ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಲಿಗೆ, ಕರ್ನಾಟಕಕ್ಕೆ ಐಐಟಿ ಅಗತ್ಯವಿದೆಯಾ?

By ಮಹೇಶ ಗಜಬರ, ಬೆಂಗಳೂರು
|
Google Oneindia Kannada News

ಕರ್ನಾಟಕದಲ್ಲಿ ಮೊಟ್ಟಮೊದಲ ಐಐಟಿ ಸ್ಥಾಪನೆಯಾಗುತ್ತಿರುವುದು ಬಹುದಿನಗಳ ಕನಸು ಈಡೇರಿದಂತಾಗಿದೆ. ಇದು ಎಲ್ಲಿ ಸ್ಥಾಪನೆಯಾಗಬೇಕು ಎಂಬ ಬಗ್ಗೆ ಕೂಡ ಭಾರೀ ಚರ್ಚೆ ನಡೆದಿದೆ. ಎಲ್ಲೇ ಸ್ಥಾಪನೆಯಾಗಲಿ, ಅದರಿಂದ ರಾಜ್ಯಕ್ಕೆ ಆಗುವ ಲಾಭವಾದರೂ ಏನು? ಐಐಟಿಯಿಂದ ಕನ್ನಡಿಗರಿಗೆ ಎಷ್ಟು ಪ್ರಯೋಜನವಾಗಲಿದೆ? ಅಸಲಿಗೆ ರಾಜ್ಯಕ್ಕೆ ಐಐಟಿಯ ಅಗತ್ಯವಾದರೂ ಇದೆಯಾ? ಈ ಕುರಿತು ಕನ್ನಡಿಗ ಮಹೇಶ್ ಗಜಬರ ಅವರು ಚಿಂತನಾತ್ಮಕ ಲೇಖನ ಬರೆದಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನೂ ಇಲ್ಲಿ ತಿಳಿಸಿ.

ಕರ್ನಾಟಕ ಸರ್ಕಾರದ ಬಹುದಿನದ (ಬಹುವರ್ಷಗಳ) ಬೇಡಿಕೆಯಾದ ರಾಜ್ಯದಲ್ಲೇ ಒಂದು ಐ.ಐ.ಟಿ​ ಸ್ಥಾಪನೆ ಈಗ ಈಡೇರಿದೆ. ಇದರ ಹಿನ್ನೆಲೆಯಲ್ಲಿಯೇ ಅದು ಎಲ್ಲಿ ಸ್ಥಾಪನೆ ಆಗಬೇಕು ಅನ್ನುವ ಬಿಸಿಬಿಸಿ ಚರ್ಚೆ ಈಗ ರಾಜಕೀಯ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ನಡೆಯುತ್ತಿದೆ. ಆದ್ರೆ ಇವೆಲ್ಲಕಿಂತ ಮೊದಲು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ನಿಜವಾಗಿಯೂ ನಮಗೆ (ಕರ್ನಾಟಕ್ಕೆ) ಐ.ಐ.ಟಿ ಅಗತ್ಯವೇ? ಮತ್ತು ಅದರಿಂದ ನಮಗೇನಾದರೂ ಉಪಯೋಗವಿದೆಯೇ? ಅದೆಲ್ಲವನ್ನು ಕಂಡು ಹಿಡಿಯುವ ಚಿಕ್ಕ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ.

Mahesh Gajabar, Bengaluru

ಭಾರತದಲ್ಲಿ ಎಷ್ಟು ಐಐಟಿಗಳಿವೆ? : IITಗಳ ಸ್ಥಾಪನೆಯ ಉದ್ದೇಶದ ಇತಿಹಾಸಕ್ಕೆ ಹೋಗೋದಾದ್ರೆ ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಕೈಗಾರಿಕಾ ಮತ್ತು ತಂತ್ರಜ್ಞಾನ ಅಭಿವೃದ್ದಿಗಾಗಿ ಭಾರತದಲ್ಲಿ ಅತ್ಯುನ್ನತ ತರಬೇತಿ ಸಂಸ್ಥೆಗಳ ಅಗತ್ಯತೆ ಹಿನ್ನೆಲೆಯಲ್ಲಿ ನೆಹರೂ ಸರ್ಕಾರ ಹಂತಹಂತವಾಗಿ 5 ಐಐಟಿಗಳನ್ನು ಸ್ಥಾಪಿಸಿತು. ಈಗ ಸದ್ಯ ಭಾರತದಲ್ಲಿ ಮೂಲ ಐಐಟಿಗಳು, ಹೊಸದಾಗಿ ಸ್ಥಾಪಿಸಿದ ಐಐಟಿಗಳು ಮತ್ತು ಐಐಟಿ ದರ್ಜೆಗೆ ಏರಿಸಲ್ಪಟ್ಟ ಸೇರಿ ಒಟ್ಟು 16 ಐಐಟಿಗಳಿವೆ. ಕಳೆದ ಬಜೆಟ್ನಲ್ಲಿ ಘೋಷಿಸಿದ 5 ಮತ್ತು ಈ ಬಜೆಟ್ನಲ್ಲಿ ಘೋಷಿಸಿದ ಎರಡು (ಹೊಸದಾಗಿ ಒಂದು ಮತ್ತು ISM, ಧನಬಾದ್ ಅನ್ನು ಐಐಟಿಗೆ ಮೇಲ್ದರ್ಜೆಗೆ) ಸೇರಿ ಒಟ್ಟು 23 ಐಐಟಿಗಳು ಆಗುತ್ತವೆ. ಇಲ್ಲಿ ಪ್ರವೇಶಕ್ಕಾಗಿ B.Tech ಹಂತದಲ್ಲಿ ಐಐಟಿ-JEE, M.ech, M.Sಗಳಿಗಾಗಿ GATE ಮತ್ತು PhDಗಾಗಿ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ನಡೆಸಲ್ಪಡುತ್ತದೆ. ಈ ಐಐಟಿಗಳೆಲ್ಲವೂ ಕೇಂದ್ರ ಸರ್ಕಾರದ MHRD ಅಡಿಯಲ್ಲಿ ಬರುತ್ತವೆ ಮತ್ತು ಯಾವ ರಾಜ್ಯಕ್ಕೂ ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ. [Poll : ಕರ್ನಾಟಕದಲ್ಲಿ ಐಐಟಿ ಎಲ್ಲಿರಬೇಕು?]

ಈ ಐಐಟಿಗಳ ಜೊತೆಯಲ್ಲಿ ಅರವತ್ತರ ದಶಕಕಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಆಗಿದ್ದು, ರಾಜ್ಯಕ್ಕೆ ಒಂದರಂತೆ ಐಐಟಿ ಮಾದರಿಯ Regional Engineering College(REC)ಗಳ ಸ್ಥಾಪನೆ. ಐಐಟಿ ಪ್ರವೇಶಕ್ಕಾಗಿ ಅಖಿಲ ಭಾರತ ಮಟ್ಟದ ಪರೀಕ್ಷೆ ಎದುರಿಸಿ ಇತರೆ ರಾಜ್ಯದವರೊಂದಿಗೆ ಗುದ್ದಾಡಿ ಸ್ಥಾನ ಗಿಟ್ಟಿಸೋದರಲ್ಲಿ ಇವತ್ತಿಗೂ ನಮ್ಮ ರಾಜ್ಯದವರೂ ಹಿಂದಿದ್ದಾರೆ. ಐಐಟಿ ಪ್ರವೇಶ ಪಡೆಯಲಾಗದವರಿಗಾಗಿ RECಗಳು ವರದಾನವಾಗಿ ಬಂದವು. ಈ RECಗಳಲ್ಲಿ ಪದವಿ ಹಂತದ ಪ್ರವೇಶ ರಾಜ್ಯ ಮಟ್ಟದಲ್ಲೇ ನಡೆಯುತ್ತಿತ್ತು. ಶೇ.90%ರಷ್ಟು ಸೀಟುಗಳು ಆಯಾ ರಾಜ್ಯದವರಿಗೆ ಮೀಸಲಾಗಿದ್ದವು. ನಮ್ಮ REC ಸುರತ್ಕಲ್‌ಗಾಗಿ ನಮ್ಮವರು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಮಾತ್ರ ಎದುರಿಸಬೇಕಾಗಿತ್ತು. [ಐಐಟಿ ಎಲ್ಲಿ ಸ್ಥಾಪನೆ ಆಗಬೇಕು? ಉತ್ತರ ಸಿಕ್ಕಿದೆ!]

