ವಿಧಾನಸಭೆ ಚುನಾವಣೆ ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು ಮೇ 10: ಮತದಾನದ ದಿನ ಮಳೆ ತೊಂದರೆಕೊಡುವ ಎಲ್ಲಾ ಸಾಧ್ಯತೆಗಳೂ ಇದೆ. ಮೇ 12ರಂದು ಮತದಾನ ಮಾಡಲು ಹೊರಟವರಿಗೆ ಮಳೆಯಿಂದ ತೊಂದರೆಯಾಗುವ ನಿರೀಕ್ಷೆ ಇದೆ. ಏಕೆಂದರೆ ಮೇ 14ರವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆ ಹಾಗೂ ಕರಾವಳಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಮೇ 14ರವರೆಗೂ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಲ ಪ್ರದೇಶಗಳಲ್ಲಿ ಮೇ 10,12 ಮತ್ತು 14 ರಂದು ಬಿರುಗಾಳಿ, ಗುಡುಗು ಸಿಡಿಲುಸಹಿತ ಮಳೆಯಬ್ಬರದ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.
ಲಕ್ಷದ್ವೀಪ ಮತ್ತು ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿದೆ. ದಕ್ಷಿಣ ಒಳನಾಡು ಹಾದುಹೋಗುವಂತೆ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದವರೆಗೆ ಟ್ರಫ್ ನಿರ್ಮಾಣವಾಗಿದೆ. ಇದರ ಪ್ರಭಾವದಿಂದಲೇ ಮಳೆ ಮುನ್ಸೂಚನೆ ನೀಡಲಾಗಿದೆ.

ಬುಧವಾರ ಬೆಳಗ್ಗೆ 8.30ರವರೆಗೆ ಕೊಡುಗು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ 35 ಮಿ.ಮೀ ನಿಂದ 124 ಮಿ.ಮೀವರೆಗೆ ಮಳೆ ದಾಖಲಾಗಿದೆ. ಉಡುಪಿ ಚಾಮರಾಜನಗರ, ರಾಮನಗರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.











Click it and Unblock the Notifications