ನಷ್ಟ ಮಾಡುವ ಮಾರ್ಕೊಪೋಲೊ ಬಸ್ ಖರೀದಿ ಬಗ್ಗೆ ತನಿಖೆ
ಬೆಂಗಳೂರು, ಜ.12 : ಸಾರಿಗೆ ಸಂಸ್ಥೆಗಳಿಗೆ ನಷ್ಟ ಉಂಟುಮಾಡಿದ್ದ ಮಾರ್ಕೊಪೋಲೊ ಬಸ್ ಖರೀದಿ ಬಗ್ಗೆ ತನಿಖೆ ನಡೆಯಲಿದೆ. 2009ರಲ್ಲಿ ಬಿಎಂಟಿಸಿಗಾಗಿ 98 ಹವಾನಿಯಂತ್ರಿತ ಮಾರ್ಕೊಪೋಲೊ ಬಸ್ ಮತ್ತು ಮೈಸೂರಿನಲ್ಲಿ 44 ಹವಾನಿಯಂತ್ರಿತವಲ್ಲದ ಬಸ್ಸುಗಳನ್ನು ಖರೀದಿ ಮಾಡಲಾಗಿತ್ತು.
ಮಾರ್ಕೊಪೋಲೊ ಬಸ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದ ತನಿಖೆ ನಡೆಸುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. [ಗುಜರಿ ಸೇರಲಿವೆ ಮಾರ್ಕೊಪೋಲೊ ಬಸ್!]

ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಜೆ-ನರ್ಮ್ ಯೋಜನೆಯಡಿ ಮಾರ್ಕೊಪೋಲೊ ಬಸ್ಸುಗಳನ್ನು ಖರೀದಿ ಮಾಡಲಾಗಿದೆ. ಖರೀದಿ ಕುರಿತು ಹಲವು ಆರೋಪಗಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ತನಿಖೆಯ ಸ್ವರೂಪವನ್ನು ಮುಖ್ಯ ಕಾರ್ಯದರ್ಶಿಗಳು ನಿರ್ಧರಿಸಲಿದ್ದಾರೆ ಎಂದರು. [ಸಾರಿಗೆ ಸಂಸ್ಥೆಗಳ ನಷ್ಟ, ಎಚ್ಡಿಕೆ ಪ್ರಶ್ನೆಗಳು]
ಮಾರ್ಕೊಪೋಲೊ ಬಸ್ ಹಲವು ತಾಂತ್ರಿಕ ಸಮಸ್ಯೆಯನ್ನು ಒಳಗೊಂಡಿದೆ. ಇದರ ಶಬ್ದ ಮತ್ತು ಹೊಗೆ ಸಹ ಹೆಚ್ಚು, ಇದರಿಂದ ಬರುವ ಲಾಭಕ್ಕಿಂತ ನಿರ್ವಹಣಾ ವೆಚ್ಚವೇ ಅಧಿಕವಾಗಿದೆ. ಆದ್ದರಿಂದ ಸಂಸ್ಥೆಗೆ ಮಾರ್ಕೊಪೋಲೊ ಬಸ್ ಅಗತ್ಯ ಇದೆ ಎಂಬುದನ್ನು ಖಾತ್ರಿ ಮಾಡಿಕೊಂಡು ಖರೀದಿ ಮಾಡಲಾಗಿದೆಯೇ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಕೊಪೋಲೊ ಬಸ್ಸುಗಳನ್ನು ಗುಜರಿಗೆ ಹಾಕಲು ನಿರ್ಧಾರ ಕೈಗೊಳ್ಳಲಾಗಿತ್ತು. ಬೆಂಗಳೂರು ಮತ್ತು ಮೈಸೂರು ನಗರ ಸೇರಿ ಒಟ್ಟು 142 ಮಾರ್ಕೊಪೋಲೊ ಬಸ್ಸುಗಳಿವೆ.












Click it and Unblock the Notifications