2028ರ ಚುನಾವಣೆ ಗೆಲ್ಲೋದು ಹೇಗೆ ಗೊತ್ತು: ‘ನಾನು ಫುಟ್ಬಾಲ್ ಆಟಗಾರನಲ್ಲ, ಚೆಸ್ ಆಟಗಾರ’ ಎಂದ ಡಿಕೆಶಿ
ಬೆಂಗಳೂರು: 2028ರ ವಿಧಾನಸಭಾ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಚೆಸ್ ಆಟಕ್ಕೆ ಹೋಲಿಕೆ ಮಾಡುವ ಮೂಲಕ ಪ್ರತಿಪಕ್ಷಗಳಿಗೆ ಪರೋಕ್ಷ ಸಂದೇಶ ನೀಡಿದ್ದಾರೆ.
ವಿಧಾನಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು. 2028ರ ಚುನಾವಣೆ ಹೇಗೆ ಎದುರಿಸಬೇಕು ನನಗೆ ಗೊತ್ತಿದೆ. ನಾನು ಫುಟ್ಬಾಲ್ ಆಡುವವನಲ್ಲ, ಚೆಸ್ ಆಡುವವನು. ಜನರ ಸೇವೆ ಮಾಡುವಾಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಇಲ್ಲಿ ಯಾರೂ ಶಾಶ್ವತವಲ್ಲ. ನಾವು ವಿರೋಧ ಪಕ್ಷಕ್ಕೆ ಹೋಗಬಹುದು, ವಿರೋಧ ಪಕ್ಷದವರು ಇಲ್ಲಿಗೆ ಬರಬಹುದು.

ಜನರು ನಮ್ಮೆಲ್ಲರನ್ನು ಆಯ್ಕೆ ಮಾಡಿರುವುದು ರಾಜ್ಯದ ಹಿತ ಕಾಪಾಡಲು. ಸಭಾಧ್ಯಕ್ಷರ, ಸ್ಥಾನದಲ್ಲಿ ಕುಳಿತಿರುವ ಟಿ ಬಿ ಜಯಚಂದ್ರ ಅವರು ಹಿರಿಯರು. ಆ ಸ್ಥಾನದ ಮಹಿಮೆ ದೊಡ್ಡದು. ಅದನ್ನು ಅಲಂಕರಿಸಿದ ಕೃಷ್ಣ ಅವರು ಸಿಎಂ ಆದರು, ಅಲ್ಲಿ ಕುಳಿತಿದ್ದ ಜಗದೀಶ್ ಶೆಟ್ಟರ್ ಅವರು ಸಿಎಂ ಆದರು. ಖಾದರ್ ಅವರು ಅಲ್ಲಿ ಕೂತು ಈಗ ಡಬಲ್ ಇಲಾಖೆ ಧಮಾಕದೊಂದಿಗೆ ಇಲ್ಲಿ ಕೂತಿದ್ದಾರೆ. ಎಲ್ಲರೂ ಭರವಸೆಯಿಂದ ಇರೋಣ ಎಂದರು.
ಈ ಸದನಕ್ಕೆ ನಮ್ಮ ಸಚಿವರನ್ನು ವಿರೋಧ ಪಕ್ಷದವರಿಗೆ ಪರಿಚಯಿಸಬೇಕು ಎಂಬುದು ನಮ್ಮ ಆಸೆ. ಆದರೆ ಅವರು ಇಲ್ಲಿ ಇಲ್ಲ. ಟಿವಿ ಮೂಲಕ ಇದನ್ನು ನೋಡುತ್ತಿರಬಹುದು ಎಂದು ತಮ್ಮ ಸಚಿವರನ್ನು ಸದನಕ್ಕೆ ಪರಿಚಯಿಸಿದರು.
ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಹೊಸ ಆಲೋಚನೆ, ಭರವಸೆ, ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ನಮ್ಮ ಶಾಸಕರು, ವಿರೋಧ ಪಕ್ಷದ ಶಾಸಕರು, ನಾಯಕರು, ನಮ್ಮ ಸಚಿವ ಸಂಪುಟದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಕರೆ ನೀಡಿದರು.
