ಚುನಾವಣೆಗಳಲ್ಲಿ ಎಐ ಪ್ರಭಾವ: ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆಯ ಘಂಟೆಯೇ?
ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ.
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ) ಎನ್ನುವುದು ಇಂದು ಕೇವಲ ವೈಜ್ಞಾನಿಕ ಕಥೆಗಳ ಚಲನಚಿತ್ರಗಳ ಭಾಗವಷ್ಟೇ ಅಲ್ಲ. ಎಐ ಇಂದು ನಿಧಾನವಾಗಿ ನಮ್ಮ ದೈನಂದಿನ ಜೀವನದ ಬಳಕೆಗೆ ಪ್ರವೇಶಿಸುತ್ತಿದ್ದು, ಚುನಾವಣೆಗಳಲ್ಲೂ ಸಾಕಷ್ಟು ದೊಡ್ಡ ಪಾತ್ರ ನಿರ್ವಹಿಸುತ್ತಿದೆ. ಎಐ ಹೆಚ್ಚು ಶಕ್ತಿಶಾಲಿಯಾಗಿ ಬೆಳೆಯುತ್ತಿದ್ದು, ಸರಳವಾದ ಜನರೇಟಿವ್ ಎಐ ಎನ್ನುವ ಹಂತದಿಂದ ಹೆಚ್ಚು ಶಕ್ತಿಶಾಲಿಯಾದ, ಎಜಿಐ ಅಥವಾ ಆರ್ಟಿಫಿಶಿಯಲ್ ಜನರಲ್ ಇಂಟಲಿಜೆನ್ಸ್ ಎನ್ನುವ ಹಂತದತ್ತ ಬೆಳವಣಿಗೆಯಾಗುತ್ತಿದೆ. ಎಜಿಐ ಎನ್ನುವುದು ಭವಿಷ್ಯದ ಎಐ ಆಗಿದ್ದು, ಅದು ಬಹುಶಃ ಮುಂದೆ ಒಂದು ದಿನ ಕೇವಲ ತನಗೆ ನೀಡಿರುವ ಕೆಲಸಗಳನ್ನು ಮಾತ್ರವೇ ಮಾಡುವುದಕ್ಕೆ ಸೀಮಿತವಾಗದೇ, ಸ್ವತಃ ಮನಷ್ಯನಂತೆ ತಾನೇ ಆಲೋಚಿಸಿ, ಕಲಿತು, ಕಾರಣಗಳನ್ನು ಶೋಧಿಸಿ, ಸಮಸ್ಯೆಗಳನ್ನು ಪರಿಹರಿಸಬಹುದು. ಇನ್ನು ಭಾರತದ ಚುನಾವಣೆಗಳಂತಹ ಬೃಹತ್ ಚುನಾವಣೆಗಳಲ್ಲಿ, ಜನರು ಮತ ಚಲಾಯಿಸುವ ವಿಧಾನವನ್ನು ರೂಪಿಸುವಲ್ಲಿ ಮತ್ತು ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಕೈಗೊಳ್ಳುವಲ್ಲಿ ಈ ತಂತ್ರಜ್ಞಾನ ಎಂತಹ ಪಾತ್ರವನ್ನು ನಿರ್ವಹಿಸಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಧನಾತ್ಮಕ ಅಂಶ: ಎಐ ಚುನಾವಣೆಗಳಲ್ಲಿ ಹೇಗೆ ನೆರವಾಗುತ್ತದೆ?
