Kavya Maran: ವೈಭವ್ ಸೂರ್ಯವಂಶಿ ಆಟಕ್ಕೆ ಸಲಾಂ ಎಂದು ಕ್ರೀಡಾ ಸ್ಪೂರ್ತಿ ಮೆರೆದ ಕಾವ್ಯಾ ಮಾರನ್: ವೈರಲ್
Kavya Maran: ಇತ್ತೀಚೆಗಷ್ಟೇ ಮುಲ್ಲನ್‌ಪುರ್‌ನಲ್ಲಿ ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 15 ವರ್ಷದ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಎಸ್‌ಆರ್‌ಎಚ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ತಮ್ಮ ಹೈದರಾಬಾದ್ ಟೀಮ್ ಈ ಬಾರಿಯ ಟೂರ್ನಿಯಿಂದ ಹೊರಬಿದ್ದರೂ ಸಹ ಮಾಲಕಿ ಕಾವ್ಯಾ ಮಾರನ್ ಅವರು ವೈಭವ್ ಸೂರ್ಯವಂಶಿಗೆ ವಿಶೇಷ ಅಭಿನಂದನೆ ತಿಳಿಸಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬುಧವಾರ ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಆರ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರು. 15 ವರ್ಷದ ಈ ಬಾಲಕನ ಬ್ಯಾಟಿಂಗ್ ಎಷ್ಟೊಂದು ಅದ್ಭುತವಾಗಿತ್ತೆಂದರೆ ಎದುರಾಳಿ ತಂಡದವರು ಕೂಡ ಅಭಿನಂದಿಸುವಷ್ಟರ ಮಟ್ಟಿಗೆ.

ವೈಭವ್‌ಗೆ ಅಭಿನಂದನೆ ತಿಳಿಸಿದ ಕಾವ್ಯಾ ಮಾರನ್
ಪಂದ್ಯದ ನಂತರ ಎಸ್‌ಆರ್‌ಎಚ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರು ವೈಭವ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾವ್ಯಾ ಮಾರನ್ ಅವರು ಸೂರ್ಯವಂಶಿ ಅವರ ಬಳಿ ತೆರಳಿ ಹಸ್ತಲಾಘವ ಮಾಡುವ ಮೂಲಕ ಮೆಚ್ಚುಗೆಯ ಮಾತುಗಳನ್ನು ಹೇಳಿ ಅಭಿನಂದಿಸಿ ಗಮನ ಸೆಳೆದರು.
ವೈಭವ್ ಆಟಕ್ಕೆ ಮೆಚ್ಚುಗೆಗಳ ಸುರಿಮಳೆ
ಅದೇ ವೇಳೆ ಎಸ್‌ಆರ್‌ಎಚ್ ತಂಡದ ಬೌಲಿಂಗ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ಕೂಡ ಈ ಆಟಗಾರನ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಅದ್ಭುತ ಸಾಮರ್ಥ್ಯವನ್ನು ಶ್ಲಾಘಿಸಿದರು. 'ಈ ಎಡಗೈ ಬ್ಯಾಟರ್ ಇಲ್ಲಿಂದ ಮುಂದೆ ಇನ್ನೂ ಹೆಚ್ಚಿನ ಪ್ರಭಾವಶಾಲಿಯಾಗಿ ಬೆಳೆಯಲಿದ್ದಾರೆ ಮತ್ತು ಮಾನಸಿಕವಾಗಿ ಇನ್ನಷ್ಟು ಬಲಿಷ್ಠರಾಗಲಿದ್ದಾರೆ,' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
'ಎದುರಾಳಿಗಳಿ ತಂಡಗಳಿಗೆ ಸೂರ್ಯವಂಶಿಯದ್ದೇ ಭಯ'
ಮುಂದುವರೆದು ಮಾತನಾಡಿದ ಅವರು, 'ಇಂತಹ ಅದ್ಭುತ ಪ್ರತಿಭೆಯನ್ನು ಯಾರೂ ಹಿಂದೆಂದೂ ನೋಡಿಲ್ಲ ಎಂದು ನಾನು ಭಾವಿಸುತ್ತೇನೆ. ಸದ್ಯ ಅವರು ಮಾಡುತ್ತಿರುವ ಸಾಧನೆ ಅಸಾಧಾರಣವಾದುದು. ಅವರ ವೃತ್ತಿಜೀವನದಲ್ಲಿ ಇನ್ನೂ 25 ವರ್ಷಗಳ ಕಾಲ ಆಡುವ ಅವಕಾಶವಿದೆ ಎಂದು ಯೋಚಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಲ್ಲಿಂದ ಮುಂದೆ ಅವರು ಮತ್ತಷ್ಟು ಆಕ್ರಮಣಕಾರಿ ಆಟ ಆಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯಕ್ಕಂತೂ ಅವರ ಆಟ ಎದುರಾಳಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ,' ಎಂದು ಹೇಳಿದ್ದಾರೆ.
