India Today Exit Poll Results 2023 LIVE; ಯಾರಿಗೆ ಅಧಿಕಾರ?
ಬೆಂಗಳೂರು, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಸುಮಾರು ಶೇ 70ರಷ್ಟು ಮತದಾನವಾಗಿದ್ದು, ಚುನಾವಣಾ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ.
ಬುಧವಾರ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದೆ. ಮತದಾನ ಮುಗಿಯುತ್ತಿದ್ದಂತೆಯೇ ವಿವಿಧ ರಾಷ್ಟ್ರೀಯ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ.

ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113. ಚುನಾವಣೋತ್ತರ ಸಮೀಕ್ಷೆಯ ಅಂತಿಮ ಫಲಿತಾಂಶದ ಪ್ರಕಾರ ಕಾಂಗ್ರೆಸ್ 122-140, ಬಿಜೆಪಿ 62-80, ಜೆಡಿಎಸ್ 20-25, ಇತರರು 0-3 ಸ್ಥಾನಗಳಲ್ಲಿ ಜಯಗಳಿಸಲಿದೆ.
ವಲಯವಾರು ಎಷ್ಟು ಸ್ಥಾನ; India Today-Axis My India ನಡೆಸಿದ ಕರ್ನಾಟಕ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 41, ಬಿಜೆಪಿ 35, ಜೆಡಿಎಸ್ 17, ಇತರರು 7 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ಬಿಜೆಪಿ ಶೇ 35, ಕಾಂಗ್ರೆಸ್ ಶೇ 41, ಜೆಡಿಎಸ್ ಶೇ 17 ಮತ್ತು ಇತರರು ಶೇ 7ರಷ್ಟು ಮತಗಳನ್ನುಗಳಿಸಲಿದ್ದಾರೆ.
ಕರಾವಳಿ ಕರ್ನಾಟಕದ 19 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 3, ಬಿಜೆಪಿ 16 ಸ್ಥಾನಗಳಲ್ಲಿ ಜಯಗಳಿಸಲಿದೆ. ಆದರೆ ಜೆಡಿಎಸ್ ಮತ್ತು ಇತರರು ಯಾವುದೇ ಸ್ಥಾನದಲ್ಲಿ ಜಯಗಳಿಸುವುದಿಲ್ಲ. ಕಾಂಗ್ರೆಸ್ ಶೇ 40, ಬಿಜೆಪಿ ಶೇ 50, ಜೆಡಿಎಸ್ ಶೇ 6, ಇತರರು ಶೇ 4ರಷ್ಟು ಮತಗಳನ್ನು ಪಡೆಯಲಿದ್ದಾರೆ.

ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 17, ಬಿಜೆಪಿ 10, ಜೆಡಿಎಸ್ 1 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷ ಶೇ 44, ಬಿಜೆಪಿ ಶೇ 38, ಜೆಡಿಎಸ್ 15 ಮತ್ತು ಇತರರು ಶೇ 3ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ 40 ಕ್ಷೇತ್ರಗಳಿವೆ. ಸಮೀಕ್ಷೆಯ ವರದಿಯಂತೆ ಕಾಂಗ್ರೆಸ್ 32, ಬಿಜೆಪಿ 7 ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಜಯಗಳಿಸಲಿದೆ. ಮತಗಳಿಕೆ ಪ್ರಮಾಣ ನೋಡಿದಾಗ ಕಾಂಗ್ರೆಸ್ ಶೇ 47, ಬಿಜೆಪಿ ಶೇ 36, ಜೆಡಿಎಸ್ ಶೇ 13, ಇತರರು ಶೇ 4ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಮುಂಬೈ-ಕರ್ನಾಟಕ ಭಾಗದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ 28, ಬಿಜೆಪಿ 21, ಜೆಡಿಎಸ್ 1 ಕ್ಷೇತ್ರದಲ್ಲಿ ಜಯಗಳಿಸಲಿದ್ದಾರೆ. ಇತರರು ಯಾವುದೇ ಸ್ಥಾನ ಗೆಲ್ಲುವುದಿಲ್ಲ. ಬಿಜೆಪಿ ಶೇ 42, ಕಾಂಗ್ರೆಸ್ ಶೇ 45, ಜೆಡಿಎಸ್ ಶೇ 8 ಮತ್ತು ಇತರರು ಶೇ 5ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ 36, ಜೆಡಿಎಸ್ 18, ಬಿಜೆಪಿ 6 ಮತ್ತು ಇತರರು 3 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಶೇ 40, ಬಿಜೆಪಿ ಶೇ 25, ಜೆಡಿಎಸ್ ಶೇ 28 ಮತ್ತು ಇತರರು ಶೇ 7ರಷ್ಟು ಮತಗಳನ್ನು ಪಡೆಯಲಿದ್ದಾರೆ.












Click it and Unblock the Notifications