ಸರಿಯಾದ ರೀತಿಯಲ್ಲಿ ಬಳಸಿದರೆ, ಎಐ ಚುನಾವಣೆಗಳನ್ನು ಇನ್ನಷ್ಟು ಸ್ಮಾರ್ಟ್ ಮತ್ತು ಸಂಘಟಿತವಾಗಿಸಲು ನೆರವಾಗಬಲ್ಲದು. ರಾಜಕೀಯ ಪಕ್ಷಗಳು, ಸಾಮಾಜಿಕ ಜಾಲತಾಣ ಪ್ರಚಾರ, ಮತ್ತು ಹಿಂದಿನ ಮತದಾನದ ವರ್ತನೆಗಳಂತಹ ಅಪಾರ ಪ್ರಮಾಣದ ಮಾಹಿತಿಗಳನ್ನು ಅಧ್ಯಯನ ಮಾಡಲು ಎಐಯನ್ನು ಬಳಸಬಹುದು. ಇದನ್ನು ಬಳಸುವುದರಿಂದ, ರಾಜಕೀಯ ಪಕ್ಷಗಳು ಸೂಕ್ತವಾದ ಸಂದೇಶಗಳನ್ನು ಸಿದ್ಧಪಡಿಸಿ, ಬಹಳಷ್ಟು ಸುಲಭವಾಗಿ ಸೂಕ್ತವಾದ ಗುಂಪುಗಳಿಗೆ ಕಳುಹಿಸಬಹುದು. ಅಭಿಪ್ರಾಯ ಸಂಗ್ರಹಗಳು, ಆರ್ಥಿಕ ಪರಿಸ್ಥಿತಿಗಳು, ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನರು ಏನು ಸಮಾಲೋಚಿಸುತ್ತಿದ್ದಾರೆ ಎನ್ನುವ ಅಂಶಗಳನ್ನು ಗಮನಿಸುವ ಮೂಲಕ, ಎಐ ಚುನಾವಣಾ ಫಲಿತಾಂಶಗಳನ್ನು ಊಹಿಸಬಲ್ಲದು. ಉದಾಹರಣೆಗೆ, ಸಮೀಕ್ಷೆಗಳು ಯಾವುದೋ ಒಂದು ಪಕ್ಷಕ್ಕೆ ಹೆಚ್ಚಿನ ಜನ ಬೆಂಬಲ ಲಭಿಸುತ್ತಿದೆ ಎಂದು ತೋರಿಸಿದರೆ, ನಿರುದ್ಯೋಗ ಹೆಚ್ಚುತ್ತಿದೆ ಎಂದರೆ ಅಥವಾ ಆನ್‌ಲೈನ್‌ನಲ್ಲಿ ಯಾರೋ ಓರ್ವ ನಾಯಕನ ಕುರಿತು ಧನಾತ್ಮಕ ಮಾತುಗಳು ಹೆಚ್ಚಾಗುತ್ತಿವೆ ಎಂದರೆ, ಯಾವ ಪಕ್ಷ ಚುನಾವಣೆಯನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂಬುದನ್ನೂ ಎಐ ಊಹಿಸಬಲ್ಲದು. ಇದು ರಾಜಕೀಯ ಪಕ್ಷಗಳಿಗೆ ತಮ್ಮ ಹಣ, ಸಮಯ ಮತ್ತು ಕಾರ್ಯಕರ್ತರನ್ನು ಹೆಚ್ಚಿನ ಸ್ಪರ್ಧೆ ಇರುವ ಸ್ಥಳಗಳಲ್ಲಿ ಹೆಚ್ಚು ಬುದ್ಧಿವಂತಿಕೆಯಿಂದ ಬಳಸಲು ನೆರವಾಗುತ್ತದೆ.

ಎಐ ಚಾಟ್‌ಬಾಟ್‌ಗಳು ಮತ್ತು ಎಐ ಅಸಿಸ್ಟೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಮತದಾರರೊಡನೆ ಸಮಾಲೋಚನೆ ನಡೆಸಿ, ಅವರ ಎಲ್ಲ ಗೊಂದಲಗಳಿಗೂ ಉತ್ತರಿಸಿ, ಅಭ್ಯರ್ಥಿಗಳು ಮತ್ತು ಪಕ್ಷದ ನೀತಿಗಳ ಕುರಿತ ಮಾಹಿತಿ ಒದಗಿಸಿ, ಎಲ್ಲ ಜನರನ್ನೂ ಮತ ಚಲಾಯಿಸುವಂತೆ ಪ್ರೇರೇಪಿಸಬಲ್ಲವು. ಇದು ಸಂವಹನವನ್ನು ಉತ್ತಮಪಡಿಸಿ, ಒಟ್ಟಾರೆ ಚುನಾವಣಾ ಪ್ರಕ್ರಿಯೆಯ ಕುರಿತು ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಎಐ ಮತದಾರರ ದಮನಿಸುವಿಕೆ, ಮತ ಯಂತ್ರಗಳ ದೋಷ, ಅಥವಾ ಸುಳ್ಳು ಸುದ್ದಿಗಳ ಹಬ್ಬಿಸುವಿಕೆಗಳನ್ನು ಗಮನಿಸಿ, ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ. ವಿಚಿತ್ರ ಎನಿಸುವ ವಿಧಾನಗಳನ್ನು ಮತ್ತು ಅನುಮಾಸ್ಪದ ಚಟುವಟಿಕೆಗಳನ್ನು ಗಮನಿಸುವ ಮೂಲಕ, ಎಐ ಮತದಾನವನ್ನು ಹೆಚ್ಚು ನ್ಯಾಯಪರ ಮತ್ತು ಹೆಚ್ಚು ನಂಬಿಕಾರ್ಹವಾಗಿಸುತ್ತದೆ.
ಚುನಾವಣಾ ಆಯೋಗಗಳೂ ಎಐಯನ್ನು ಸಮರ್ಪಕವಾಗಿ ಬಳಸಿಕೊಂಡು, ಚುನಾವಣಾ ಜಾಹೀರಾತುಗಳನ್ನು ಗಮನಿಸಿ, ಎಲ್ಲ ನಿಯಮಗಳು ಸಮರ್ಪಕವಾಗಿ ಅನುಸರಿಸಲ್ಪಡುತ್ತಿವೆಯೇ, ಚುನಾವಣಾ ವೆಚ್ಚದಲ್ಲಿ ವ್ಯತ್ಯಯಗಳಾಗುತ್ತಿವೆಯೇ ಎಂದು ಪತ್ತೆ ಹಚ್ಚಲು ಸಾಧ್ಯವಿದೆ. 2021ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆ ಇದಕ್ಕೊಂದು ಸೂಕ್ತ ಉದಾಹರಣೆಯಾಗಿದ್ದು, ಬಿಹಾರ ಚುನಾವಣಾ ಆಯೋಗ ಸ್ಟಾಕು ಎನ್ನುವ ಎಐ ಸಂಸ್ಥೆಯೊಡನೆ ಕೈ ಜೋಡಿಸಿತ್ತು. ಇದು ವೀಡಿಯೋ ವಿಶ್ಲೇಷಣೆ ಮತ್ತು ಒಸಿಆರ್ ತಂತ್ರಜ್ಞಾನಗಳನ್ನು ಬಳಸಿಕೊಂಡು, ಚಿತ್ರಗಳು ಮತ್ತು ವೀಡಿಯೋಗಳಲ್ಲಿನ ಬರೆಹಗಳನ್ನು ಓದಲು ನೆರವಾಯಿತು. ಇದನ್ನು ಬಳಸಿಕೊಂಡು, ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಮತದಾನ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಧ್ಯಯನ ಮಾಡಲಾಯಿತು. ಈ ಬದಲಾವಣೆಗಳು ಚುನಾವಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತಂದು, ಮತ ಎಣಿಕೆಯಲ್ಲಿ ವಂಚನೆಗಳಾಗುವ ಸಾಧ್ಯತೆಗಳನ್ನು ಸಾಕಷ್ಟು ಕಡಿಮೆಗೊಳಿಸಿದವು.
ಅಪಾಯಕಾರಿ ಆಯಾಮ: ಎಐಯಿಂದ ಆಗಬಹುದಾದ ತೊಂದರೆಗಳು
ದುಃಖದ ವಿಚಾರವೆಂದರೆ, ಇಷ್ಟೊಂದು ಪ್ರಯೋಜನಕಾರಿಯಾದ ತಂತ್ರಜ್ಞಾನವೂ ದುರ್ಬಳಕೆಯಾಗುವ ಸಾಧ್ಯತೆಗಳಿವೆ. ಅತ್ಯಂತ ಹೆಚ್ಚಿನ ಆತಂಕವೆಂದರೆ, ತಪ್ಪು ಮಾಹಿತಿಗಳ ಹರಡುವಿಕೆ. ಎಐ ಡೀಪ್‌ಫೇಕ್‌ಗಳನ್ನು ನಿರ್ಮಿಸಬಲ್ಲದು. ಅಂದರೆ, ಸಂಪೂರ್ಣ ನೈಜ ಎನ್ನುವಂತೆಯೇ ಕಾಣಬಹುದಾದ ನಕಲಿ ವೀಡಿಯೋಗಳು, ಚಿತ್ರಗಳು ಅಥವಾ ಧ್ವನಿಗಳನ್ನು ಡೀಪ್‌ಫೇಕ್ ಎನ್ನಲಾಗುತ್ತದೆ. ಓರ್ವ ಜನಪ್ರಿಯ ನಾಯಕನ ಚಾರಿತ್ರ್ಯ ಹರಣ ಮಾಡುವ ಸಲುವಾಗಿ, ಆತ ಆಡಿಯೇ ಇಲ್ಲದ ಮಾತುಗಳನ್ನು ಆಡಿರುವಂತೆ, ನೈಜವೆನಿಸುವಂತೆ ಕಾಣುವ ಡೀಪ್‌ಫೇಕ್ ವೀಡಿಯೋಗಳನ್ನು ನಿರ್ಮಿಸಬಹುದು. ಇಂತಹ ಪ್ರಕ್ರಿಯೆಯನ್ನು ʼಡೀಪ್ ಫೇಕ್ ಇಲೆಕ್ಷನ್ಸ್ʼ ಎಂದು ಕರೆಯಲಾಗುತ್ತದೆ. ಇಲ್ಲಿ ಮತದಾರರ ಹಾದಿ ತಪ್ಪಿಸುವ ಸಲುವಾಗಿ ಬಹುತೇಕ ನೈಜ ಎನಿಸುವಂತಹ ನಕಲಿ ದೃಶ್ಯಾವಳಿಗಳನ್ನು, ಚಿತ್ರಗಳು ಅಥವಾ ಧ್ವನಿಗಳನ್ನು ಬಿಡುಗಡೆಗೊಳಿಸಿ, ಮತದಾರರಲ್ಲಿ ಯಾವುದು ನಿಜ ಮತ್ತು ಯಾವುದು ಸುಳ್ಳು ಎನ್ನುವ ಗೊಂದಲ ಮೂಡಿಸಲಾಗುತ್ತದೆ. ಇಂತಹ ತಂತ್ರಗಳನ್ನು ಬಳಸುವುದರಿಂದ, ಒಟ್ಟಾರೆ ಚುನಾವಣಾ ವ್ಯವಸ್ಥೆಯ ಕುರಿತು ಜನರ ನಂಬಿಕೆಯೇ ಕುಸಿಯುವಂತೆ ಮಾಡಲಾಗುತ್ತದೆ.
ಹಿಂದೆ ಕೇಂಬ್ರಿಜ್ ಅನಾಲಿಟಿಕಾದ ಹಗರಣ ಇದಕ್ಕೊಂದು ಅತ್ಯುತ್ತಮ ಎಚ್ಚರಿಕೆ. ಈ ಪ್ರಕರಣದಲ್ಲಿ, ಒಂದು ರಾಜಕೀಯ ಸಲಹಾ ಸಂಸ್ಥೆ ಮೂಲ ಅನುಮತಿಯೇ ಇಲ್ಲದೆ ಲಕ್ಷಾಂತರ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿತು. ಬಳಿಕ, ಈ ವೈಯಕ್ತಿಕ ಮಾಹಿತಿಗಳನ್ನು ಬಳಸಿಕೊಂಡು, ಮತದಾರರ ಅಭಿಪ್ರಾಯಗಳನ್ನು ಬದಲಾಯಿಸುವ ರೀತಿಯಲ್ಲಿ ಸಿದ್ಧಪಡಿಸಲಾದ ರಾಜಕೀಯ ಸಂದೇಶಗಳನ್ನು ಹಂಚಿಕೊಳ್ಳಲಾರಂಭಿಸಿತು. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕಿಂತಲೂ ಹೆಚ್ಚಾಗಿ ಬೆಳೆದ ತಂತ್ರಜ್ಞಾನದ ಶಕ್ತಿ, ಖಾಸಗಿತನ, ಮತ್ತು ಮಾಹಿತಿ ದುರ್ಬಳಕೆಯ ಕುರಿತು ಗಂಭೀರ ಆತಂಕಗಳು ಉಂಟಾಗುವಂತೆ ಮಾಡಿತು. ಆಧುನಿಕ ಎಐ ಇಂದು ಎಷ್ಟೋ ಪಟ್ಟು ಹೆಚ್ಚು ದೊಡ್ಡ ಪ್ರಮಾಣದಲ್ಲಿ ವೈಯಕ್ತಿಕಗೊಳಿಸಿದ ಪ್ರೊಪಗಾಂಡಾ ಸಂದೇಶಗಳನ್ನು ಹಂಚಿಕೊಳ್ಳುವ ಕುರಿತು ತಜ್ಞರು ಆತಂಕ ಹೊಂದಿದ್ದು, ಇದರ ಮುಂದೆ ಕೇಂಬ್ರಿಜ್ ಅನಾಲಿಟಿಕಾ ಪ್ರಕರಣ ಏನೂ ಅಲ್ಲ ಎನ್ನುವಂತೆ ಕಾಣಬಹುದು ಎನ್ನಲಾಗಿದೆ!
