ಹಸ್ತಾಂತರಿಸಲಾಗಿದೆ. ಆಯಾ ಪ್ರಕಾರ್ಯಗಳನ್ನು ಆಯಾ ಹಂತಗಳಲ್ಲಿಯೇ ಅನುಷ್ಟಾನಗೊಳಿಸಲು ಅನುವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಗ್ರಾಮ ಪಂಚಾಯತಿಯಿಂದ ಅನುಷ್ಟಾನಗೊಳಿಸಿಸುವ ಜವಾಬ್ದಾರಿಯನ್ನು ವಹಿಸಿದ್ದು, ಅದರಂತೆ ಪ್ರತಿ ಯೋಜನೆಯ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.
ಇದರಿಂದಾಗಿ ಗ್ರಾಮ ಪಂಚಾಯತಿಗಳು ಪರಿಣಾಮಕಾರಿಯಾಗಿ ಸ್ಥಳೀಯ ಸರ್ಕಾರದಂತೆ ಕಾರ್ಯನಿರ್ವಹಿಸಬೇಕಾಗಿದ್ದು, ಅವುಗಳ ಜವಾಬ್ದಾರಿ ಮತ್ತು ಕರ್ತವ್ಯಗಳು ಹೆಚ್ಚಾಗಿವೆ. ರಾಜ್ಯದಲ್ಲಿನ ಗ್ರಾಮ ಪಂಚಾಯತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿದ್ದು, ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸೇವೆ/ ಸೌಲಭ್ಯಗಳನ್ನು ತಲುಪಿಸುವಲ್ಲಿ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ತಳಹಂತದಲ್ಲಿ ಅನುಷ್ಟಾನಗೊಳಿಸಿ ಗ್ರಾಮೀಣ ಭಾಗದ ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮ ಪಂಚಾಯತಿಗಳಿಂದ ದೊರಕುವ ಸೇವೆ/ ಸೌಲಭ್ಯಗಳನ್ನು ಪಡೆಯಲು ಗ್ರಾಮ ಪಂಚಾಯತಿ ಕಛೇರಿಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ.
ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಕಛೇರಿ ದಾಖಲೆಗಳ ಸುರಕ್ಷತೆ, ನೌಕರರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ಅಹಿತಕರ ಘಟನೆಗಳನ್ನು ತಡೆಯುವ ಹಾಗೂ ಇನ್ನಿತರೆ ಉದ್ದೇಶಗಳಿಂದ ಗ್ರಾಮ ಪಂಚಾಯತಿ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಅವಶ್ಯಕತೆಯಿರುವುದನ್ನು ಸರ್ಕಾರವು ಮನಗಂಡಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000 ನ್ನು ಕಟ್ಟುನಿಟ್ಟಾಗಿ ಪಾಲಿಸಿ, ಆಯಾ ಗ್ರಾಮ ಪಂಚಾಯತಿ ಸ್ವಂತ ನಿಧಿಯಿಂದ ವೆಚ್ಚ ಭರಿಸಿ, ಅಗತ್ಯ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನು ಖರೀದಿ ಮಾಡಿ, ಪ್ರತಿ ಗ್ರಾಮ ಪಂಚಾಯತಿ ಕಛೇರಿಗಳಲ್ಲಿ ಅಳವಡಿಸಲು ಕ್ರಮವಹಿಸುವಂತೆ ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದೆ.
ಮಾರ್ಗಸೂಚಿಗಳು: ರಾಜ್ಯದ ಗ್ರಾಮ ಪಂಚಾಯತಿ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಮತ್ತು ಸಿಸಿಟಿವಿ ಕಣ್ಗಾವಲಿನಲ್ಲಿ ಒಳಗೊಳ್ಳಬೇಕಾದ ಪ್ರದೇಶಗಳು.
* ಕಛೇರಿ ಮುಖ್ಯ ಗೇಟ್ (ಪ್ರವೇಶ ಮತ್ತು ನಿರ್ಗಮನ)
* ಗ್ರಾಮ ಪಂಚಾಯತಿ ಕಛೇರಿಯ ಪಡಸಾಲೆಗಳು/ ದಾಸ್ತಾನು ಕೊಠಡಿ.
* ಸಾರ್ವಜನಿಕ ಸೇವೆ/ ಸೌಲಭ್ಯಗಳನ್ನು ನೀಡಲಾಗುವ ಸ್ಥಳ.
* ಸಾರ್ವಜನಿಕರೊಂದಿಗೆ ಹೆಚ್ಚಾಗಿ ಕಛೇರಿ ವ್ಯವಹಾರ ಮಾಡುವಂತಹ ಸ್ಥಳ.
* ಸಭಾಂಗಣ.
