ಸಿದ್ದರಾಮಯ್ಯ ಮಾರ್ಗದರ್ಶನ ಸಿಕ್ಕಿದ್ದು ನನ್ನ ಭಾಗ್ಯ, ನನಗೆ ಹೆಗಲು ಕೊಟ್ಟು ನಿಂತರು: ಡಿ.ಕೆ.ಶಿವಕುಮಾರ್ ಪೋಸ್ಟ್
ಬೆಂಗಳೂರು: ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯ ಮುಕ್ತಾಯಗೊಂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಭಾವುಕ ಮತ್ತು ಗೌರವಪೂರ್ವಕ ಪೋಸ್ಟ್ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಪಯಣ, ಜನಪರ ಆಡಳಿತ ಹಾಗೂ ಇಬ್ಬರ ನಡುವಿನ ಒಡನಾಟವನ್ನು ಡಿ.ಕೆ.ಶಿವಕುಮಾರ್ ನೆನೆದಿದ್ದಾರೆ.
"ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ..."
ತಮ್ಮ ಪೋಸ್ಟ್‌ನ ಆರಂಭದಲ್ಲೇ ಅತ್ಯಂತ ಅರ್ಥಗರ್ಭಿತ ಸಾಲುಗಳನ್ನು ಬರೆದಿರುವ ಡಿ.ಕೆ.ಶಿವಕುಮಾರ್, "ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು" ಎಂದು ಶ್ಲಾಘಿಸಿದ್ದಾರೆ.

ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿ ಎಂಬ ಸಣ್ಣ ಹಳ್ಳಿಯಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ, ಬೆಳೆದು, ನಿರಂತರ ಹೋರಾಟಗಳ ಮೂಲಕವೇ ರಾಜಕೀಯಕ್ಕೆ ಬಂದು, ಇಂದು ರಾಜ್ಯದ ಅತ್ಯುನ್ನತ ಸ್ಥಾನಕ್ಕೇರಿದ ಸಿದ್ದರಾಮಯ್ಯ ಅವರ ಸಾಧನೆಯನ್ನು ಶಿವಕುಮಾರ್ ಶ್ಲಾಘಿಸಿದ್ದಾರೆ. ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು, ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನನ್ನ ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನೆಲೆಸಿರುವ ಅವರು, ಭಾರತೀಯ ರಾಜಕಾರಣದ ಧೀಮಂತ ನಾಯಕ ಎಂದು ಬಣ್ಣಿಸಿದ್ದಾರೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಸುಮಾರು ಐವತ್ತು ವರ್ಷಗಳ (5 ದಶಕ) ಅಗಾಧ ರಾಜಕೀಯ ಅನುಭವ ಹೊಂದಿರುವ ಅವರು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತೀಯ ರಾಜಕಾರಣದ ಧೀಮಂತ ನಾಯಕ ಎಂದು ಡಿಕೆಶಿ ಹೇಳಿದ್ದಾರೆ. ಅವರು ಜಾರಿಗೆ ತಂದ ಜನಪರ ಯೋಜನೆಗಳು ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಎಂದಿಗೂ ಅವಿಸ್ಮರಣೀಯ ಮತ್ತು ಸದಾ ಸ್ಮರಣೀಯ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು.
— DK Shivakumar (@DKShivakumar) May 29, 2026
ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು, ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ… pic.twitter.com/DLEGN94UWt
ಹೆಗಲಿಗೆ ಹೆಗಲು ಕೊಟ್ಟರು
ತಮ್ಮ ಮತ್ತು ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಒಡನಾಟ ಮತ್ತು ಸ್ನೇಹವನ್ನು ನೆನಪಿಸಿಕೊಂಡಿರುವ ಡಿ.ಕೆ. ಶಿವಕುಮಾರ್, "2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ" ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಇಬ್ಬರೂ ಜೊತೆಯಾಗಿ ಶ್ರಮಿಸಿದ್ದನ್ನು ಸ್ಮರಿಸಿದ್ದಾರೆ. ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಅವರ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ ಎಂದಿದ್ದಾರೆ.
ಮುಂದೆಯೂ ಅವರ ಮಾರ್ಗದರ್ಶನ ಅಗತ್ಯ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರೂ, ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ" ಎಂಬ ಕರೆ ನೀಡುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ ಡಿಕೆಶಿ. ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧಿಕೃತವಾಗಿ ಸ್ವೀಕರಿಸಿದ್ದು, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಸದ್ಯದಲ್ಲೇ ಪ್ರಮಾನವಚನ ಸ್ವೀಕರಿಸಲಿದ್ದಾರೆ.













Click it and Unblock the Notifications