ಅಸಮಾಧಾನ ಕಿಚ್ಚು; ಬೊಮ್ಮಾಯಿಗೆ ಜವಾಬ್ದಾರಿ ನೀಡಿದರೆ ಬಿಜೆಪಿ ಮತ್ತೆ ನೆಲ ಕಚ್ಚುವುದು ಖಚಿತ; ಎಸ್.ಲಿಂಗಮೂರ್ತಿ
ಬೆಂಗಳೂರು , ಜುಲೈ 31: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಬಹಿರಂಗವಾಗಿಯೇ ಸ್ವಪಕ್ಷದ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.
ಹೌದು, ಮೂರು ವರ್ಷಗಳ ಕಾಲ ಆಡಳಿತ ನಡೆಸಿದ್ದ ರಾಜ್ಯ ಬಿಜೆಪಿ 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದು, ಸೋಲಿನ ಕುರಿತು ಹಲವು ವಿಮರ್ಶೆಗಳು ನಡೆದಿದ್ದು, ಹಲವು ಬಿಜೆಪಿ ನಾಯಕರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ದ ಹಲವು ನಾಯಕರು ಅಸಮಾಧಾನವನ್ನ ಹೊರಹಾಕಿದ್ದು, ಸದ್ಯ ಚುನಾವಣಾ ಫಲಿತಾಂಶ ಪ್ರಕಟಗೊಂಡು ಎರಡು ತಿಂಗಳಾದರೂ ವಿರೋಧ ಪಕ್ಷದ ನಾಯಕ ಆಯ್ಕೆ ವಿಳಂಬವಾಗುತ್ತಿದ್ದು, ಸೂಕ್ತ ನಾಯಕನ ಹುಡುಕಾಟವನ್ನ ಬಿಜೆಪಿ ಹೈಕಮಾಂಡ್ ನಡೆಸಿದೆ.

ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಆಯ್ಕೆ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್ ಚಿಂತನೆಯನ್ನ ನಡೆಸಿದ್ದು, ವಿಪಕ್ಷ ಸ್ಥಾನಕ್ಕಾಗಿ ಈಗಾಗಲೇ ಹಲವು ನಾಯಕರು ರೇಸ್ ನಲ್ಲಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಈ ರೇಸ್ ನಲ್ಲಿದ್ದಾರೆ.
ಇತ್ತ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಹವರಿಗೆ ಜವಾಬ್ದಾರಿ ನೀಡಿದರೆ ಬಿಜೆಪಿ ಮತ್ತೆ ನೆಲಕಚ್ಚುವುದು ಖಚಿತ ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್. ಲಿಂಗಮೂರ್ತಿ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.
ಇನ್ನೂ ಬಜೆಟ್ ಅಧಿವೇಶನಕ್ಕೂ ಮುನ್ನವೇ ವಿಪಕ್ಷ ನಾಯಕನ ಆಯ್ಕೆಯಾಗಲಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತಿಳಿಸಿತ್ತು. ಆದರೇ ವಿಪಕ್ಷ ನಾಯಕನಿಲ್ಲದೇ ಬಜೆಟ್ ಅಧಿವೇಶನ ಮುಕ್ತಾಯವಾಗಿದ್ದು, ಸದ್ಯ ವಿಪಕ್ಷ ಸ್ಥಾನದ ಪೈಪೋಟಿಯಲ್ಲಿ ಬಸವರಾಜ್ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿದೆ. ಪಕ್ಷದ ನಾಯಕರು ಬೊಮ್ಮಾಯಿ ಕಡೆ ಬೆರಳು ತೋರಿಸಿದರೆ, ಕಾರ್ಯಕರ್ತರು ಯತ್ನಾಳ್ ಪರ ಬ್ಯಾಟ್ ಬೀಸುತ್ತಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಹಾಗೂ ಹೊಸದುರ್ಗ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್. ಲಿಂಗಮೂರ್ತಿಟ್ವೀಟರ್ ಮೂಲಕ ಅಸಮಾಧಾನವನ್ನ ಹೊರಹಾಕಿದ್ದು, ಈಗಾಗಲೆ ಕರ್ನಾಟಕ ರಾಜ್ಯದಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಪಕ್ಷ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಂತಹ ವ್ಯಕ್ತಿಗಳಿಗೆ ಜವಾಬ್ದಾರಿ ಕೊಟ್ಟರೆ ಮತ್ತೆ ನೆಲ ಕಚ್ಚುವುದು ಖಚಿತ ಎಂದು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications