ಹೈಕೋರ್ಟ್‌ಗಳಿಗೆ ಮಹತ್ವದ ಗಡುವು: ತೀರ್ಪು ಕಾಯ್ದಿರಿಸಿದ 3 ತಿಂಗಳೊಳಗೆ ಆದೇಶ ಪ್ರಕಟಿಸಲು ಸುಪ್ರೀಂಕೋರ್ಟ್ ಆದೇಶ
ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ಪ್ರಕಟಿಸುವಲ್ಲಿ ಆಗುತ್ತಿರುವ ವಿಳಂಬಕ್ಕೆ ಮುಕ್ತಿ ಹಾಡಲು ಸುಪ್ರೀಂಕೋರ್ಟ್ ಇಂದು ಅತ್ಯಂತ ಮಹತ್ವದ ನಿರ್ದೇಶನವೊಂದನ್ನು ನೀಡಿದೆ. ಯಾವುದೇ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪನ್ನು ಕಾಯ್ದಿರಿಸಿದ ಮೂರು ತಿಂಗಳ ಒಳಗಾಗಿ ಹೈಕೋರ್ಟ್‌ಗಳು ಕಡ್ಡಾಯವಾಗಿ ತೀರ್ಪನ್ನು ಪ್ರಕಟಿಸಬೇಕು ಎಂದು ಗಡುವು ವಿಧಿಸಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ತೀರ್ಪು ಕಾಯ್ದಿರಿಸಿದ ದಿನಾಂಕದಿಂದ ಈ 3 ತಿಂಗಳ ಕಾಲಮಿತಿ ಅನ್ವಯವಾಗಲಿದೆ ಎಂದು ಪೀಠವು ಸ್ಪಷ್ಟಪಡಿಸಿದೆ.
ಇಲ್ಲಿಯವರೆಗೆ ನ್ಯಾಯಾಧೀಶರು ಇಂತಿಷ್ಟೇ ದಿನಗಳಲ್ಲಿ ತೀರ್ಪು ನೀಡಬೇಕು ಎಂಬ ಯಾವುದೇ ನಿರ್ದಿಷ್ಟ ಕಾನೂನಾತ್ಮಕ ಕಾಲಮಿತಿ ಇರಲಿಲ್ಲ. ತೀರ್ಪನ್ನು ಕಾಯ್ದಿರಿಸಿದ ನಂತರ 2ರಿಂದ 6 ತಿಂಗಳ ಸೂಕ್ತ ಅವಧಿಯೊಳಗೆ ಆದೇಶ ಹೊರಡಿಸಬೇಕು ಎಂಬುದು ಕೇವಲ ಸಾಂಪ್ರದಾಯಿಕ ಪದ್ಧತಿಯಾಗಿತ್ತು. ಆದರೆ ಪ್ರಾಯೋಗಿಕವಾಗಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳ ನ್ಯಾಯಾಧೀಶರು ತೀರ್ಪುಗಳನ್ನು ಕಾಯ್ದಿರಿಸಿ, ವರ್ಷಕ್ಕೂ ಹೆಚ್ಚು ಕಾಲ ವಿಳಂಬ ಮಾಡಿ ಪ್ರಕಟಿಸುತ್ತಿದ್ದ ನಿದರ್ಶನಗಳಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಕಠಿಣ ಮಾರ್ಗಸೂಚಿಯನ್ನು ನೀಡಿದೆ.

ಜಾಮೀನು ಆದೇಶಗಳಿಗೂ ಹೊಸ ನಿಯಮ
ತನ್ನ ಆದೇಶದಲ್ಲಿ ಜಾಮೀನು ಪ್ರಕ್ರಿಯೆಗಳ ಕುರಿತೂ ಪೀಠವು ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಜಾಮೀನು ಅರ್ಜಿಗಳ ಮೇಲಿನ ತೀರ್ಪನ್ನು ಆದರ್ಶಪ್ರಾಯವಾಗಿ ಮರುದಿನವೇ ಪ್ರಕಟಿಸಬೇಕು. ಪ್ರಕಟವಾದ ಜಾಮೀನು ಆದೇಶದ ಪ್ರತಿಯನ್ನು ಅಂದೇ ಜೈಲಿಗೆ ತಲುಪಿಸಬೇಕು. ಜಾಮೀನು ದೊರೆತ ನಂತರ ವಿಚಾರಣಾಧೀನ ಕೈದಿಗಳನ್ನು (Undertrials) ಅದೇ ದಿನ ಅಥವಾ ಕನಿಷ್ಠ ಮರುದಿನದ ಒಳಗಾಗಿ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಹೇಳಿದೆ.
