ಯುಗಗಳು ಉರುಳಿದರೂ ಅಳಿಯದ ಹನುಮ ಭಕ್ತಿ: ಇಲ್ಲಿವೆ ಭಾರತದ ಪುರಾತನ ಮಾರುತಿ ಮಂದಿರಗಳು
ಭಾರತದಾದ್ಯಂತ ಹನುಮಂತನಿಗೆ ಸಮರ್ಪಿತವಾದ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಇವು ಕೇವಲ ಪೂಜಾ ಸ್ಥಳಗಳಷ್ಟೇ ಅಲ್ಲ, ಶತಮಾನಗಳ ಇತಿಹಾಸ, ಭಕ್ತಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಅನೇಕ ದೇವಾಲಯಗಳು ಕಾಲಾನುಗುಣವಾಗಿ ಪುನರ್‌ನಿರ್ಮಾಣಗೊಂಡಿದ್ದರೂ, ಕೆಲವು ದೇವಾಲಯಗಳ ಪೂಜಾ ಪರಂಪರೆ ಸಾವಿರ ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. ಇವು ರಾಮಾಯಣದ ಕಾಲದಿಂದಲೂ ಕಥೆಗಳೊಂದಿಗೆ ಕೂಡ ಸಂಬಂಧ ಹೊಂದಿವೆ.
ಹನುಮಾನ್ ಗಡಿ, ಅಯೋಧ್ಯೆ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇರುವ ಹನುಮಾನ್ ಗಡಿ ಅತ್ಯಂತ ಪ್ರಸಿದ್ಧ ಹನುಮಾನ್ ದೇವಾಲಯಗಳಲ್ಲಿ ಒಂದು. ಈ ದೇವಾಲಯವನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಕೆಲವು ಐತಿಹಾಸಿಕ ಉಲ್ಲೇಖಗಳು ಹೇಳುತ್ತವೆ. ರಾಮ ಜನ್ಮಭೂಮಿ ರಕ್ಷಕನಾಗಿ ಆಂಜನೇಯನು ಇಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ಧೃಡವಾದ ನಂಬಿಕೆ ಇದೆ. ಈ ದೇವಾಲಯವನ್ನು ತಲುಪಲು ಭಕ್ತರು ಸುಮಾರು 76 ಭವ್ಯವಾದ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ರಾಮನವಮಿ ಮತ್ತು ಹನುಮ ಜಯಂತಿಯ ಸಮಯದಲ್ಲಿ ಇಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ಅಯೋಧ್ಯೆಗೆ ಬರುವ ಭಕ್ತರು ಮೊದಲಿಗೆ ಹನುಮಾನ್ ಗಡಿಗೆ ಭೇಟಿ ನೀಡಿದ ಬಳಿಕವೇ ರಾಮ ಮಂದಿರ ದರ್ಶನಕ್ಕೆ ತೆರಳುವ ಪರಂಪರೆ ಕೂಡ ಇದೆ. ಸಂಜೆ ಸಮಯದಲ್ಲಿ ನಡೆಯುವ ಆರತಿ ಮತ್ತು ಭಜನೆಗಳು ದೇವಾಲಯದ ಆಧ್ಯಾತ್ಮಿಕ ವಾತಾವರಣವನ್ನು ಇನ್ನಷ್ಟು ಮನಮೋಹಕವಾಗಿಸುತ್ತವೆ.
ಜಾಖೂ ದೇವಸ್ಥಾನ, ಶಿಮ್ಲಾ
ಹಿಮಾಚಲ ಪ್ರದೇಶದ ಶಿಮ್ಲಾದ ಜಾಖು ಬೆಟ್ಟದ ಮೇಲಿರುವ ಜಾಖು ದೇವಸ್ಥಾನ ಹಿಮಾಲಯ ಪ್ರದೇಶದ ಅತ್ಯಂತ ಹಳೆಯ ಹನುಮಾನ್ ಆರಾಧನಾ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರಾಮಾಯಣದ ಪ್ರಕಾರ, ಸಂಜೀವಿನಿ ಔಷಧಿ ಹುಡುಕುವ ವೇಳೆ ಹನುಮಂತ ಇಲ್ಲಿ ವಿಶ್ರಾಂತಿ ಪಡೆದಿದ್ದಾನೆ ಎನ್ನುವ ನಂಬಿಕೆ ಇದೆ. ಈಗಿನ ದೇವಾಲಯವನ್ನು ಹಲವು ಬಾರಿ ಪುನರ್‌ನಿರ್ಮಾಣ ಮಾಡಲಾಗಿದ್ದರೂ, ಈ ಸ್ಥಳದ ಭಕ್ತಿ ಪರಂಪರೆ ಬಹಳ ಪುರಾತನವಾಗಿದೆ. ಇಲ್ಲಿ ಇರುವ ಭವ್ಯ ಹನುಮಾನ್ ಪ್ರತಿಮೆ ಪ್ರಮುಖ ಆಕರ್ಷಣೆಯಾಗಿದೆ.

ದೇವಾಲಯಕ್ಕೆ ತೆರಳಲು ಟ್ರೆಕ್ಕಿಂಗ್ ಮಾರ್ಗ ಹಾಗೂ ರೋಪ್‌ವೇ ಸೌಲಭ್ಯವೂ ಲಭ್ಯವಿದೆ. ಮಂಗಳವಾರ ಮತ್ತು ಶನಿವಾರದಂದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ದೀಪಾವಳಿ, ಹನುಮ ಜಯಂತಿ ಮತ್ತು ದಸರಾ ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ಮತ್ತು ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.
