ತಿಪಟೂರು ನಿಲ್ದಾಣದಲ್ಲಿ ಕಾಮಗಾರಿ: ಬೆಂಗಳೂರಿನಿಂದ ಹೊರಡುವ ಹುಬ್ಬಳ್ಳಿ, ಬೆಳಗಾವಿ ಸೇರಿ ಹಲವು ರೈಲುಗಳ ಸಂಚಾರ ವ್ಯತ್ಯಯ
ಬೆಂಗಳೂರು: ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳನ್ನ ಮಾಡುತ್ತಿದೆ. ಇದೀಗ ನೈರುತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ತಿಪಟೂರು ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ಹಾಗಾಗಿ, ಸುರಕ್ಷತೆ ಹಾಗೂ ತಾಂತ್ರಿಕ ಕಾರಣಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಚಾರವನ್ನ ಮಾರ್ಗಮಧ್ಯೆ ನಿಯಂತ್ರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದೇ ಜುಲೈ 27ರಿಂದ ಆರಂಭಗೊಂಡು ಆಗಸ್ಟ್ 20ರವರೆಗೆ ಈ ರೈಲು ಸಂಚಾರ ವ್ಯತ್ಯಯ ಮುಂದುವರಿಯುತ್ತದೆ. ವಿಶೇಷವಾಗಿ ಬೆಂಗಳೂರು, ಯಶವಂತಪುರದಿಂದ ಉತ್ತರ ಕರ್ನಾಟಕಕ್ಕೆ ಹೋಗುವ ಪ್ರಯಾಣಿಕರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನ ಮೊದಲೇ ಯೋಜಿಸಿಕೊಳ್ಳುವುದು ಒಳ್ಳೆಯದು. ಕಾಮಗಾರಿ ನಡೆಯುವ ಅವಧಿಯಲ್ಲಿ ಯಾವೆಲ್ಲಾ ರೈಲುಗಳು ಎಷ್ಟು ನಿಮಿಷಗಳ ಕಾಲ ವಿಳಂಬವಾಗಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತಿಪಟೂರು ರೈಲು ನಿಲ್ದಾಣ ಕಾಮಗಾರಿ: ದೈನಂದಿನ ರೈಲುಗಳ ಮೇಲೆ ಪರಿಣಾಮ
ಪ್ರತಿದಿನ ಸಂಚರಿಸುವ ಹಲವು ರೈಲುಗಳು ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಲಿವೆ. ಪ್ರಮುಖವಾಗಿ:
ಕೆಎಸ್‌ಆರ್ ಬೆಂಗಳೂರು - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (20688): ಜುಲೈ 27 ರಿಂದ ಆಗಸ್ಟ್ 20ರವರೆಗೆ ಈ ರೈಲನ್ನು ಮಾರ್ಗಮಧ್ಯೆ ಸುಮಾರು 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಯಶವಂತಪುರ - ಸಿಂಧನೂರು ಡೈಲಿ ಎಕ್ಸ್‌ಪ್ರೆಸ್ (16545): ಇದೇ ಅವಧಿಯಲ್ಲಿ (ಜುಲೈ 27 - ಆಗಸ್ಟ್ 20) ಸಂಚರಿಸುವ ಈ ರೈಲು ಬರೋಬ್ಬರಿ 90 ನಿಮಿಷಗಳ ಕಾಲ ಮಾರ್ಗಮಧ್ಯೆ ತಡೆಹಿಡಿಯಲ್ಪಡಲಿದ್ದು, ಪ್ರಯಾಣಿಕರು ಈ ವಿಳಂಬವನ್ನ ಎದುರಿಸಬೇಕಾಗುತ್ತದೆ.
ಕೆಎಸ್‌ಆರ್ ಬೆಂಗಳೂರು - ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ (20653): ಪ್ರತಿದಿನ ಬೆಳಗಾವಿಗೆ ತೆರಳುವ ಈ ರೈಲನ್ನು ಆಗಸ್ಟ್ 20ರವರೆಗೆ ಮಾರ್ಗಮಧ್ಯೆ 50 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
ಯಶವಂತಪುರ - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ (16547): ವಿಜಯಪುರ ಭಾಗದ ಜನರಿಗೆ ಆಸರೆಯಾಗಿರುವ ಈ ರೈಲು ಕೂಡ 45 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿದೆ.