ನ್ಯಾಯಾಲಯದಲ್ಲಿ ತೀರ್ಪಿನ ಮುಖ್ಯ ಭಾಗವನ್ನು ಮುಖಾಮುಖಿ ಘೋಷಿಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಸಂಪೂರ್ಣ ಕಾರಣಗಳ ವಿವರಣೆಯನ್ನು ಒಂದು ವಾರದ ಒಳಗಾಗಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಕೋರ್ಟ್ ಹೇಳಿದೆ. ಜೊತೆಗೆ ಹೈಕೋರ್ಟ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಆಯಾ ಪ್ರಕರಣದ ತೀರ್ಪನ್ನು ಯಾವ ದಿನಾಂಕದಂದು ಕಾಯ್ದಿರಿಸಲಾಗಿತ್ತು ಎಂಬ ವಿವರವೂ ಸ್ಪಷ್ಟವಾಗಿ ಕಾಣಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಒಂದು ವೇಳೆ ಸಂಬಂಧಪಟ್ಟ ನ್ಯಾಯಪೀಠವು ಈ ಕಡ್ಡಾಯ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ, ಆ ಪ್ರಕರಣವನ್ನು ತಕ್ಷಣವೇ ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಲಾಗುವುದು. ಈ ಸುಪ್ರೀಂಕೋರ್ಟ್ ಆದೇಶದ ಪ್ರತಿಗಳನ್ನು ದೇಶದ ಎಲ್ಲ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಕಡ್ಡಾಯವಾಗಿ ಮಂಡಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಯಾವೆಲ್ಲ ಸಮಸ್ಯೆಗಳಿಗೆ ಮುಕ್ತಿ?
ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆ ಮುಗಿದರೂ ತೀರ್ಪು ಬಾರದೆ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿವೆ. ಕೆಲವು ಪ್ರಕರಣಗಳಲ್ಲಿ ವಾದ-ಪ್ರತಿವಾದ ಮುಗಿದು ವರ್ಷಗಳೇ ಕಳೆದರೂ ತೀರ್ಪು ಬರುವುದಿಲ್ಲ. ಅಷ್ಟರೊಳಗೆ ಪ್ರಕರಣದ ಹಿನ್ನೆಲೆ ಅಥವಾ ಪರಿಸ್ಥಿತಿಗಳೇ ಬದಲಾಗಿರುತ್ತವೆ. ಈ ಹೊಸ ಆದೇಶದಿಂದಾಗಿ ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ.
ಜೈಲುಗಳಲ್ಲಿ ಶಿಕ್ಷೆ ಪ್ರಕಟವಾದ ಕೈದಿಗಳಿಗಿಂತ, ಇನ್ನೂ ವಿಚಾರಣೆ ಹಂತದಲ್ಲೇ ಇರುವ ಕೈದಿಗಳ ಸಂಖ್ಯೆಯೇ ಹೆಚ್ಚಾಗಿದೆ. ಹಲವು ಬಾರಿ ಹೈಕೋರ್ಟ್‌ಗಳು ಜಾಮೀನು ನೀಡಿದರೂ, ಅದರ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಲು ವಾರಗಟ್ಟಲೆ ಸಮಯ ಹಿಡಿಯುತ್ತಿತ್ತು. ಇದರಿಂದಾಗಿ ಕೈದಿಗಳು ಅನಗತ್ಯವಾಗಿ ಜೈಲಿನಲ್ಲೇ ಉಳಿಯಬೇಕಾಗುತ್ತಿತ್ತು. ಈಗ ಸುಪ್ರೀಂಕೋರ್ಟ್ "ಅಂದೇ ಆದೇಶ ರವಾನೆ, ಮರುದಿನವೇ ಬಿಡುಗಡೆ" ಎಂದು ಕಡ್ಡಾಯಗೊಳಿಸಿರುವುದರಿಂದ ಬಡ ಮತ್ತು ಸಾಮಾನ್ಯ ಕೈದಿಗಳಿಗೆ ತಕ್ಷಣ ನ್ಯಾಯ ಸಿಗುವ ನಿರೀಕ್ಷೆ ಇದೆ.
ಹೈಕೋರ್ಟ್ ವೆಬ್‌ಸೈಟ್‌ಗಳಲ್ಲಿ ತೀರ್ಪು ಕಾಯ್ದಿರಿಸಿದ ದಿನಾಂಕವನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ, ಇನ್ಮೇಲೆ ಸಾರ್ವಜನಿಕರು ಮತ್ತು ವಕೀಲರು ತೀರ್ಪು ವಿಳಂಬವಾಗುತ್ತಿರುವುದನ್ನು ಆನ್‌ಲೈನ್ ಮೂಲಕವೇ ಸುಲಭವಾಗಿ ಪತ್ತೆಹಚ್ಚಬಹುದು. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲ್ ಪಾರದರ್ಶಕತೆಯನ್ನು ಹೆಚ್ಚಿಸಲಿದೆ.













Click it and Unblock the Notifications