ಆದ್ರೆ 2003ರಿಂದ MHRD ಈ ವ್ಯವಸ್ಥೆಯನ್ನು ಬದಲಿಸಿ ಎಲ್ಲ RECಗಳನ್ನೂ (National Institute of Technology) ಎಂದೂ ನಾಮಕರಣ ಮಾಡಿ AIEEE ಎಂಬ ಅಖಿಲ ಭಾರತ ಮಟ್ಟದ ಪರೀಕ್ಷೆಯನ್ನು ಜಾರಿಗೆ ತಂದಿತು. ಇದರಿಂದಾಗಿ ಸುರತ್ಕಲ್ ನಮ್ಮ CET ವ್ಯವಸ್ಥೆಯಿಂದ ಹೊರಗೆ ಹೋಯಿತು. ಇದರ ಜೊತೆಗೆ ಸೀಟುಗಳ ಹಂಚಿಕೆಯಲಿ ಮಾರ್ಪಾಡು ಮಾಡಲಾಯಿತು. ಶೇ. 75ರಷ್ಟು ಸೀಟುಗಳು ಮಾತ್ರ ಆಯಾ ರಾಜ್ಯಕ್ಕೆ ಮೀಸಲು. ಇನ್ನುಳಿದ ಶೇ. 25ರಲ್ಲಿ ಉಳಿದ ರಾಜ್ಯದವರಿಗೆ ಅವ್ರ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ಮೀಸಲು ಇಡಲಾಯಿತು. ಬರಬರುತ್ತ ಅದು ಶೇ. 50 ರಾಜ್ಯಕ್ಕೆ ಮತ್ತು ಶೇ. 50ರಷ್ಟು ಅಖಿಲ ಭಾರತ ಮಟ್ಟಕ್ಕೆ ಅಂತ ಆಯಿತು. ಈ ವ್ಯವಸ್ಥೆಯಿಂದ ನಾವು ಸುರತ್ಕಲ್‌ನಲ್ಲಿ ಸ್ಥಾನಗಳನ್ನು ಕಳೆದುಕೊಂಡರು ಬೇರೆ ಎನ್ಐಟಿಗಳಲ್ಲಿ ನಮ್ಮವರಿಗೆ ಅಂತಾನೆ ಫಿಕ್ಸೆಡ್ ಸೀಟುಗಳು ಮೀಸಲು ಇದ್ದವು. [ಧಾರವಾಡದಲ್ಲಿ ಐಐಟಿಗೆ 500 ಎಕರೆ: ಗುಂಡೂರಾವ್]

