ಕರ್ನಾಟಕ ಹವಾಮಾನ; 5 ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ!
ಬೆಂಗಳೂರು, ಸೆಪ್ಟೆಂಬರ್ 18; ಸೆಪ್ಟೆಂಬರ್ ತಿಂಗಳ ಆರಂಭದಿಂದಲೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರದಿಂದ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ತೀವ್ರತೆ ಪಡೆದುಕೊಳ್ಳಲಿದೆ. ಕಳೆದ ವಾರದಿಂದಲೇ ಮಲೆನಾಡು, ಕರಾವಳಿ ಮತ್ತು ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಭಾನುವಾರ ಸಂಜೆ ಕೆಲವು ಪ್ರದೇಶಗಳಲ್ಲಿ ಮಳೆಯಾಗಿತ್ತು. ರಾತ್ರಿ ನಗರದ ಹಲವೆಡೆ ಜಿಟಿ ಜಿಟಿ ಮಳೆಯಾಗಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರದಿಂದ 5 ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಗಾಳಿಯ ವೇಗವೂ ಸಹ ಗಂಟೆಗೆ 45 ರಿಂದ 55 ಕಿ. ಮೀ. ವೇಗದಲ್ಲಿ ಇರದಲಿದೆ ಎಂದು ಅಂದಾಜಿಸಲಾಗಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಯಾದಗಿರಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಬೆಂಗಳೂರು ನಗರದ ಹವಾಮಾನ; ಕಳೆದ ಒಂದು ವಾರದಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಸಂಜೆ ಅಥವ ರಾತ್ರಿ ಜಿಟಿ ಜಿಟಿ ಮಳೆಯಾಗುತ್ತಿದೆ. ನಗರದಲ್ಲಿ ಆಗಸ್ಟ್‌ನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಉಷ್ಣಾಂಶ ಇಳಿಕೆಯಾಗಿದೆ.
ಹವಾಮಾನ ಇಲಾಖೆ ಮಾಹಿತಿ ಅನ್ವಯ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆ ಅಥವ ರಾತ್ರಿ ಅವಧಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಜೂನ್ 1 ರಿಂದ ಸೆಪ್ಟೆಂಬರ್ 30ರ ಅವಧಿಯನ್ನು ನೈಋತ್ಯ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಜಲಾಶಯಗಳು ಭರ್ತಿಯಾಗದೇ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ ಸರ್ಕಾರ ಈಗಾಗಲೇ 2023-24ನೇ ಸಾಲಿನಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. 161 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು, 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಘೋಷಿಸಿದೆ.
ಸರ್ಕಾರವೇ ನೀಡಿರುವ ಮಾಹಿತಿಯಂತೆ 2023ನೇ ಸಾಲಿನ ನೈಋತ್ಯ ಮುಂಗಾರು ರಾಜ್ಯಕ್ಕೆ ಜೂನ್ 8ರಂದು ಆಗಮಿಸಿತು. ರಾಜ್ಯದ ಎಲ್ಲಾ ಕಡೆ 14 ದಿನಗಳಲ್ಲಿ ವ್ಯಾಪಿಸಿತು. ಆದರೆ ಜೂನ್‌ನಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ. 56 ಮಳೆ ಕೊರತೆ ಉಂಟಾಯಿತು.
ಜುಲೈ ತಿಂಗಳಿನಲ್ಲಿ ಮುಂಗಾರು ಚುರುಕುಗೊಂಡಿತು. ವಾಡಿಕೆಗಿಂತ ಶೇ.29 ಹೆಚ್ಚು ಮಳೆಯಾಯಿತು. ಆದರೆ ಈ ಮಳೆಯು ಕೇವಲ ಒಂದು ವಾರ ಮಾತ್ರ ಕೇಂದ್ರೀಕೃತವಾಗಿತ್ತು. ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ.73 ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಯಿತು.
ಈ ನೈಋತ್ಯ ಮುಂಗಾರು ಮಳೆ ಕೊರತೆ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದ ರೈತರು ಬಳಿಕ ಮಳೆ ಇಲ್ಲದೇ ಬೆಳೆಗಳು ಒಣಗುವುದು ನೋಡಿ ಆತಂಕಗೊಂಡರು. ಆದರೆ ಸೆಪ್ಟೆಂಬರ್ ತಿಂಗಳ ಆರಂಭದಿಂದಲೂ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.












Click it and Unblock the Notifications