Karnataka Rains: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿಂದು ಭಾರೀ ಮಳೆ: ಬೆಂಗಳೂರಿನಲ್ಲೂ ವರ್ಣಾರ್ಭಟ
ಬೆಂಗಳೂರು ಏಪ್ರಿಲ್ 16: ಬೆಂಗಳೂರಿನಲ್ಲಿ ಕಳೆದ ದಿನ ರಾತ್ರಿ ಅಲ್ಲಲ್ಲಿ ಮಳೆಯಾಗಿದೆ. ಪರಿಣಾಮ ಇಂದು ಸಿಲಿಕಾನ್ ಸಿಟಿ ವಾತಾವರಣ ತಂಪಾಗಿದೆ. ಇಂದೂ ಕೂಡ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ರಾಜ್ಯದ ಯಾವ ಭಾಗದಲ್ಲಿ ಇಂದು ಮಳೆಯಾಗಲಿದೆ? ಇಂದಿನ ಹವಾಮಾನ ಯಾವ ಭಾಗದಲ್ಲಿ ಹೇಗಿರಲಿದೆ ಎನ್ನುವ ಸಂಪೂರ್ಣ ವರದಿ ಇಲ್ಲಿದೆ.
ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಕಪ್ಪು ಕಾರ್ಮೋಡ ಆವರಿಸುತ್ತಿದೆ. ಆದರೆ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಕಳೆದ ದಿನ (ಏಪ್ರಿಲ್ 15) ರಾತ್ರಿ ವೇಳೆ ಗುಡುಗು, ವೇಗವಾಗಿ ಗಾಳಿ ಬೀಸಿತಾದರೂ ಹೆಚ್ಚೇನು ಮಳೆಯಾಗಿಲ್ಲ. ಕೆಲವೆಡೆ ಜೋರು ಮಳೆಯಾದರೆ ಇನ್ನೂ ಹಲವೆಡೆ ಮಳೆಯೇ ಆಗಿಲ್ಲ. ಆದರೆ ಇಂದು ನಗರದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.

ಹೌದು ಇಂದು ಬೆಂಗಳೂರಿನಾದ್ಯಂತ ಗುಡುಗು ಮಿಂಚು ಗಾಳಿ ಸಮೇತ ಮಳೆಯಾಗಲಿದೆ. ಮಧ್ಯಾಹ್ನದವರೆಗೆ ಎಂದಿನಂತೆ ತಾಪಮಾನ ಇರಲಿದ್ದು ನಂತರ ಮಳೆ ಮೋಡ ಹೆಚ್ಚಾಗುವ ಸೂಚನೆ ನೀಡಲಾಗಿದೆ. ಸಂಜೆ ನಂತರ ಗಾಳಿಯ ವೇಗ ಅಧಿಕವಾಗಲಿದ್ದು ಮರ ಗಿಡಗಳು ಮಾತ್ರವಲ್ಲದೆ ವಿದ್ಯುತ್ ಕಂಬಗಳು ಉರುಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ. ಹಾಗಾದರೆ ಇಂದು (ಏಪ್ರಿಲ್ 16) ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲಿ ಮಳೆಯಾಗಲಿದೆ?
ಕರ್ನಾಟಕದಾದ್ಯಂತ ಎಲ್ಲೆಲ್ಲಿ ಮಳೆ ಮೋಡ?
ಕರ್ನಾಟಕದ ಹಲವೆಡೆ ಇಂದು (ಏಪ್ರಿಲ್ 16) ಧಾರಾಕಾರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಶಿವಮೊಗ್ಗ್, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಕೋಲಾರ, ತುಮಕೂರು, ಬೆಳಗಾವಿ, ಚಾಮರಾಜನಗರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆ ಇದೆ.

ಅದೇ ರೀತಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲೂ ಮಳೆ ಬೀಳುವ ಲಕ್ಷಣಗಳು ಇವೆ. ಇನ್ನೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಂದರೆ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಹಾವೇರಿಯಲ್ಲಿ ಇಂದು ವರುಣ ತಂಪೆರೆಯುವ ಸಾಧ್ಯತೆಗಳು ಇವೆ. ಅಲ್ಲದೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಶಿವಮೊಗ್ಗ, ಕೊಡಗು ಈ ಎಲ್ಲಾ ಕಡೆ ಸಾಧಾರಣದಿಂದ ಹಗುರವಾಗಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ಕೊಟ್ಟಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳದಿಂದ ಮುಂಗಾರು ಮಾರುತಗಳು ಪ್ರವೇಶ ಮಾಡುತ್ತವೆ. ಬಳಿಕ ಜೂನ್ ಮೊದಲ ವಾರ ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಈ ಬಾರಿ ಜೂನ್‌ನಿಂದ ಮುಂದಿನ ನಾಲ್ಕು ತಿಂಗಳುಗಳ ಕಾಲ ಈ ವರ್ಷ ಶೇಕಡಾ 105ರಷ್ಟು ಮುಂಗಾರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೇಶಾದ್ಯಂತ ಈ ಬಾರಿ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ನೀಡಿದೆ. ಈ ಸುದ್ದಿ ರೈತರ ಮುಖದಲ್ಲಿ ಮಂದಹಾಸ ಮುಡಿಸಿದೆ.











Click it and Unblock the Notifications