ಉದಾಹರಣೆಗೆ ಎನ್ಐಟಿ, Calicutನಲ್ಲಿ 27, ಎನ್ಐಟಿ, ತ್ರಿಚ್ಚಿನಲ್ಲಿ 29. ಹಾಗಾಗಿ ನಮ್ಮವರಿಗೆ ಎನ್ಐಟಿ ಪ್ರವೇಶ ಅಷ್ಟೊಂದು ಕಷ್ಟವೇನೂ ಆಗಿರಲಿಲ್ಲ. ಆದ್ರೆ 2008ರಲ್ಲಿ ಮತ್ತೆ ಪ್ರವೇಶ ಮೀಸಲಾತಿಯಲ್ಲಿ ಸಮಗ್ರ ಬದಲಾವಣೆ ತರಲಾಯಿತು. ಇದರಂತೆ ಶೇ. 50% ರಾಜ್ಯದ ಪಾಲನ್ನು ಉಳಿಸಿ ಇನ್ನುಳಿದ ಶೇ 50ರಷ್ಟನ್ನು ಅಖಿಲ ಭಾರತ ಮಟ್ಟಕ್ಕೆ ಮುಕ್ತಗೊಳಿಸಲಾಯಿತು. ಇದರರ್ಥ NI-Calicut, ಎನ್ಐಟಿ-ತ್ರಿಚ್ಚಿ ಮತ್ತು ಇತರೆ ಎನ್ಐಟಿಗಳಲ್ಲಿ ನಮಗಿದ್ದ ಸೀಟುಗಳನ್ನು ತೆಗೆದು ಹಾಕಿ ಆ ಸ್ಥಾನ ಪಡೆಯಲು ನಮ್ಮವರು ಇತರೆ ಎಲ್ಲರೊಂದಿಗೆ ಸ್ಪರ್ಧಿಸುವಂತೆ ಮಾಡಲಾಯಿತು. 2007ರಲ್ಲಿ 27 ಕನ್ನಡಿಗರು ಎನ್ಐಟಿ -ಕ್ಯಾಲಿಕಟ್‌ನಲ್ಲಿ ಪ್ರವೇಶ ಪಡೆದಿದ್ದರು. ಆದ್ರೆ 2008ರಲ್ಲಿ ಬದಲಾದ ಪ್ರವೇಶ ನೀತಿಯಲ್ಲಿ ಅದು ಕೇವಲ 3ಕ್ಕೆ ಇಳಿಯಿತು. ಆ ವರ್ಷದಿಂದ ಇತರೆ ಎನ್ಐಟಿಗಳಲ್ಲಿ ನಮ್ಮ ಪಾಲು ಹೇಳಿಕೊಳ್ಳೋ ಅಂತಹದೇನಿಲ್ಲ. ಐಐಟಿಗಳಲ್ಲಿ ಕನ್ನಡಿಗರ ಸಂಖ್ಯೆ ಎನ್ಐಟಿಗಳಿಗಿಂತ ಏನೂ ಭಿನ್ನವಾಗಿಲ್ಲ. [ಐಐಟಿ ಹಾಸನದಲ್ಲಿ ಸ್ಥಾಪನೆಯಾಗಬೇಕು ಅಂದ್ರು ಗೌಡ್ರು]

ಬೀಳುವ ಹೊರೆ ಮತ್ತು ಪ್ರಯೋಜನ : ಇದೆಲ್ಲದಕ್ಕೂ ನಾನು ಯಾಕೆ ಪೀಠಿಕೆ ಹಾಕಬೇಕಾಯಿತೆಂದರೆ ಐಐಟಿ ಮತ್ತು ಎನ್ಐಟಿಗಳಲ್ಲಿ ಇರುವ ಕನ್ನಡಿಗರ ಸಂಖ್ಯೆಯ ಒಂದು ಅಂದಾಜು ನಿಮಗೆ ಕೊಡಲು. ಈಗ ಕರ್ನಾಟಕದಲ್ಲಿ ಹೊಸದಾಗಿ ಸ್ಥಾಪನೆಯಾಗಲಿರುವ ಐಐಟಿಯ ವಿಷಯದತ್ತ ಬರೋಣ. ಅದು ಎಲ್ಲಿ ಸ್ಥಾಪನೆ ಆಗಬೇಕು ಅನ್ನುವುದು ಆಮೇಲಿನ ವಿಷಯ. ಮೊದಲು ಅದು ಸ್ಥಾಪನೆ ಆಗೋದಕ್ಕೆ ನಮ್ಮ ಮೇಲೆ ಬೀಳುವ ಹೊರೆಯನ್ನು ಮತ್ತು ಪ್ರಯೋಜನದತ್ತ ಗಮನಹರಿಸೋಣ. ಒಂದು ಎನ್ಐಟಿ ಆಗಲಿ ಅಥವಾ ಐಐಟಿ ಆಗಲಿ ಸ್ಥಾಪಿಸೋದಕ್ಕೆ ಕನಿಷ್ಠ ಪಕ್ಷ 350-400 ಎಕರೆ ಜಮೀನು ಬೇಕು. ಯಾಕೆಂದರೆ ಅದು ವಿದ್ಯಾರ್ಥಿ ಮತ್ತು ಉಳಿದ ಎಲ್ಲ ಸಿಬ್ಬಂದಿ ವರ್ಗಕ್ಕೆ ವಸತಿ ಸೌಲಭ್ಯವನ್ನು ಒಳಗೊಂಡಿರುತ್ತದೆ. MHRDಯೇ ಇಲ್ಲಿ ಐಐಟಿಯನ್ನು ಸ್ಥಾಪಿಸುವುದಾದರು ಕೂಡ ನಮ್ಮ ರಾಜ್ಯ ಸರ್ಕಾರ ಅದಕ್ಕೆ ರಿಯಾಯತಿ ದರದಲ್ಲಿ ಆಥವಾ ಪುಕ್ಕಟೆ ರೂಪದಲ್ಲಿಯೇ ಅಷ್ಟು ದೊಡ್ಡ ಮಟ್ಟದ ಜಮೀನನ್ನು ಒದಗಿಸಿಕೊಡಬೇಕಾಗುತ್ತದೆ.

ಇದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಆದಾಯವಿಲ್ಲ. ಹೋಗಲಿ ಕನ್ನಡಿಗರಿಗೆ ಏನಾದರೂ ಸಿಗುತ್ತದಯೇ ಎಂದೂ ನೋಡಿದ್ರೆ, ಈಗಾಗಲೇ ನಾನು ಹೇಳಿದಂತೆ ಅಲ್ಲಿ ಪ್ರವೇಶ ಪಡೆಯುವ ಕನ್ನಡಿಗರ ಸಂಖ್ಯೆ ಮತ್ತದೇ ಬೆರಳೆಣಿಕೆಷ್ಟು ಇರುತ್ತದೆ. ಭೋದಕ ಸಿಬ್ಬಂದಿ ಕೂಡ ಅಖಿಲ ಭಾರತ ಮಟ್ಟದಿಂದಲೇ ಬರುತ್ತಾರೆ. ಎಲ್ಲ ಎನ್ಐಟಿ ಮತ್ತು ಐಐಟಿಗಳ ಆಡಳಿತ ಆಯಾ ಸಂಸ್ಥೆಯ ನಿರ್ದೇಶಕರುಗಳಿಂದ ನಡೆಯುತ್ತದೆ. ಬಹುತೇಕ ಸಂಸ್ಥೆಗಳಲ್ಲಿ ಈ ನಿರ್ದೇಶಕರು ತಮಗೆ ಬೇಕಾದವರನ್ನು ಮತ್ತು ಹೆಚ್ಚಾಗಿ ತಮ್ಮ ರಾಜ್ಯದವರನ್ನೇ ಸಿಬ್ಬಂದಿ ವರ್ಗದಲ್ಲಿ ತುಂಬುತ್ತಾರೆ. D ದರ್ಜೆಯ ಹುದ್ದೆಗಳಿಗೂ ಬಹಳಷ್ಟು ಸಲ ತಮ್ಮ ರಾಜ್ಯದವರನ್ನೇ ವಲಸೆ ತಂದು ತುಂಬುತ್ತಾರೆ. ಹಾಗಾಗಿ ನಮ್ಮ ರಾಜ್ಯದವರಿಗೆ ಚೊಂಬೇ ಗತಿ.

ಕರ್ನಾಟಕದ ಜುಟ್ಟಿಗೆ ಮಲ್ಲಿಗೆ : ಹೋಗಲಿ, ಈ ಸಂಸ್ಥೆಗಳಿಂದ ಏನಾದರೂ ಪೂರಕ ಉದ್ಯಮಗಳು ಆ ಸ್ಥಳಗಳ ಹತ್ತಿರ ಹುಟ್ಟಿವೆಯೆ ಎಂದೂ ನೋಡಿದಾಗ, ಅಲ್ಲೂ ನಿರಾಸೆಯೇ ಕಾಣುತ್ತೆ. ಕೇವಲ ಮುಂಬೈ ಮತ್ತು ಇತರೆ ಕೆಲವು ಹಳೆಯ ಐಐಟಿ, ಎನ್ಐಟಿ ಗಳ ಸ್ಥಳಗಳಲ್ಲಿ ಕೈಗಾರಿಕೆಗಳು ಬಂದಿವೆ ಹೊರತು ಅಂಥಾ ದೊಡ್ಡ ಮಟ್ಟದಲ್ಲಿ ಏನೂ ಇಲ್ಲ. ಹಾಗಾಗಿ ಮುಂದೆ ಬರುವ ಐಐಟಿ ನಮಗೆ ಒಂದು ತರಹ ಜುಟ್ಟಿಗೆ ಮಲ್ಲಿಗೆ ಅನ್ನೋ ಹಾಗೆ. ನಮ್ಮ ರಾಜ್ಯ ಸರ್ಕಾರ ಭೂಮಿ ಒದಗಿಸಿಕೊಟ್ಟರೂ ಅದರ ಸ್ಥಾಪನೆಯ ಕೀರ್ತಿ ಹೋಗುವುದು ಮಾತ್ರ ಘನವೆತ್ತ ಕೇಂದ್ರ ಸರ್ಕಾರಕ್ಕೆ.