ಪ್ರಾಚೀನ ಹನುಮಾನ್ ಮಂದಿರ, ದೆಹಲಿ
ದೆಹಲಿ ನಗರದ ಕನಾಟ್ ಪ್ಲೇಸ್‌ನಲ್ಲಿ ಇರುವ ಪ್ರಾಚೀನ ಹನುಮಾನ್ ಮಂದಿರವು ದೇಶದ ಅತ್ಯಂತ ಹಳೆಯ ಹನುಮಾನ್ ದೇವಾಲಯಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಕೆಲ ಪೌರಾಣಿಕ ನಂಬಿಕೆಗಳ ಪ್ರಕಾರ, ಇದರ ಇತಿಹಾಸ ಮಹಾಭಾರತ ಕಾಲದವರೆಗೂ ಸಾಗುತ್ತದೆ. ದೇವಾಲಯದ ಈಗಿನ ಕಟ್ಟಡ ಹಲವು ಬಾರಿ ನವೀಕರಣಗೊಂಡಿದ್ದರೂ, ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಪೂಜೆ ಮತ್ತು ಭಕ್ತಿ ಪರಂಪರೆ ಈ ಸ್ಥಳಕ್ಕೆ ವಿಶೇಷ ಮಹತ್ವ ನೀಡಿದೆ. ಮಂಗಳವಾರ ಮತ್ತು ಹನುಮ ಜಯಂತಿಯಂದು ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.
ಮಂಗಳವಾರ, ಶನಿವಾರ ಹಾಗೂ ಹನುಮ ಜಯಂತಿಯಂದು ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ನಿರಂತರವಾಗಿ ನಡೆಯುವ "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಜಪವು ವಿಶೇಷ ಖ್ಯಾತಿ ಪಡೆದಿದ್ದು, ಇದು ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ದೇವಾಲಯದ ಸುತ್ತಮುತ್ತಲಿನ ಆಧ್ಯಾತ್ಮಿಕ ವಾತಾವರಣ ಮತ್ತು ಭಜನೆಗಳು ಭಕ್ತರಿಗೆ ವಿಶಿಷ್ಟ ಅನುಭವ ನೀಡುತ್ತವೆ.
ಮಹಾವೀರ ಮಂದಿರ, ಪಾಟ್ನಾ
ಬಿಹಾರದ ಪಾಟ್ನಾದಲ್ಲಿರುವ ಮಹಾವೀರ ಮಂದಿರವು ಪೂರ್ವ ಭಾರತದ ಪ್ರಮುಖ ಹನುಮಾನ್ ದೇವಾಲಯಗಳಲ್ಲಿ ಒಂದಾಗಿದೆ. ಈಗಿನ ದೇವಾಲಯದ ಅಭಿವೃದ್ಧಿ 18ನೇ ಶತಮಾನದಲ್ಲಿ ಹೆಚ್ಚು ನಡೆದಿದ್ದರೂ, ಈ ಸ್ಥಳದಲ್ಲಿ ಅದಕ್ಕೂ ಮೊದಲು ಹನುಮಾನ್ ಆರಾಧನೆ ನಡೆದಿತ್ತು ಎಂದು ನಂಬಲಾಗಿದೆ. ಇಂದು ಇದು ದೇಶದ ಅತ್ಯಂತ ಹೆಚ್ಚು ಭೇಟಿ ನೀಡಲಾಗುವ ದೇವಾಲಯಗಳಲ್ಲಿ ಒಂದಾಗಿದೆ. ಲಕ್ಷಾಂತರ ಭಕ್ತರು ವರ್ಷ ವರ್ಷ ಇಲ್ಲಿ ಭೇಟಿ ನೀಡುತ್ತಾರೆ.
ಬಾಲ ಹನುಮಾನ್ ದೇವಸ್ಥಾನ, ಜಾಮ್ನಗರ
ಗುಜರಾತಿನ ಜಾಮ್ನಗರದಲ್ಲಿರುವ ಬಾಲ ಹನುಮಾನ್ ದೇವಸ್ಥಾನ ತನ್ನ ನಿರಂತರ ರಾಮನಾಮ ಜಪಕ್ಕಾಗಿ ಪ್ರಸಿದ್ಧವಾಗಿದೆ. ಇಲ್ಲಿ "ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್" ಎಂಬ ಮಂತ್ರವನ್ನು ಹಲವು ದಶಕಗಳಿಂದ ನಿರಂತರವಾಗಿ ಜಪಿಸಲಾಗುತ್ತಿದೆ. ದೇವಾಲಯದ ಕಟ್ಟಡ ಆಧುನಿಕವಾದರೂ, ಇದರ ಭಕ್ತಿ ಪರಂಪರೆ ಪುರಾತನ ಹನುಮಾನ್ ಆರಾಧನಾ ಸಂಪ್ರದಾಯವನ್ನು ಮುಂದುವರಿಸುತ್ತಿದೆ. 1964 ಆಗಸ್ಟ್ 1 ರಂದು ಪ್ರಾರಂಭವಾದ ದೇವಸ್ಥಾನ ಈ ವಿಶಿಷ್ಟ ಸೇವೆಯಿಂದ ದೇವಾಲಯಕ್ಕೆ ವಿಶೇಷ ಸ್ಥಾನಮಾನ ದೊರೆತಿದೆ.














Click it and Unblock the Notifications