ರಾಜ್ಯದಲ್ಲಿ ಇನ್ನೂ 2 ದಿನ ಮಳೆ ಮುನ್ಸೂಚನೆ; ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು, ನವೆಂಬರ್ 20: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹವಾಮಾನ ವೈಪರಿತ್ಯ ಹಿನ್ನೆಲೆ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇನ್ನು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಬೆಂಗಳೂರು ನಗರದಲ್ಲಿ ಜಿಟಿಜಿಟಿ ಮಳೆಯಾಗಲಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಳೆ ಸುರಿಯಲಿದೆ. ಕೆಲವು ಕಡೆ ಗುಡುಗು- ಸಿಡಿಲು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ 25 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಕೊಂಚ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗುವ ಸಾಧ್ಯತೆಗಳಿವೆ. ಇತ್ತ ರಾಜ್ಯದ ಬಹುತೇಕ ನದಿಗಳು, ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದು, ನೀರು ಹರಿಯುತ್ತಿದೆ. ಇತ್ತ ನಿರಂತರ ಮಳೆ ಹಿನ್ನೆಲೆ ಕೃಷಿ ಭೂಮಿಯಲ್ಲಿ ನೀರು ಶೇಖರಣೆಯಾಗುತ್ತಿರುವ ಕಾರಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಬೆಳೆದ ಬೆಳೆಗಳು ನೀರು ಪಾಲಾಗಿವೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಮುಂಜಾಗ್ರತ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ 13 ಜಿಲ್ಲೆಗಳಿಗೆ ಅಲರ್ಟ್ ಸಂದೇಶ ರವಾನಿಸಲಾಗಿದ್ದು, ಎಚ್ಚರಿಕೆಯ ವಹಿಸುವಂತೆ ಸೂಚನೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಸಂದೇಶ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ ಮತ್ತು ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಲರ್ಟ್ ನೀಡಲಾಗಿದ್ದು, ಮುಂಜಾಗ್ರತ ಕ್ರಮಗಳೊಂದಿಗೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ.

ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡು ಜಿಲ್ಲೆಗಳಲ್ಲಿ ಹಿಂಗಾರು ಅಬ್ಬರ ಮುಂದುವರಿಯಲಿದೆ. ಶನಿವಾರದವರೆಗೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇತ್ತ ನಿರಂತರ ಮಳೆಯಿಂದಾಗಿ ರಾಜ್ಯದ ಜಲಾಶಯಗಳು ಭರ್ತಿಯಾಗುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನ ಮೀನುಗಾರಿಕೆ ನಿಷೇಧಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಇಂದೂ ಸಹ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ
ರಾಜ್ಯದಲ್ಲಿ ಇನ್ನು 2-3 ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡಬೇಕು. ಎಲ್ಲಾ ಅಧಿಕಾರಿಗಳು ಜಿಲ್ಲೆ ಮತ್ತು ತಾಲೂಕಿನಲ್ಲಿ ಅಲರ್ಟ್ ಆಗಿರಬೇಕು. ಪರಿಹಾರ ಕಾರ್ಯಕ್ಕೆ ಸರ್ಕಾರ ಎಲ್ಲಾ ಸಹಕಾರ ನೀಡಲಿದೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ. ಕಾಳಜಿ ಕೇಂದ್ರಗಳಿಗೆ ನಿರಾಶ್ರಿತರನ್ನು ಆರೈಕೆ ಮಾಡಿ. ಯಾವುದೇ ಸಮಸ್ಯೆ ಆಗದಂತೆ ಜಿಲ್ಲೆಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಿ ಶುಕ್ರವಾರ ಜಿಲ್ಲಾಧಿಕಾರಿಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಬೆಂಗಳೂರು ನಗರ ಪ್ರದೇಶ ಹೈರಾಣು ಆಗಿದ್ದು, ಮಳೆಯಲ್ಲಿಯೇ ಕೆಲಸಗಳಿಗೆ ತೆರಳುವಂತಾಗಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಗೆ ಪದೇಪದೇ ನೀರು ನುಗ್ಗುತ್ತಿರುವುದರಿಂದ ನಿವಾಸಿಗಳು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಅನುಗ್ರಹ ಲೇಔಟ್, ಬಿಳೆಕಳ್ಳಿಯ ಕೆವಿಆರ್ ಪ್ರಿಕ್ಸ್ ಅಪಾರ್ಟ್‌ಮೆಂಟ್, ಕೂಡ್ಲುವಿನ ಸೋಮೇಶ್ವರ ದೇವಸ್ಥಾನದ ಪಕ್ಕದ ಏರಿಯಾ, ಕೋಟೆಬೀರೇಶನಹಳ್ಳಿಯ ಲೇಕ್ ವ್ಯೂ ಸಿಟಿ ಅಪಾರ್ಟ್‌ಮೆಂಟ್, ಶ್ರೀದೇವಿನಗರದ ಜನಾರ್ದನ ಬೇಕರಿ ರಸ್ತೆ, ಎಚ್ಎಸ್ಆರ್ ಲೇಔಟ್‌ನ ಆರನೇ ಸ್ಟ್ರೀಟ್ 10ನೇ ಕ್ರಾಸ್‌ನಲ್ಲಿ ಮಳೆ ನೀರು ನುಗ್ಗಿದೆ.