ಈಗಾಗಲೇ ನಮ್ಮಲ್ಲಿ IISc ಅಂತಹ ಸಂಸ್ಥೆ ಇದೆ. IIScಯಲ್ಲಿ ಕೂಡ M.Tech, MS, PhDಗಳಿಗಾಗಿ ಅಖಿಲ ಭಾರತ ಮಟ್ಟದ ಪರೀಕ್ಷೆ ಮತ್ತು ಸಂದರ್ಶನ ಎದುರಿಸಬೇಕು ಅನ್ನೋದು ನಿಜವಾದರೂ, ಆ ಸಂಸ್ಥೆ ನಮ್ಮ ರಾಜ್ಯದ BE ಮತ್ತು M.Tech ವಿದ್ಯಾರ್ಥಿಗಳಿಗೆ ಒಂದು ರೀತಿಯಲ್ಲಿ ಉಪಯೋಗಕಾರಿಯಾಗಿದೆ. ನಮ್ಮ ರಾಜ್ಯದ ಹಲವು BE ಮತ್ತು M.Tech ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ವರ್ಕ್ ಅನ್ನು IIScಯಲ್ಲಿ ಮಾಡಲು ಅವಕಾಶ ಇದೆ. ರಿಸರ್ಚ್ ಅಸಿಸ್ಟೆಂಟ್ ಅಂತ ಬಹಳಷ್ಟು ಕನ್ನಡಿಗರಿಗೆ ಅಲ್ಲಿ ಅವಕಾಶ ಸಿಕ್ಕಿದೆ. ಅದೇ ಮುಂಬರುವ ಐಐಟಿಯಲ್ಲಿ ಹೊರಗಿನವರಿಗೆ (ಆ ಐಐಟಿಗೆ ಸಂಬಂಧ ಪಡದವರಿಗೆ) ಕಾಲಿಡಲು ಬಿಡುವುದಿಲ್ಲ.

ನಮ್ಮ ವಿವಿಗಳನ್ನೇ ಉತ್ತಮಪಡಿಸಿ : ಇದೇ ಐಐಟಿ ಬದಲಾಗಿ ನಮ್ಮ ರಾಜ್ಯಕ್ಕೆ ಒಂದು AIIMS ಬಂದಿದ್ರೆ ಬಹಳ ಪ್ರಯೋಜನವಾಗುತ್ತಿತ್ತು. ಕನಿಷ್ಠ 300 ಹಾಸಿಗೆಯ ಅತ್ಯುನ್ನತ ಆರೋಗ್ಯ ಸೌಲಭ್ಯವಾದರೂ ನಮ್ಮ ರಾಜ್ಯಕ್ಕೆ ಸಿಗುತ್ತಿತ್ತು. ಇನ್ನು ರಾಜ್ಯ ಸರ್ಕಾರ ಆ ಪ್ರಯೋಜನವಿಲ್ಲದ ಐಐಟಿಗಿಂತಲೂ ಮಾಡಬೇಕಾದ ಬಹಳ ದೊಡ್ಡ ಕಾರ್ಯಗಳು ಇನ್ನೂ ಹಾಗೆಯೇ ಇವೆ. ಈ ಐಐಟಿ ಮತ್ತು ಎನ್ಐಟಿಗಳೂ ಸ್ಥಾಪನೆ ಆಗುವುದಕ್ಕಿಂತಲೂ ಮುಂಚೆ ನಮ್ಮಲ್ಲಿ ಅದಕ್ಕಿಂತಲೂ ಪ್ರಸಿದ್ದವಾದ UVCE(1917) ಮತ್ತು UBDT (1951) ಅಂತಹ ಕಾಲೇಜುಗಳು ನಮ್ಮಲ್ಲಿ ಇವೆ. ಇವೆರಡೂ ತಾಂತ್ರಿಕ ಶಿಕ್ಷಣ ಕಾಲೇಜುಗಳು ತಮ್ಮದೇ ಆದ ಮಹತ್ವದ ಕೊಡುಗೆಯನ್ನು ನೀಡಿವೆ.