* ಗ್ರಾಮ ಪಂಚಾಯತಿ ಕಟ್ಟಡದಲ್ಲಿ ಕಂಡು ಬರುವ ಕೊಠಡಿಗಳು/ ಸ್ಥಳಗಳು.
* ಇನ್ನು ಅಳವಡಿಸಲು ಅವಶ್ಯಕತೆಯಿರುವ ಸ್ಥಳಗಳು
ಸಾಮಾನ್ಯ ಮಾರ್ಗಸೂಚಿ
* ಅಂತರ್ ಜಾಲದ ಮುಖಾಂತರ Static IP enabled ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು.
* ಅಂತರ್ ಜಾಲದ ಮುಖಾಂತರ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಿಂದ ವೀಕ್ಷಿಸುವಂತಹ ಮಾದರಿಯ ತಂತ್ರಜ್ಞಾನ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು.
* ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000 ಅನ್ನು ಕಟ್ಟುನಿಟ್ಟಾಗಿ ಪಾಲಿಸಿ ಖರೀದಿ ಪ್ರಕ್ರಿಯೆ ಕೈಗೊಳ್ಳುವುದು.
* ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ ವಾರಂಟಿ ಹೊಂದಿರುವ, ಸುಲಭವಾಗಿ ಹಾಗೂ ಸ್ಥಳೀಯವಾಗಿ ರಿಪೇರಿಗೊಳಪಡಿಸಬಹುದಾದಂತಹ ಸಂಸ್ಥೆಯ Static IP enabled ಸಿಸಿಟಿವಿ ಕ್ಯಾಮೆರಾಗಳನ್ನೇ
ಖರೀದಿಸುವುದು.
* ಉತ್ತಮ ವಿಡಿಯೋ ಮ್ಯಾನೇಜ್‌ಮೆಂಟ್ ಹೊಂದಿರಬೇಕು. (ಲೈವ್ ಇಮೇಜ್/ ವಿಡಿಯೋಗಳನ್ನು ನೋಡಲು ಹಾಗೂ ರೆಕಾರ್ಡ್ ಮಾಡಿ, ನಂತರ ನೋಡುವ ವ್ಯವಸ್ಥೆ ಹೊಂದಿರಬೇಕು).
* ಒಂದು ತಿಂಗಳ ಇಮೇಜ್/ ವಿಡಿಯೋಗಳನ್ನು ಸ್ಟೋರ್ (ಸಂಗ್ರಹ) ಮಾಡುವಂತಿರಬೇಕು. ವಿಡಿಯೋ ಅವಶ್ಯಕವೆನಿಸಿದಲ್ಲಿ ಡಿವಿಡಿ, ಅಥವಾ ಹಾರ್ಡ್ ಡ್ರೈವ್‌ಗಳಲ್ಲಿ ಸ್ಟೋರ್ (ಸಂಗ್ರಹ) ಮಾಡುವಂತಿರಬೇಕು. ವಿದ್ಯುತ್ ಇಲ್ಲದಿದ್ದಾಗಲೂ ಕಾರ್ಯನಿರ್ವಾಹಿಸಲು ಸಿಸಿಟಿವಿ ಕ್ಯಾಮೆರಾಗಳಿಗೆ ವಿದ್ಯುತ್ ಬ್ಯಾಕ್ ಅಪ್ (ಯು.ಪಿ.ಎಸ್/ ಸೋಲಾರ್ ಯು.ಪಿ.ಎಸ್.) ಸೌಲಭ್ಯವನ್ನು ಕಲ್ಪಿಸುವುದು.
* ಕಛೇರಿ ಹೊರಭಾಗದಲ್ಲಿ ಅಳವಡಿಸುವಂತಿದ್ದರೆ, ಮಳೆ ಹಾಗೂ ಗಾಳಿಗೆ ಹಾಳಾಗದಂತಹ ಸಿಸಿಟಿವಿ ಕ್ಯಾಮೆರಾಗಳನ್ನು ಖರೀದಿಸುವುದು.
* ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಬಳಕೆದಾರರ ದೃಢೀಕರಣ ನೀಡಿದ ನಂತರ ಪಾವತಿಸುವುದು.
* ಗ್ರಾಮ ಪಂಚಾಯತಿಯ ಸಿಬ್ಬಂದಿ ಹಾಗೂ ನೌಕರರು ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುವ ಬಗ್ಗೆ, ಖರೀದಿಸಲ್ಪಟ್ಟ ಸಂಸ್ಥೆಯಿಂದ ಕಡ್ಡಾಯವಾಗಿ ತರಬೇತಿಯನ್ನು ಪಡೆಯುವುದು, ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ ಪಂಚಾಯತಿಗಳಲ್ಲಿ ಮತ್ತೊಮ್ಮೆ ಅಳವಡಿಸುವ ಅಗತ್ಯವಿರುವುದಿಲ್ಲ.












Click it and Unblock the Notifications