ಪುಸ್ತಕ ಪ್ರೇಮಿಗಳಿಗೆ ಸಿಹಿಸುದ್ದಿ: ಆಗಸ್ಟ್ ತಿಂಗಳಿಡೀ ಕನ್ನಡ ಪುಸ್ತಕಗಳ ಖರೀದಿಯ ಮೇಲೆ ಶೇ. 50ರಷ್ಟು ಬಂಪರ್ ರಿಯಾಯಿತಿ
ರಾಜ್ಯದ ಪುಸ್ತಕ, ಸಾಹಿತ್ಯ ಪ್ರೇಮಿಗಳು ಹಾಗೂ ಓದುಗರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭರ್ಜರಿ ಸಿಹಿಸುದ್ದಿ ನೀಡಿದೆ. ಓದುವ ಹವ್ಯಾಸವನ್ನು ಮತ್ತಷ್ಟು ಪ್ರೋತ್ಸಾಹಿಸುವ ಹಾಗೂ ಶ್ರೇಷ್ಠ ಸಾಹಿತ್ಯ ಕೃತಿಗಳನ್ನ ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಇಲಾಖೆಯ ಅಧೀನದಲ್ಲಿರುವ ವಿವಿಧ ಪ್ರಾಧಿಕಾರಗಳು ಹಾಗೂ ಅಕಾಡೆಮಿಗಳು ಪ್ರಕಟಿಸಿರುವ ಎಲ್ಲಾ ಪುಸ್ತಕಗಳ ಮೇಲೆ ಆಗಸ್ಟ್ ತಿಂಗಳಿಡೀ ಶೇಕಡಾ 50ರಷ್ಟು ವಿಶೇಷ ರಿಯಾಯಿತಿಯನ್ನ ಘೋಷಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಪ್ರಯುಕ್ತ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳು ಈ ವಿಶೇಷ ರಿಯಾಯಿತಿ ಮಾರಾಟ ಮೇಳಕ್ಕೆ ಚಾಲನೆ ನೀಡಿವೆ. ಕೇವಲ ಮಳಿಗೆಗಳಲ್ಲಿ ಮಾತ್ರವಲ್ಲದೆ, ರಾಜ್ಯ ಹಾಗೂ ಹೊರರಾಜ್ಯದ ಓದುಗರಿಗೆ ಅನುಕೂಲವಾಗುವಂತೆ ಆನ್‌ಲೈನ್‌ನಲ್ಲಿ ಖರೀದಿಸುವವರಿಗೂ ಶೇಕಡಾ. 50ರಷ್ಟು ರಿಯಾಯಿತಿ ದರದಲ್ಲಿ ಕೃತಿಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶೇ. 50ರಷ್ಟು ರಿಯಾಯಿತಿ
ಕನ್ನಡ ಸಾಹಿತ್ಯ ಲೋಕದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಕನ್ನಡ ಪುಸ್ತಕ ಪ್ರಾಧಿಕಾರವು ಇದುವರೆಗೆ ಪ್ರಕಟಿಸಿರುವ 769 ಮೌಲಿಕ ಶೀರ್ಷಿಕೆಗಳ ಕೃತಿಗಳು ಈ ಯೋಜನೆಯಡಿ ರಿಯಾಯಿತಿ ದರದಲ್ಲಿ ಲಭ್ಯವಿವೆ. ಬೆಂಗಳೂರಿನ ಕನ್ನಡ ಭವನದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳು ಹಾಗೂ ಪ್ರಾಧಿಕಾರದ ಅಧಿಕೃತ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಓದುಗರು ಈ ಸೌಲಭ್ಯವನ್ನು ಪಡೆಯಬಹುದು.
ಜೊತೆಗೆ, ಮನೆಯಲ್ಲೇ ಕುಳಿತು ಪ್ರಾಧಿಕಾರದ ಅಧಿಕೃತ ಜಾಲತಾಣವಾದ kpp.karnataka.gov.in ಮೂಲಕವೂ ಪುಸ್ತಕಗಳನ್ನು ಆರ್ಡರ್ ಮಾಡಬಹುದಾಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.