ನಾನು ಕೂಡ ಇದೇ UVCEಯ ಹಳೆ ವಿದ್ಯಾರ್ಥಿ ಅನ್ನುವ ಅಭಿಮಾನ ನನಗೆ ಇದೆ. ವಿಶ್ವೇಶ್ವರಯ್ಯನವರ ಕನಸಾದ ಮತ್ತು 98 ವರ್ಷಗಳನ್ನು ಪೂರೈಸಿ ಇನ್ನೇನು ಶತಮಾನೋತ್ಸವ ಆಚರಿಸರಿಸಲಿರುವ UVCEಯ ಕಟ್ಟಡ ಯಾವ ಭೂತ ಬಂಗಲೆಗೂ ಕಡಿಮೆ ಇಲ್ಲ. ಅದರ ವಸತಿ ನಿಲಯಕ್ಕೂ ಮತ್ತು ಕುರಿದೊಡ್ದಿಗೂ ಯಾವುದೇ ವ್ಯತ್ಯಾಸ ಇಲ್ಲ. ಆ ಕಾಲೇಜಿನಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇದೇ UVCE ಮತ್ತು UBDT ಗಳನ್ನೂ ಸುಧಾರಿಸಿ ಎನ್ಐಟಿ, ಐಐಟಿ ಮಟ್ಟಕ್ಕೆ ಒಯ್ದು ರಾಜ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡೋ ಬದಲಾಗಿ ನಮ್ಮ ರಾಜ್ಯ ಸರ್ಕಾರ ನಮ್ಮವರಿಗೆ ಕೆಲಸಕ್ಕೆ ಬಾರದ ಐಐಟಿಗೆ ಪುಕ್ಸಟೆ ಸೌಲಭ್ಯ ಕೊಡಲು ಹೊರಟಿದೆ.

ಹೇಗೂ ಐಐಟಿ ನಮ್ಮಲ್ಲಿ ಸ್ಥಾಪನೆ ಆಗಲಿದೆ. ಅದು ಧಾರವಾಡದಲ್ಲಿ ಆದ್ರೆ ಒಳ್ಳೆಯದು ಎಂದೂ ನನ್ನ ಭಾವನೆ. ಬೆಂಗಳೂರು ಮತ್ತು ಪುಣೆ, ಮುಂಬೈನೊಂದಿಗೆ ಒಳ್ಳೆಯ ಸಂಪರ್ಕ ವ್ಯವಸ್ಥೆ ಹೊಂದಿರುವುದರಿಂದ, ರಾಜ್ಯದ ಒಳ್ಳೆಯ ಶಿಕ್ಷಣ ಕೇಂದ್ರವಾಗಿರುವುದರಿಂದ ಮತ್ತು ಮುಂದೆ ಅಲ್ಲಿ IT ಮತ್ತು ಇತರೆ ಉದ್ಯಮ ಬರೋದಕ್ಕೆ ಅದು ಪೂರಕವಾಗುವುದರಿಂದ ಅದು ಧಾರವಾಡದಲ್ಲೇ ಸ್ಥಾಪನೆ ಆಗಲಿ.

English summary
Union government has come forward to establish Indian Institute of Technology (IIT) in Karnataka. Debate is going on as to where this should be established in Karnataka. But, in reality, do we need IIT? What are the advantages and disadvantages? Mahesh Gajabar, an alumni of UVCE Bengaluru does a reality check.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X