ಎಐ ವಿವಿಧ ವಿಚಾರಗಳನ್ನು ಪ್ರಾದೇಶಿಕ ಭಾಷೆಗಳಿಗೆ ಮತ್ತು ಆಡುಭಾಷೆಯ ಶೈಲಿಗೆ ಭಾಷಾಂತರ ಮಾಡಬಲ್ಲದು. ಇದು ರಾಜಕೀಯ ನಾಯಕರಿಗೆ ಪ್ರತ್ಯೇಕ ಗುಂಪುಗಳಿಗೆ ಪ್ರತ್ಯೇಕವಾದ ಸಂದೇಶಗಳನ್ನು ಕಳುಹಿಸಲು ನೆರವಾಗಲಿದೆ. ಇದನ್ನು ʼಮೈಕ್ರೋ ಟಾರ್ಗೆಟಿಂಗ್ʼ ಎಂದು ಕರೆಯಲಾಗುತ್ತದೆ. ಅಂದರೆ, ಸಂದೇಶಗಳನ್ನು ವ್ಯಕ್ತಿಯ ವಯಸ್ಸು, ಆಸಕ್ತಿ, ಸ್ಥಳ ಮತ್ತು ವರ್ತನೆಗಳ ಆಧಾರದಲ್ಲಿ ಕಳುಹಿಸಲಾಗುತ್ತದೆ. ಇದರಿಂದ ಸಂಪರ್ಕ ಸುಧಾರಣೆ ಆಗುತ್ತದೆ ಎನ್ನುವುದೇನೋ ನಿಜ. ಆದರೆ, ಮೌನವಾಗಿಯೇ ಜನರ ಚಿಂತನೆಗಳನ್ನು ಬದಲಾಯಿಸಲೂ ಸಾಧ್ಯವಾಗುತ್ತದೆ. ವರ್ಲ್ಡ್ ಎಕನಾಮಿಕ್ ಫೋರಮ್ ಅಂತೂ ಈಗಾಗಲೇ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿಗಳನ್ನು ಜಗತ್ತಿನ ಅಗ್ರ ಹತ್ತು ಅಪಾಯಗಳಲ್ಲಿ ಒಂದು ಎಂದು ಪಟ್ಟಿಮಾಡಿದೆ. ಏಕೆಂದರೆ, ಎಐ ಟೂಲ್‌ಗಳು ಮತ್ತು ಧ್ವನಿಯ ಕ್ಲೋನಿಂಗ್ ಈಗಾಗಲೇ ಇಂತಹ ನಕಲಿ ವಿಚಾರಗಳ ಸೃಷ್ಟಿಯನ್ನು ಬಹಳ ಸುಲಭ ಮತ್ತು ಸರಳವಾಗಿಸಿವೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ದೊಡ್ಡ ವೇದಿಕೆಗಳು ಈಗಾಗಲೇ ತಮ್ಮ ಸತ್ಯ ಶೋಧನೆ ಮತ್ತು ಚುನಾವಣಾ ಸಮಗ್ರತೆಯ ತಂಡಗಳನ್ನು ಕಡಿತಗೊಳಿಸಿರುವುದರಿಂದ ಈ ಅಪಾಯ ಇನ್ನಷ್ಟು ಹೆಚ್ಚಾಗಿದೆ.