ಐಪಿಎಲ್ ಸೀಸನ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ದಂತಕಥೆ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸೂರ್ಯವಂಶಿ 65 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅಳಿಸಿಹಾಕಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಅವರು ಈಗಾಗಲೇ 680 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಸೀಸನ್‌ನಲ್ಲಿ ಅವರು 55 ಬೌಂಡರಿಗಳನ್ನೂ ಸಹ ಸಿಡಿಸಿ ಗಮನ ಸೆಳೆದಿದ್ದಾರೆ.
'ಬೌಲರ್‌ಗಳ ದಿಕ್ಕು ತಪ್ಪಿಸುತ್ತಿದ್ದಾನೆ ಈ ಬಾಲಕ'
ವೈಭವ್ ಸೂರ್ಯವಂಶಿ ವಿರುದ್ಧ ಬೌಲಿಂಗ್ ಮಾಡುವ ಕುರಿತು ಮಾತನಾಡಿದ ಫ್ರಾಂಕ್ಲಿನ್, 'ಅವರಿಗೆ ಬೌಲಿಂಗ್ ಮಾಡಲು ತುಂಬಾ ಅಲ್ಪ ಅವಕಾಶವಿತ್ತು. ಪಿಚ್ ತುಂಬಾ ಚೆನ್ನಾಗಿರುವಾಗ ಬೌಲರ್‌ಗಳಿಗೆ ತಾವು ಅಂದುಕೊಂಡಂತೆ ಚೆಂಡನ್ನು ಎಸೆಯುವುದು ಸವಾಲಾಗಿ ಪರಿಣಮಿಸುತ್ತದೆ. ಪವರ್‌ಪ್ಲೇನ ಮೊದಲ ಎರಡು ಓವರ್‌ಗಳಲ್ಲಿ ನಮ್ಮ ಬೌಲರ್‌ಗಳು ಲೆಗ್ ಸ್ಟಂಪ್‌ನ ಒಳಭಾಗದಲ್ಲಿ ಫುಲ್ ಲೆಂತ್ ಎಸೆತಗಳನ್ನು ಎಸೆಯಲು ಪ್ರಯತ್ನಿಸಿದರು,' ಎಂದು ಹೇಳಿದರು.
'ಆದರೆ ವೈಭವ್ ಸೂರ್ಯವಂಶಿ ಅವರು ಅದನ್ನು ಬೇಗನೆ ಅರ್ಥಮಾಡಿಕೊಂಡರು, ಅದು ಅವರಲ್ಲಿರುವ ವಿಶೇಷ ಪ್ರತಿಭೆ. ಅವರು ಅದೆಷ್ಟು ಅದ್ಭುತ ಪ್ರತಿಭೆ ಎಂದರೆ ಬೌಲರ್‌ಗಳ ತಂತ್ರದೊಂದಿಗೆ ಆಟವಾಡಲು ಶುರುಮಾಡುತ್ತಾರೆ ಮತ್ತು ಬೌಲರ್‌ಗಳು ಬೇರೆ ದಿಕ್ಕಿನಲ್ಲಿ ಚೆಂಡು ಎಸೆಯುವಂತೆ ಒತ್ತಡ ಹೇರುತ್ತಾರೆ. ಬೌಲರ್‌ಗಳು ಬದಲಿಸಿದ ಆ ದಿಕ್ಕುಗಳು ಮತ್ತೆ ಅವರಿಗೆ ಬಲವಾಗಿ ಪರಿಣಮಿಸುತ್ತವೆ. ಒಟ್ಟಿನಲ್ಲಿ ಒಬ್ಬ ಅದ್ಭುತ ಪ್ರತಿಭೆಯಿಂದ ಮೂಡಿಬಂದ ಮತ್ತೊಂದು ಅದ್ಭುತ ಇನ್ನಿಂಗ್ಸ್ ಇದಾಗಿದೆ,' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಹೇಳುವುದಾದರೆ ತಮ್ಮ ತಂಡ ಸೋತರೂ ಸಹ ಎದುರಾಳಿ ತಂಡದ ವೈಭವ್ ಅವರ ಬ್ಯಾಟಿಂಗ್ ಆಡಿದ ರೀತಿಯನ್ನು ಶ್ಲಾಘಿಸುವ ಮೂಲಕ ಎಸ್‌ಆರ್‌ಎಚ್ ಮಾಲಕಿ ಹಾಗೂ ಕೋಚ್ ಅಭಿಮಾನಿಗಳ ಮನ ಗೆದ್ದಿದ್ದಾರೆ.












Click it and Unblock the Notifications