Get Updates
Get notified of breaking news, exclusive insights, and must-see stories!

ಗೃಹಲಕ್ಷ್ಮಿ ಯೋಜನೆ; ಸರ್ಕಾರದ ಮತ್ತೊಂದು ಆದೇಶ

ಬೆಂಗಳೂರು, ಜೂನ್ 14; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ 5 ಗ್ಯಾರಂಟಿಗಳಲ್ಲಿ 'ಗೃಹಲಕ್ಷ್ಮಿ' ಸಹ ಒಂದು. ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ. ನೀಡುವ ಯೋಜನೆ ಇದಾಗಿದೆ. ಯೋಜನೆ ಜಾರಿ ಕುರಿತು ಸರ್ಕಾರ ಆದೇಶವೊಂದನ್ನು ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಿರ್ಮಲಾ ಎಸ್. ಖಟಾವ್‌ಕರ್, ಸರ್ಕಾರದ ಅಧೀನ ಕಾರ್ಯದರ್ಶಿ-1, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಈ ಆದೇಶವನ್ನು ಹೊರಡಿಸಿದ್ದಾರೆ.

Implementation Of Gruhalakshmi Scheme Government Order

2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000ಗಳನ್ನು ನೀಡುವ 'ಗೃಹಲಕ್ಷ್ಮಿ' ಯೋಜನೆಗೆ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಮಂಜೂರಾತಿ ಪ್ರಾಧಿಕಾರಿಯನ್ನಾಗಿ (Sanctioning officer) ಪರಿಗಣಿಸುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.

ಸರ್ಕಾರದ ಆದೇಶ; ಈಗಾಗಲೇ ಕರ್ನಾಟಕ ಸರ್ಕಾರ ದಿನಾಂಕ 20/5/2023ರ ಆದೇಶದಲ್ಲಿ ದಿನಾಂಕ 20/5/2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೀಡಿದ ತಾತ್ವಿಕ ಅನುಮೋದನೆ ಮೇರೆಗೆ, ಕರ್ನಾಟಕ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000ಗಳನ್ನು ನೀಡುವ 'ಗೃಹಲಕ್ಷ್ಮಿ' ಯೋಜನೆಯನ್ನು ಜಾರಿಗೆ ತರಲು ಅನುಮೋದನೆ ನೀಡಿ ಆದೇಶಿಸಲಾಗಿದೆ.

ಈ ಯೋಜನೆಯ ವಿವರವಾದ ರೂಪುರೇಷೆ ಹಾಗೂ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ. ಸರ್ಕಾರದ ಆದೇಶ ದಿನಾಂಕ 12/06/2023 ಉಲ್ಲೇಖಿಸಿ 'ಗೃಹ ಲಕ್ಷ್ಮಿ' ಯೋಜನೆಯ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲು ಸಂಬಂಧಿಸಿದ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಮಂಜೂರಾತಿ ಪ್ರಾಧಿಕಾರವೆಂದು ಪರಿಗಣಿಸಿ ಆದೇಶ ಹೊರಡಿಸಲಾಗಿದೆ.

ಮಾರ್ಗಸೂಚಿಗಳು; ಸರ್ಕಾರದ ಆದೇಶದಂತೆ ಯೋಜನೆಗೆ ಜೂನ್ 15ರಿಂದ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಯೋಜನೆಯ ಮಾರ್ಗಸೂಚಿಗಳು ಹೀಗಿವೆ.

* ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿ.

* ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದಲ್ಲಿ, ಒಂದು ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸತಕ್ಕದ್ದು.

* ಈ ಯೋಜನೆಯ ಫಲಾನುಭವಿಗಳು 2023ರ ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸುವುದು. ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15ರಂದು ಅವರ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದು.

* ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕವಾಗಲೀ ಅಥವಾ ಭೌತಿಕವಾಗಿಯಾಗಲೀ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸತಕ್ಕದ್ದು.

* ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡುವುದು. ಅರ್ಜಿಯಲ್ಲಿನ ಅಂಶಗಳ ಬಗ್ಗೆ, ತದನಂತರ ಪರಿಶೀಲನ ಮಾಡುವುದು, ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡುವುದು ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು.

* ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್‌ ಖಾತೆ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಣೆ ಮಾಡುವುದು.

ಯೋಜನೆಗೆ ಯಾರು ಅರ್ಹರಲ್ಲ; ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯೋಜನೆಗೆ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಗ್ರಾಮ ಒನ್ ಕೇಂದ್ರ/ ಬೆಂಗಳೂರು ಒನ್ ಕೇಂದ್ರ/ ಮೊಬೈಲ್ ಆಥವಾ ಸೈಬರ್ ಕೆಫೆಗಳ ಮೂಲಕ ಸಲ್ಲಿಕೆ ಮಾಡಬಹುದು. ಭೌತಿಕ ಅರ್ಜಿಗಳನ್ನು ಸಲ್ಲಿಸಬಯಸುವವರು ನಾಡ ಕಛೇರಿ ಮೂಲಕ ಸಲ್ಲಿಸಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+