ಇದರೊಡನೆ, ತಪ್ಪು ಮತ್ತು ನಂಬಿಕಾರ್ಹವಲ್ಲದ ಉತ್ತರಗಳ ಸಮಸ್ಯೆಯೂ ಇದೆ. ಎಐ ಸಹ ಪರಿಪೂರ್ಣವೇನಲ್ಲ. ಅದೂ ಹಲವು ಬಾರಿ ತಪ್ಪು ಅಥವಾ ಅನಿಶ್ಚಿತ ಮಾಹಿತಿಗಳನ್ನು ಒದಗಿಸುತ್ತದೆ. ಭಾರತವೂ ಸೇರಿ ಹಲವಾರು ದೇಶಗಳಲ್ಲಿ, ಕೆಲವು ಜನರು ಅಥವಾ ವ್ಯಕ್ತಿತ್ವಗಳನ್ನು ಎಐ ಟೂಲ್‌ಗಳು ಉದ್ದೇಶಪೂರ್ವಕವಾಗಿಯೋ, ಅಥವಾ ಆಕಸ್ಮಿಕವಾಗಿಯೋ ತಪ್ಪಾಗಿ ಪ್ರದರ್ಶಿಸಿದಾಗ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳು ಅನಿಯಂತ್ರಿತವಾದ ಎಐನ ಅಪಾಯಗಳನ್ನೂ ಪ್ರದರ್ಶಿಸಿವೆ. ಇದಾದ ಬಳಿಕ ಖಾಸಗಿತನ, ನ್ಯಾಯಪರತೆ, ಮತ್ತು ಪಕ್ಷಪಾತದ ಕುರಿತ ನೈತಿಕ ಆತಂಕಗಳು ಎದುರಾಗುತ್ತವೆ. ಎಐ ತನಗೆ ಅರಿವಿಲ್ಲದೆಯೇ ತನಗೆ ನೀಡಲಾದ ತರಬೇತಿ ಮಾಹಿತಿಗಳಲ್ಲಿ ಅಡಕವಾಗಿರುವ ಪಕ್ಷಪಾತದ ಅಂಶಗಳನ್ನು ಹಾಗೇ ಹೊತ್ತೊಯ್ಯಬಲ್ಲದು. ಇದರ ಪರಿಣಾಮವಾಗಿ, ಕೆಲವು ಗುಂಪುಗಳು, ಸಮುದಾಯಗಳ ಕುರಿತು ಋಣಾತ್ಮಕ ಅಭಿಪ್ರಾಯ ನೀಡುವ ಸಾಧ್ಯತೆಗಳಿವೆ. ಎಐ ನಿರ್ಣಯಗಳನ್ನು ಅರ್ಥ ಮಾಡಿಕೊಳ್ಳುವುದು ಹಲವೊಮ್ಮೆ ಕಷ್ಟಕರವೂ ಆಗಿರುವುದರಿಂದ, ಕ್ರಮೇಣ ಜನರು ಅದರ ಫಲಿತಾಂಶದ ಕುರಿತು ವಿಶ್ವಾಸ ಕಳೆದುಕೊಳ್ಳಬಹುದು. ಶ್ರೀಮಂತ ರಾಜಕೀಯ ಪಕ್ಷಗಳು ಸಣ್ಣದಾದ ಸ್ಥಳೀಯ ಪಕ್ಷಗಳಿಗೆ ಹೋಲಿಸಿದರೆ ಇನ್ನಷ್ಟು ಉತ್ತಮ ಎಐ ಸೇವೆಗಳನ್ನು ಪಡೆಯಬಲ್ಲವು. ಇದು ಸ್ಪರ್ಧಾಕಣದಲ್ಲಿ ಅಸಮಾನತೆ ಸೃಷ್ಟಿಸುತ್ತದೆ.
ಇದೆಲ್ಲಕ್ಕೂ ನಿಯಮಗಳನ್ನು ರೂಪಿಸುವುದು ಬಹಳ ಕಷ್ಟಕರ. ತಂತ್ರಜ್ಞಾನ ಇಂದು ಕ್ಷಿಪ್ರವಾಗಿ ಬದಲಾಗುತ್ತಿದ್ದು, ಆನ್‌ಲೈನ್ ವೇದಿಕೆಗಳು ಸಂಪೂರ್ಣ ಜಗತ್ತಿನಲ್ಲಿ ಕಾರ್ಯಾಚರಿಸುತ್ತಿವೆ. ಇದರ ಪರಿಣಾಮವಾಗಿ, ಕಾನೂನುಗಳನ್ನು ರೂಪಿಸುವುದು ಮತ್ತು ಜಾರಿಗೊಳಿಸುವುದು ಬಹಳ ಕಠಿಣವಾಗಿದೆ. ಭಾರತದಲ್ಲಿ ಯಾರಾದರೂ ಡೀಪ್‌ಫೇಕ್ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ, ಅವರ ವಿರುದ್ಧ ಇಂಡಿಯನ್ ಪೀನಲ್ ಕೋಡ್ ಅಥವಾ ನೂತನ ಭಾರತೀಯ ನ್ಯಾಯ ಸಂಹಿತೆ 2023, ಮಾಹಿತಿ ತಂತ್ರಜ್ಞಾನ ಕಾಯ್ದೆ 2020, ಮತ್ತು ಐಟಿ ಇಂಟರ್‌ಮೀಡಿಯೇಟರಿ ಗೈಡ್‌ಲೈನ್ ನಿಯಮಾವಳಿ 2021ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಆದರೂ, ಎಐ ಮತ್ತು ಡೀಪ್‌ಫೇಕ್ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳುವ ಅಥವಾ ಇಂತಹ ಮಾಹಿತಿಗಳನ್ನು ನಿರ್ಮಿಸುವವರನ್ನು ಶಿಕ್ಷಿಸುವ ಯಾವುದೇ ಕಾನೂನು ಸೃಷ್ಟಿಯಾಗಿಲ್ಲ.