ಜೂನ್ 3ರಂದು ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚರ್ಚೆ ಮಾಡಿ 139 ಶಾಸಕರ ಬೆಂಬಲದೊಂದಿಗೆ ನನ್ಮನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ಹಿಂದೆ ಅನೇಕ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಕಳೆದ 3 ವರ್ಷಗಳಿಂದ ಸಿದ್ದರಾಮಯ್ಯ ಅವರು ಸಿಎಂ ಆಗಿ ನಾನು ಡಿಸಿಎಂ ಆಗಿ ಕೆಲಸ ಮಾಡಿದ್ದೆವು. ಇದು ಅದರ ಮುಂದುವರಿದ ಸರ್ಕಾರ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಜನರು ವಿವಿಧ ರೀತಿಯಲ್ಲಿ ಏನೇ ತೀರ್ಮಾನ ಮಾಡಿದ್ದರೂ ನಾವು ಒಪ್ಪಬೇಕು. ಆದರೆ ಈಗ ನನಗೆ ಸಿಕ್ಕಿರುವ ಅವಕಾಶದಲ್ಲಿ 224 ಶಾಸಕರೂ ನನ್ನ ದೃಷ್ಟಿಯಲ್ಲಿ ಒಂದೇ. ನಾನು ಈ ಸ್ಥಾನದಲ್ಲಿ ಕೂತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ ಎಂದರು.
ನಮ್ಮ ರಾಜಕಾರಣ ಏನೇ ಇದ್ದರು ರಸ್ತೆಯಲ್ಲಿರಲಿ. ನನಗೆ ಎಲ್ಲರೂ ಒಂದೇ. ಹಳೆಯದನ್ನೆಲ್ಲಾ ಮರೆತು, ಹೊಸ ಪಯಣದಲ್ಲಿ ಸಾಗೋಣ. ಇಡಿ ಪ್ರಪಂಚ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕ ಮುಖೇನ ನೋಡುತ್ತಿದೆ. ನಮ್ಮಲ್ಲಿರುವ ಜ್ಞಾನ, ಪ್ರತಿಭೆ, ಮಾನವ ಸಂಪನ್ಮೂಲ, ಪ್ರಕೃತಿ ಸಂಪತ್ತು ಬೇರೆ ರಾಜ್ಯಗಳಲ್ಲಿ ಇಲ್ಲ ಎಂದರು.
ವಿರೋಧ ಪಕ್ಷದ ವಿರೋಧ ಸರಿಯಲ್ಲ
ಸಭಾಧ್ಯಕ್ಷರ ಪೀಠ ವೈಯಕ್ತಿಕ ಸ್ಥಾನವಲ್ಲ. ನಮ್ಮ ಪಕ್ಷದ ನಾಯಕರು ಈ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಸೂಚಿಸಿದ್ದಾರೆ ಹೊರತು ಅವರನ್ನೇ ಸಭಾಧ್ಯಕ್ಷರನ್ನಾಗಿ ಘೋಷಣೆ ಮಾಡಿಲ್ಲ. ಇದಕ್ಕೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಪೀಕರ್ ಆದವರು ಪಕ್ಷಾತೀತತರು. ಎಲ್ಲರ ಮಾತಿಗೂ ಕಿವಿಗೊಡಬೇಕು. ಹೀಗಾಗಿ ವಿರೋಧ ಪಕ್ಷದವರು ವಿರೋಧ ಮಾಡುವುದನ್ನು ಬಿಟ್ಟು ಸಭಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸಬೇಕಿತ್ತು. ವಿರೋಧ ಮಾಡುವುದು ಅವರ ಘನತೆಗೆ ತಕ್ಕದಲ್ಲ ಎಂದು ಅಭಿಪ್ರಾಯಪಟ್ಟರು.


Click it and Unblock the Notifications