ವಾರಾಂತ್ಯದ ರೈಲುಗಳ ಸಂಚಾರ ಬದಲಾವಣೆ
ದೈನಂದಿನ ರೈಲುಗಳಲ್ಲದೆ, ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಂಚರಿಸುವ ವಿಶೇಷ ರೈಲುಗಳ ವೇಳಾಪಟ್ಟಿಯಲ್ಲೂ ವ್ಯತ್ಯಯ ಉಂಟಾಗಲಿದೆ.
ಎಸ್‌ಎಂವಿಟಿ ಬೆಂಗಳೂರು - ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ (16553): ಈ ರೈಲು ಜುಲೈ 28, ಆಗಸ್ಟ್ 1, 4, 8, 11, 15, ಮತ್ತು 18 ರಂದು ಮಾರ್ಗಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಣದಲ್ಲಿರುತ್ತದೆ.
ಸಾಯಿನಗರ ಶಿರಡಿ - ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ (16218): ಜುಲೈ 29 ಹಾಗೂ ಆಗಸ್ಟ್ 5, 12, 19 ರಂದು ಸಂಚರಿಸುವ ಈ ರೈಲನ್ನ ಬರೋಬ್ಬರಿ 110 ನಿಮಿಷ ಅಂದರೆ ಸುಮಾರು ಎರಡು ಗಂಟೆಗಳ ಕಾಲ ತಡೆಹಿಡಿಯಲಾಗುತ್ತದೆ.
ಪುರಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (20679): ಜುಲೈ 31, ಹಾಗೂ ಆಗಸ್ಟ್ 7, 14 ರಂದು ಈ ರೈಲು 30 ನಿಮಿಷಗಳ ಕಾಲ ವಿಳಂಬವಾಗಲಿದೆ.
ಪುರಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (22698): ಆಗಸ್ಟ್ 2, 9, ಹಾಗೂ 16 ರಂದು ಈ ರೈಲು ಕೂಡ ಮಾರ್ಗಮಧ್ಯೆ 30 ನಿಮಿಷ ತಡವಾಗಿ ಸಾಗಲಿದೆ.
ಪ್ರಯಾಣಿಕರ ಸಹಕಾರಕ್ಕೆ ರೈಲ್ವೆ ಇಲಾಖೆ ಮನವಿ
ಭವಿಷ್ಯದಲ್ಲಿ ಸುಗಮ ಹಾಗೂ ವೇಗದ ರೈಲು ಸಂಚಾರಕ್ಕಾಗಿ ಈ ಮೂಲಸೌಕರ್ಯ ಕಾಮಗಾರಿ ತುಂಬ ಅಗತ್ಯ. ನಿಲ್ದಾಣದ ಆಧುನೀಕರಣ ಮತ್ತು ಹಳಿಗಳ ನವೀಕರಣ ಕಾರ್ಯದಿಂದಾಗಿ ತಾತ್ಕಾಲಿಕವಾಗಿ ಈ ರೈಲು ಸಂಚಾರ ವ್ಯತ್ಯಯ ಅನಿವಾರ್ಯವಾಗಿದೆ ಎಂದು ನೈರುತ್ಯ ರೈಲ್ವೆ ಸ್ಪಷ್ಟಪಡಿಸಿದೆ. ಈ ಅವಧಿಯಲ್ಲಿ ಪ್ರಯಾಣಿಸುವವರು ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ನ್ಯಾಷನಲ್ ಟ್ರೈನ್ ಎನ್‌ಕ್ವೈರಿ ಸಿಸ್ಟಮ್ ಅಥವಾ ಸಹಾಯವಾಣಿ ಸಂಖ್ಯೆ 139 ಮೂಲಕ ರೈಲುಗಳ ನಿಖರವಾದ ಸಮಯವನ್ನು ಖಚಿತಪಡಿಸಿಕೊಂಡು ಪ್ರಯಾಣ ಬೆಳೆಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


Click it and Unblock the Notifications