ಈ ಸವಾಲನ್ನು ನಾವು ನಿರ್ವಹಿಸುವುದು ಹೇಗೆ?
ಇದಕ್ಕಾಗಿ ಸಮತೋಲನದ ಕ್ರಮ ಕೈಗೊಳ್ಳುವ ಅಗತ್ಯವಿದೆ. ಭಾರತೀಯ ಚುನಾವಣಾ ಆಯೋಗ ಚುನಾವಣಾ ಪ್ರಚಾರದಲ್ಲಿ ಎಐ ಆಧಾರಿತ ಸುಳ್ಳು ಮಾಹಿತಿಗಳನ್ನು ಹಂಚುವುದರ ಕುರಿತು ಸ್ಪಷ್ಟವಾದ ನಿಯಮಾವಳಿಗಳನ್ನು ರೂಪಿಸಬಹುದು. ಇಂತಹ ನಿಯಮಗಳು ಪಾರದರ್ಶಕತೆ ಜಾರಿಗೆ ತರಬಲ್ಲವು. ಇದರಿಂದಾಗಿ, ರಾಜಕೀಯ ಜಾಹೀರಾತುಗಳಲ್ಲಿ ಇದಕ್ಕೆ ಯಾರು ಹಣ ಪಾವತಿಸಿದ್ದಾರೆ ಎನ್ನುವುದು ಸ್ಪಷ್ಟಗೊಂಡು, ಆನ್‌ಲೈನ್ ವೇದಿಕೆಗಳ ವ್ಯವಸ್ಥೆಗಳು ತಮ್ಮ ಬಳಕೆದಾರರು ಏನನ್ನು ವೀಕ್ಷಿಸುತ್ತಾರೆ ಎನ್ನುವುದನ್ನು ನಿರ್ಧರಿಸಬಹುದು. ಶಿಕ್ಷಣವೂ ಅಷ್ಟೇ ಮುಖ್ಯವಾಗಿದ್ದು, ಜನರೂ ತಮಗೆ ಲಭಿಸುವ ಮಾಹಿತಿಗಳನ್ನು ಸೂಕ್ಷ್ಮವಾಗಿ, ಜಾಗರೂಕವಾಗಿ ಗಮನಿಸಿ, ನಕಲಿ ಸುದ್ದಿಗಳು ಮತ್ತು ಡೀಪ್‌ಫೇಕ್‌ಗಳನ್ನು ಗುರುತಿಸಲು ಕಲಿಯಬೇಕು. ಜನರಲ್ಲಿ ಮಾಧ್ಯಮ ಸಾಕ್ಷರತೆಯ ಪ್ರಚಾರಕ್ಕೆ ಒತ್ತು ನೀಡುವುದರಿಂದ, ಎಲ್ಲರೂ ನಂಬಿಕಸ್ಥ ಸುದ್ದಿ ಮೂಲಗಳು ಮತ್ತು ನಕಲಿ ಮೂಲಗಳನ್ನು ಗುರುತಿಸಿ ಪ್ರತ್ಯೇಕಿಸಲು ಸಾಧ್ಯವಾಗುತ್ತದೆ.