ಇನ್ನೂ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಓದುಗರ ಅನುಕೂಲಕ್ಕಾಗಿ ವಿಶೇಷ ಕೊರಿಯರ್ ಸೌಲಭ್ಯವನ್ನೂ ಪರಿಚಯಿಸಿದೆ. ನೇರವಾಗಿ ಕಚೇರಿಗೆ ಅಥವಾ ಮಳಿಗೆಗೆ ಭೇಟಿ ನೀಡಲು ಸಾಧ್ಯವಾಗದ ಪುಸ್ತಕ ಪ್ರೇಮಿಗಳು ತಮಗೆ ಬೇಕಾದ ಪುಸ್ತಕಗಳ ಪಟ್ಟಿಯನ್ನು ಇ-ಮೇಲ್ ಮೂಲಕ ಕಳುಹಿಸಿದರೆ, ನಿಗದಿತ ಕೊರಿಯರ್ ವೆಚ್ಚದ ಮಾಹಿತಿಯನ್ನ ಮುಂಚಿತವಾಗಿ ತಿಳಿಸಿ, ಪುಸ್ತಕಗಳನ್ನ ಮನೆಬಾಗಿಲಿಗೆ ಕಳುಹಿಸಿಕೊಡುತ್ತಾರೆ.
ಆಸಕ್ತರು ಅಕಾಡೆಮಿಯ sahithyaacademy.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ [email protected] ವಿಳಾಸಕ್ಕೆ ಇ-ಮೇಲ್ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 080-22211730 ಅನ್ನು ಸಂಪರ್ಕಿಸಬಹುದು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ದೇಶ-ವಿದೇಶಗಳ ಶ್ರೇಷ್ಠ ಕೃತಿಗಳನ್ನ ಕನ್ನಡಕ್ಕೆ ಅನುವಾದಿಸುವ ಹಾಗೂ ಭಾಷಾಭ್ಯಾಸಕ್ಕೆ ಒತ್ತು ನೀಡುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳ ಮೇಲೂ ಶೇ. 50ರಷ್ಟು ರಿಯಾಯಿತಿ ಅನ್ವಯವಾಗುತ್ತದೆ. ಓದುಗರು ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮ ಕಚೇರಿಗೆ ಭೇಟಿ ನೀಡಿ ಪುಸ್ತಕಗಳನ್ನ ಖರೀದಿಸಬಹುದು. ಜೊತೆಗೆ, ಪ್ರಾಧಿಕಾರದ ಅಧಿಕೃತ ಜಾಲತಾಣವಾದ www.kuvempubhashabharathi.karnataka.gov.in ಮೂಲಕವೂ ಆನ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಆರ್ಡರ್ ಮಾಡಲು ಅವಕಾಶವಿದೆ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ದತ್ತಪ್ಪ ಸಾಗನೂರ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 1 ರಿಂದ 31ರವರೆಗೆ ಪೂರ್ತಿ ತಿಂಗಳು ಈ ರಿಯಾಯಿತಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು, ಸಂಶೋಧಕರು, ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಹಾಗೂ ಸಾಹಿತ್ಯ ಆಸಕ್ತರು ಈ ಸುವರ್ಣಾವಕಾಶವನ್ನು ಸರಿಯಾಗಿ ಬಳಸಿಕೊಂಡು ನಿಮಗೆ ಇಷ್ಟ ಆಗಿರುವ ಪುಸ್ತಕಗಳನ್ನಾ ತುಂಬ ರಿಯಾಯಿತಿ ದರದಲ್ಲಿ ಸಿಗುತ್ತಿರುವ ಕಾರಣ, ಹೊಸ ಪುಸ್ತಕಗಳನ್ನಾ ಖರೀದಿ ಮಾಡಿಕೊಳ್ಳಿ ಎಂದು ಇಲಾಖೆ ಮನವಿ ಮಾಡಿದೆ.


Click it and Unblock the Notifications