ನಕಲಿ ವೀಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಹರಿದಾಡುವ ಮುನ್ನವೇ ಅವುಗಳನ್ನು ಪತ್ತೆಹಚ್ಚಿ ತಡೆಗಟ್ಟಲು ಕ್ಷಿಪ್ರ ಪ್ರತಿಕ್ರಿಯಾ ತಂಡವನ್ನು ಸೃಷ್ಟಿಸಬೇಕು. ಸ್ವತಂತ್ರ ಸತ್ಯ ಶೋಧಕರು ಮತ್ತು ಪತ್ರಕರ್ತರಿಗೆ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು. ಇದರೊಡನೆ, ಇಂತಹ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಸಲುವಾಗಿ ಎಐ ಚಾಲಿತ ಟೂಲ್‌ಗಳನ್ನು ನಿರ್ಮಿಸಬಹುದು. ಸಾರ್ವಜನಿಕ ಜಾಗೃತಿಯ ಕ್ರಮಗಳು ಸುಳ್ಳುಗಳನ್ನು ಗುರುತಿಸಿ, ನೈಜ ಮಾಹಿತಿಗಳನ್ನು ಒದಗಿಸಬಲ್ಲವು. ಇದೆಲ್ಲಕ್ಕಿಂತ ಹೆಚ್ಚಾಗಿ, ಎಐ ಅಭಿವೃದ್ಧಿಯೂ ಸಹ ಪಕ್ಷಪಾತದ ಧೋರಣೆಗಳನ್ನು ಕಡಿಮೆಗೊಳಿಸುವ, ಖಾಸಗಿತನವನ್ನು ಕಾಪಾಡುವ, ಮತ್ತು ನ್ಯಾಯಪರತೆಯನ್ನು ಖಾತ್ರಿಪಡಿಸುವ ನೈತಿಕ ತತ್ವಗಳನ್ನು ಅನುಸರಿಸಬೇಕು. ಅಂತಿಮವಾಗಿ, ಸರ್ಕಾರಗಳು, ತಂತ್ರಜ್ಞಾನ ಕಂಪನಿಗಳು, ಮತ್ತು ಜಾಗತಿಕ ಸಂಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ನೈತಿಕ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಂಡು, ಜಗತ್ತಿನಾದ್ಯಂತ ಚುನಾವಣಾ ಪ್ರಕ್ರಿಯೆಯಲ್ಲಿ ಎಐ ಹಸ್ತಕ್ಷೇಪದ ಸಮಸ್ಯೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಭಾರತ ಅತ್ಯಂತ ಆಧುನಿಕ ದೇಶಗಳಲ್ಲಿ ಒಂದಾಗಿರಬಹುದು. ಆದರೆ, ಎಐ ತಂತ್ರಜ್ಞಾನ ಇಂದಿಗೂ ಸಂಪೂರ್ಣವಾಗಿ ಸಾಬೀತಾಗಿರದ ತಂತ್ರಜ್ಞಾನವಾಗಿದೆ. ಆದ್ದರಿಂದ ಅದನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕು. ಇದು ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆಯಾದರೂ, ನಮ್ಮ ನಾಯಕರು ವ್ಯವಸ್ಥೆಗೆ, ಸಮಾಜಕ್ಕೆ ಮತ್ತು ದೈನಂದಿನ ಬದುಕಿಗೆ ತೊಂದರೆ ಉಂಟುಮಾಡಬಲ್ಲ ಎಐ ಸಾಮರ್ಥ್ಯವನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಎಜಿಐ ಇನ್ನೇನು ಹತ್ತಿರಾಗುತ್ತಿರುವ ಸಂದರ್ಭದಲ್ಲಿ, ಈ ಜಾಗೃತಿ ಇನ್ನಷ್ಟು ಹೆಚ್ಚಾಗಬೇಕು. ಡಿಜಿಟಲ್ ಸಾರ್ವಜನಿಕ ವ್ಯವಸ್ಥೆಗಳಲ್ಲಿ ಭಾರತದ ಸಾಮರ್ಥ್ಯ ಅನುಕೂಲಕರವೂ ಆಗಬಹುದು, ತೊಂದರೆಯೂ ಉಂಟುಮಾಡಬಹುದು. ಏಕೆಂದರೆ, ಇಂದು ಪ್ರಗತಿಯನ್ನು ತರುವ ಅದೇ ತಂತ್ರಜ್ಞಾನ ದುರ್ಬಳಕೆಗೂ ತುತ್ತಾಗಬಹುದು. ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯಿಂದ ಬಳಸಿದರೆ, ಎಐ ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಬಲ್ಲದು. ದುರ್ಬಳಕೆಯಾದರೆ, ಅದೇ ಎಐ ಮೌನವಾಗಿಯೇ ಮುಕ್ತ ಮತ್ತು ನ್ಯಾಯಪರ ಚುನಾವಣೆಯ ಬುನಾದಿಯನ್ನೇ ಅಲ್ಲಾಡಿಸಬಲ್ಲದು!
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])














Click it and Unblock the Notifications